ಹಾಂಗ್‌ಕಾಂಗ್‌ ಸಿಕ್ಸಸ್‌ 2026 ಟೂರ್ನಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ಅಫ್ಘಾನಿಸ್ತಾನ ಚೊಚ್ಚಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಇಮ್ರಾನ್‌ ಮಿರ್‌ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಅಫ್ಘಾನಿಸ್ತಾನ ಈ ಐತಿಹಾಸಿಕ ಗೆಲುವು ದಾಖಲಿಸಿದೆ. ಮತ್ತೊಂದೆಡೆ, ಕೃನಾಲ್ ಪಾಂಡ್ಯ ನೇತೃತ್ವದ ಭಾರತ ತಂಡ ಲೀಗ್ ಹಂತದಲ್ಲೇ ಹೊರಬಿದ್ದು ನಿರಾಸೆ ಅನುಭವಿಸಿದೆ.

ಹಾಂಗ್‌ಕಾಂಗ್‌(ನ.02): ಗುಲ್ಬದಿನ್‌ ನೈಬ್‌ ನಾಯಕತ್ವದ ಅಫ್ಘಾನಿಸ್ತಾನ ತಂಡ ಹಾಂಗ್‌ಕಾಂಗ್‌ ಸಿಕ್ಸಸ್‌ 2026 ಟೂರ್ನಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ನಾಲ್ಕು ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಭಾನುವಾರ ಮಿಷನ್‌ ರೋಡ್‌ ಮೈದಾನದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ರೋಚಕ ಗೆಲುವು ದಾಖಲಿಸುವ ಮೂಲಕ ಇತಿಹಾಸ ನಿರ್ಮಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ, ನಿಗದಿತ 6 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 115 ರನ್‌ ಗಳಿಸಿತು. ತಂಡದ ಆರಂಭಿಕ ಬ್ಯಾಟರ್‌ ಮ್ಯಾಕ್ಸ್‌ ಬ್ರ್ಯಾಂಟ್‌ ಕೇವಲ 14 ಎಸೆತಗಳಲ್ಲಿ 44 ರನ್‌ ಸಿಡಿಸಿ ಅಬ್ಬರಿಸಿದರು. ನಿಕ್‌ ರಾಬ್ಸನ್‌ 23 ರನ್‌ ಗಳಿಸಿದರೆ, ಅಲೆಕ್ಸ್‌ ರಾಸ್‌ 29 ರನ್‌ಗಳ ಕೊಡುಗೆ ನೀಡಿದರು. ಇನ್ನು ಅಫ್ಘಾನಿಸ್ತಾನದ ಪರ ಕರೀಂ ಜನತ್‌ ಎರಡು ಓವರ್‌ ಬೌಲಿಂಗ್‌ ಮಾಡಿ 27 ರನ್‌ ನೀಡಿ ಎರಡು ವಿಕೆಟ್‌ ಕಬಳಿಸಿದರು.

ಇಮ್ರಾನ್‌ ಮಿರ್‌ ಸ್ಫೋಟಕ ಬ್ಯಾಟಿಂಗ್‌; ಅಫ್ಘಾನಿಸ್ತಾನಕ್ಕೆ ಜಯ

116 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಕರೀಂ ಜನತ್‌ ಮತ್ತು ನಾಯಕ ಗುಲ್ಬದಿನ್‌ ನೈಬ್‌ ಆರಂಭಿಕರಾಗಿ ಕಣಕ್ಕಿಳಿದರೂ, ಮೊದಲ ಎರಡು ಓವರ್‌ಗಳೊಳಗೆ ಇಬ್ಬರೂ ವಿಕೆಟ್‌ ಒಪ್ಪಿಸಿದರು. ಈ ಹಂತದಲ್ಲಿ ತಂಡದ ಮೊತ್ತ ಕೇವಲ 32 ರನ್‌ ಆಗಿತ್ತು.

ಆದರೆ, ಬಳಿಕ ಫರ್ಮಾನುಲ್ಲಾ ಸಫಿ ಮತ್ತು ಇಮ್ರಾನ್‌ ಮಿರ್‌ ಆಸ್ಟ್ರೇಲಿಯಾ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಮೂರನೇ ವಿಕೆಟ್‌ಗೆ ಈ ಜೋಡಿ ಕೇವಲ 21 ಎಸೆತಗಳಲ್ಲಿ 87 ರನ್‌ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿತು. ಇಮ್ರಾನ್‌ ಮಿರ್‌ ಕೇವಲ 14 ಎಸೆತಗಳಲ್ಲಿ ಅಜೇಯ 53 ರನ್‌ ಸಿಡಿಸಿ ಅಫ್ಘಾನಿಸ್ತಾನದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಅಫ್ಘಾನಿಸ್ತಾನ ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿತು. ಈ ಮೂಲಕ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ಅಫ್ಘಾನಿಸ್ತಾನ ಹಾಂಗ್‌ಕಾಂಗ್‌ ಸಿಕ್ಸಸ್‌ 2026ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಚೊಚ್ಚಲ ಬಾರಿಗೆ ಹಾಂಗ್‌ಕಾಂಗ್ ಸಿಕ್ಸಸ್ ಟ್ರೋಫಿ ಗೆದ್ದ ಆಫ್ಘಾನಿಸ್ತಾನ

ಅಂದಹಾಗೆ ಆಫ್ಘಾನಿಸ್ತಾನ ತಂಡವು ಯಾವುದೇ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಗೆಲುವು ಸಾಧಿಸಿರಲಿಲ್ಲ. ಆದರೆ ಇದೀಗ ಹಾಂಗ್‌ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಕ್ರಿಕೆಟ್‌ನ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಆಸ್ಟ್ರೇಲಿಯಾಗೆ ಫೈನಲ್‌ನಲ್ಲಿ ಸೋಲುಣಿಸುವ ಮೂಲಕ ಚೊಚ್ಚಲ ಬಾರಿಗೆ ಹಾಂಗ್‌ಕಾಂಗ್ ಸಿಕ್ಸಸ್ ಟ್ರೋಫಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.

ನಿರಾಸೆ ಅನುಭವಿಸಿದ ಭಾರತ ತಂಡ:

ಇನ್ನು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಹಾಂಗ್‌ಕಾಂಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಕೃನಾಲ್ ಪಾಂಡ್ಯ ನೇತೃತ್ವದ ಭಾರತ ತಂಡವು ನೀರಸ ಪ್ರದರ್ಶನ ತೋರುವ ಮೂಲಕ ಲೀಗ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿದೆ. ಮೊದಲಿಗೆ ಪಾಕಿಸ್ತಾನ ಎದುರು ಸೋಲು ಕಂಡಿದ್ದ ಭಾರತ ತಂಡವು ಆ ಬಳಿಕ ಯುಎಇ ಹಾಗೂ ಇಂಗ್ಲೆಂಡ್ ವಿರುದ್ದವೂ ಮುಗ್ಗರಿಸಿತ್ತು. ಇದರೊಂದಿಗೆ ಬಹುತೇಕ ನಾಕೌಟ್ ರೇಸ್‌ನಿಂದ ಹೊರಗುಳಿದಿತ್ತು. ಇನ್ನು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ರೋಚಕ ಗೆಲುವು ಸಾಧಿಸುವ ಮೂಲಕ ಗೆಲುವಿನೊಂದಿಗೆ ತನ್ನ ಅಭಿಯಾನ ಮುಗಿಸಿತ್ತು.