ಕರಾಚಿ(ನ.24): ವೇಗವಾಗಿ ಬೌಲಿಂಗ್‌ ಮಾಡಲು ಡ್ರಗ್ಸ್‌ ತೆಗೆದುಕೋ ಎಂದು ಹಲವು ಬಾರಿ ನನಗೆ ಸೂಚಿಸಲಾಗುತಿತ್ತು. ಆದರೆ ನಾನ್ಯಾವತ್ತು ಕೃತಕ ಶಕ್ತಿವರ್ಧಕದ ಮೊರೆ ಹೋಗಿರಲಿಲ್ಲ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೊಯೆಬ್ ಅಖ್ತರ್ ಹೇಳಿದ್ದಾರೆ.

ವಿಶ್ವಕ್ರಿಕೆಟ್‌ನಲ್ಲಿ ಅತಿ ವೇಗದ ಬೌಲರ್ ಎಂದು ಹೆಸರು ಗಳಿಸಿದ್ದ ಅಖ್ತರ್, ವಾರ್ಷಿಕ್ ಡ್ರಗ್ಸ್‌ ನಾಶಗೊಳಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಡ್ರಗ್ಸ್‌ ಕುರಿತಂತೆ ಮಾತನಾಡಿದ್ದಾರೆ. ನಾನು ಕ್ರಿಕೆಟ್ ಆಡಲು ಶುರು ಮಾಡಿದ ಆರಂಭದಲ್ಲಿ, ನೀನು ಒಳ್ಳೆಯ ವೇಗದ ಬೌಲರ್ ಆಗಬೇಕಿದ್ದರೆ ಡ್ರಗ್ಸ್‌ ತೆಗೆದುಕೋ ಎಂದು ಸಲಹೆ ನೀಡುತ್ತಿದ್ದರು. ಆದರೆ ನಾನುಈ ಸಲಹೆಗಳನ್ನು ನಿರಾಕರಿಸುತ್ತಲೇ ಬಂದೆ ಎಂದು ಆ್ಯಂಟಿ-ನಾರ್ಕೋಟಿಕ್ ಪೋರ್ಸ್‌ ಉದ್ದೇಶಿಸಿ ಮಾತನಾಡಿದ್ದಾರೆ.

ಶೊಯೆಬ್ ಅಖ್ತರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಸರಿ ಸುಮಾರು ಒಂದು ದಶಕವೇ ಕಳೆದರೂ ಇಂದಿಗೂ ಅತಿ ವೇಗವಾಗಿ ಬೌಲಿಂಗ್ ಮಾಡಿದ ದಾಖಲೆ ಶೊಯೆಬ್ ಅಖ್ತರ್ ಹೆಸರಿನಲ್ಲಿದೆ. 2003ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪ್ರತಿ ಗಂಟೆಗೆ 161.3 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ವಿಶ್ವದಾಖಲೆ ಬರೆದಿದ್ದರು. ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ನಿಕ್‌ ನೈಟ್‌ ಎದುರು ಮೇಡನ್ ಸಹಿತ ವಿಶ್ವದಾಖಲೆಯ ವೇಗದ ಬೌಲಿಂಗ್ ಮಾಡಿ ಅಖ್ತರ್ ಗಮನ ಸೆಳೆದಿದ್ದರು.

ಕೊಹ್ಲಿ ಆಸೀಸ್‌ನಲ್ಲಿ ಅಬ್ಬರಿಸದಿದ್ರೆ, ಟೀಂ ಇಂಡಿಯಾಗೆ ಹೀನಾಯ ಸೋಲು ಖಚಿತ; ಕ್ಲಾರ್ಕ್

ಆ್ಯಂಟಿ-ನಾರ್ಕೋಟಿಕ್ ಪೋರ್ಸ್‌ ತಮ್ಮ ಸಾಮರ್ಥ್ಯ ಹಾಗೂ ಸೌಲಭ್ಯಗಳನ್ನು ಬಳಸಿಕೊಂಡು ಪಾಕಿಸ್ತಾನವನ್ನು ಡ್ರಗ್ಸ್‌ ಮುಕ್ತ ದೇಶವನ್ನಾಗಿಸಲು ಶಕ್ತಿಮೀರಿ ಶ್ರಮಿಸುತ್ತಿದೆ. ಕ್ರೀಡಾಚಟುವಟಿಕೆ, ವರ್ಕೌಟ್‌ ಹಾಗೂ ಆರೋಗ್ಯಕರ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಉತ್ತಮ ಭವಿಷ್ಯವಿದೆ ಎಂದು ಜನತೆಗೆ ಅಖ್ತರ್ ಕರೆ ಕೊಟ್ಟಿದ್ದಾರೆ.