ಐಪಿಎಲ್ ಮೆಗಾ ಹರಾಜಿನಲ್ಲಿ ರಿಷಭ್ ಪಂತ್, ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಆದರೆ ಡೆಲ್ಲಿ ಫ್ರಾಂಚೈಸಿ ಮಾಸ್ಟರ್ ಪ್ಲಾನ್‌ನಿಂದ ಲಖನೌ 7 ಕೋಟಿ ಕಳೆದುಕೊಂಡಿತು.
ಜೆದ್ದಾ: ಹರಾಜು ಪ್ರಕ್ರಿಯೆಗಳಲ್ಲಿ ಉಳಿದ ತಂಡಗಳ ಲೆಕ್ಕಾಚಾರವನ್ನು ತಲೆಕೆಳಗು ಮಾಡುವಲ್ಲಿ ಪರಿಣಿತಿ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಮಾಲಿಕ ಕಿರಣ್ ಕುಮಾರ್ ಗ್ರಾಂಧಿ, 2025ರ ಹರಾಜಿನಲ್ಲೂ ಇದೇ ತಂತ್ರಗಾರಿಕೆ ಮುಂದುವರಿಸಿದರು.
ರಿಷಭ್ ಪಂತ್‌ಗೆ ಲಖನೌ ಸೂಪರ್ ಜೈಂಟ್ಸ್ 20 ಕೋಟಿ ರು. ನೀಡಿ ಖರೀದಿಸಿತ್ತು. ಆದರೆ ಡೆಲ್ಲಿ ತಂಡ ಆರ್‌ಟಿಎಂ ಕಾರ್ಡ್ ಬಳಕೆ ಮಾಡಿದ್ದರಿಂದ, ಲಖನೌ 7 ಕೋಟಿ ರು. ಹೆಚ್ಚುವರಿಯಾಗಿ ಬಿಡ್ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕಾಯಿತು. ಗ್ರಾಂಧಿ ಅವರ ಈ ತಂತ್ರಗಾರಿಕೆಯಿಂದ ಲಖನೌ ಒಂದೇ ಸೆಕೆಂಡ್‌ನಲ್ಲಿ 7 ಕೋಟಿ ರು. ಕಳೆದುಕೊಂಡಿದೆ.
ಅಪಘಾತ ವೇಳೆ ರಕ್ಷಣೆಗೆ ಬಂದ ಇಬ್ಬರಿಗೆ ಸ್ಕೂಟರ್ ಉಡುಗೊರೆ ಕೊಟ್ಟ ಪಂತ್
ನವದೆಹಲಿ: 2022ರ ಡಿಸೆಂಬರ್‌ನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದ ಭಾರತದ ತಾರಾ ಕ್ರಿಕೆಟಿಗ ರಿಷಭ್ ಪಂತ್, ಅಪಘಾತದ ವೇಳೆ ತಮ್ಮ ರಕ್ಷಣೆಗೆ ಬಂದಿದ್ದ ಇಬ್ಬರು ಯುವಕರಿಗೆ ಉಡುಗೊರೆ ರೂಪದಲ್ಲಿ ಸ್ಕೂಟರ್ ನೀಡಿದ್ದಾರೆ. ಆಸ್ಟ್ರೇಲಿಯಾದ ಕ್ರಿಕೆಟ್ 7 ವಾಹಿನಿ ಪಂತ್ ಬಗ್ಗೆ ಮಾಡಿರುವ ವಿಶೇಷ ಸಂಚಿಕೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ.
ಅಪಘಾತಕ್ಕೀಡಾಗಿದ್ದ ರಿಷಭ್‌ರನ್ನು ಸ್ಥಳದಲ್ಲಿದ್ದ ರಜತ್ ಕುಮಾರ್ ಹಾಗೂ ನಿಶು ಕುಮಾರ್ ಕಾರಿನಿಂದ ಹೊರಗೆಳೆದು, ಆಸ್ಪತ್ರೆಗೆ ದಾಖಲಿಸಿದ್ದರು. ತಮ್ಮ ಜೀವ ರಕ್ಷಿಸಿದ ಇಬ್ಬರಿಗೂ ರಿಷಭ್ ಸ್ಕೂಟರ್ ನೀಡಿ, ಧನ್ಯವಾದ ತಿಳಿಸಿದ್ದಾರೆ.
ಡೆಲ್ಲಿ ತೊರೆದಿದ್ದು ವೇತನ ವಿಚಾರಕ್ಕಲ್ಲ: ರಿಷಭ್ ಪಂತ್
ನವದೆಹಲಿ: ಈ ಬಾರಿಯ ಐಪಿಎಲ್‌ನಲ್ಲಿ ರಿಟೆನ್ಶನ್ ವೇತನ ವಿಚಾರದ ಭಿನ್ನಾಭಿಪ್ರಾಯದಿಂದಾಗಿ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ನೀಡಿದ್ದ ಹೇಳಿಕೆಯನ್ನು ಪಂತ್ ತಳ್ಳಿ ಹಾಕಿದ್ದಾರೆ. ವೇತನ ವಿಚಾರಕ್ಕೆ ಡೆಲ್ಲಿ ತಂಡ ತೊರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಬಾರಿ ಐಪಿಎಲ್‌ನಲ್ಲಿ ಡೆಲ್ಲಿ ನಾಯಕರಾಗಿದ್ದ ವಿಕೆಟ್ ಕೀಪರ್ ಪಂತ್ ಅವರನ್ನು ಈ ಬಾರಿ ತಂಡ ಉಳಿಸಿಕೊಂಡಿಲ್ಲ. ವೇತನ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ ಎಂದು ಗವಾಸ್ಕರ್ ಹೇಳಿಕೆ ನೀಡಿದ್ದರು. ಇದನ್ನು ಉಲ್ಲೇಖಿಸಿ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ರಿಷಬ್, ‘ನನ್ನ ರಿಟೆನ್ಶನ್ ವೇತನ ವಿಚಾರಕ್ಕೆ ಸಂಬಂಧಿಸಿದ್ದಲ್ಲ ಎಂದು ನಾನು ಖಚಿತವಾಗಿ ಹೇಳುತ್ತೇನೆ’ಎಂದಿದ್ದಾರೆ.
