ಕೊಹ್ಲಿ ಆಸೀಸ್‌ನಲ್ಲಿ ಅಬ್ಬರಿಸದಿದ್ರೆ, ಟೀಂ ಇಂಡಿಯಾಗೆ ಹೀನಾಯ ಸೋಲು ಖಚಿತ; ಕ್ಲಾರ್ಕ್
ವಿರಾಟ್ ಕೊಹ್ಲಿ ಅನುಪಸ್ಥಿಯಲ್ಲಿ ಟೀಂ ಇಂಡಿಯಾ ಆಘಾತಕಾರಿ ಸೋಲು ಕಾಣುವ ಸಾಧ್ಯತೆಯಿದೆ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ.
ಮೆಲ್ಬರ್ನ್(ನ.24): ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತವರಿಗೆ ಮರಳುವುದು ಖಚಿತವಾಗಿದೆ. ಡಿಸೆಂಬರ್ 17ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ ಪಿತೃತ್ವದ ರಜೆಯ ಮೇರೆಗೆ ತವರಿಗೆ ವಾಪಾಸಾಗಲಿದ್ದಾರೆ.
ಹೀಗಾಗಿ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯದ ಬಳಿಕ ಉಳಿದ ಮೂರು ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯಲಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಟೆಸ್ಟ್ ಸರಣಿ ಗೆಲ್ಲಬೇಕಿದ್ದರೆ ಕೊಹ್ಲಿ ಅನುಪಸ್ಥಿತಿಯಲ್ಲಿ ಎಲ್ಲಾ ಆಟಗಾರರು ಭಾರತ ತಂಡದ ಗೆಲುವಿಗೆ ಶಕ್ತಿಮೀರಿ ಹೋರಾಟ ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯದ ಬಳಿಕ ಆಸ್ಟ್ರೇಲಿಯಾ ಎದುರು ಕೊಂಚ ಹಿನ್ನಡೆ ಅನುಭವಿಸುವ ಸಾಧ್ಯತೆಯಿದೆ ಎಂದು ಆಸೀಸ್ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ತವರಿಗೆ ಮರಳುವ ಮುನ್ನ ತಂಡಕ್ಕೆ ಗೆಲುವನ್ನು ದಕ್ಕಿಸಿಕೊಡುವುದರ ಜತೆಗೆ ಆಟಗಾರರಲ್ಲಿ ಮಾನಸಿಕ ಸ್ಥೈರ್ಯ ತುಂಬುವುದು ಸಾಕಷ್ಟು ಮಹತ್ವದ್ದಾಗಿದೆ ಎಂದು ಕ್ಲಾರ್ಕ್ ಹೇಳಿದ್ದಾರೆ. ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಬೇಕಿದ್ದರೆ ಅಡಿಲೇಡ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ತೋರಬೇಕಿದೆ ಎಂದು ಕ್ಲಾರ್ಕ್ ಹೇಳಿದ್ದಾರೆ.
ಕೊಹ್ಲಿ ಸರಣಿ ಮಿಸ್ ಮಾಡಿಕೊಂಡರೂ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ; ಕೋಚ್ ಶಾಸ್ತ್ರಿ
ನವೆಂಬರ್ 27ರಿಂದ ಆರಂಭವಾಗಲಿರುವ ಸೀಮಿತ ಓವರ್‌ಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ನಾಯಕನ ಆಟವಾಡುವ ಮೂಲಕ ತಂಡಕ್ಕೆ ಹುರುಪು ತುಂಬಬೇಕಾಗಿದೆ. ಹೀಗಾದಲ್ಲಿ ಮಾತ್ರ ಟೀಂ ಇಂಡಿಯಾ ಕೊಹ್ಲಿ ಅನುಪಸ್ಥಿತಿಯಲ್ಲಿಯೂ ಉತ್ತಮ ಪ್ರದರ್ಶನ ತೋರಲು ಸಾಧ್ಯ. ಒಂದು ವೇಳೆ ಏಕದಿನ ಹಾಗೂ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಮುಗ್ಗರಿಸಿದರೆ, ಟೆಸ್ಟ್ ಸರಣಿಯಲ್ಲಿ ಮತ್ತೆ ಒತ್ತಡಕ್ಕೆ ಸಿಲುಕಲಿದೆ. ಇಂತಹ ಒತ್ತಡದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 4-0 ಅಂತರದ ಹೀನಾಯ ಸೋಲು ಕಾಣಲಿದೆ ಎನ್ನುವುದು ನನ್ನ ಅಭಿಪ್ರಾಯವೆಂದು ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.
ಇದೇ ವೇಳೆ ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ತೋರಬೇಕಿದ್ದರೆ ಜಸ್ಪ್ರೀತ್ ಬುಮ್ರಾ ಪಾತ್ರ ಪ್ರಮುಖವಾಗಿರಲಿದೆ. ಬೌನ್ಸಿ ಪಿಚ್‌ನಲ್ಲಿ ಬುಮ್ರಾ ಆಸೀಸ್ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಬಹುದು ಎಂದು ಮೈಕಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ.