ಕ್ರೀಡಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಜಾನ್- ಹಿಂದೂ ಸಂಘಟನೆ ಆಕ್ರೋಶ

ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಕ್ರೀಡಾಕೂಟದಲ್ಲಿ ಧರ್ಮ ದಂಗಲ್
ಶಂಕರನಾರಾಯಣದ ಮದರ್ ಥೇರೆಸಾ ಮೆಮೋರಿಯಲ್ ಶಾಲೆಯು ಆಯೋಜನೆಯಾದ ಕಾರ್ಯಕ್ರಮದ ಬಗ್ಗೆ ವಿರೋಧ
ವೇದಿಕೆಯಲ್ಲಿ ವಿದ್ಯಾರ್ಥಿಗಳು ಆಜಾನ್‌ಗೆ ನೃತ್ಯ ಮಾಡಿದ್ದಕ್ಕೆ ಹಿಂದು ಸಂಘಟನೆಗಳ ಆಕ್ರೋಶ

Hindu Activist Oppose Azan in Cultural Programme School Sports meet in Kundapura kvn

ಉಡುಪಿ(ನ.16): ಕುಂದಾಪುರ ತಾಲೂಕಿನ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಎರಡು ದಿನಗಳ ಕ್ರೀಡಾಕೂಟವನ್ನು ಶಂಕರನಾರಾಯಣದ ಮದರ್ ಥೇರೆಸಾ ಮೆಮೋರಿಯಲ್ ಶಾಲೆಯು ಆಯೋಜನೆ ಮಾಡಿದ್ದು, ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಮಂಗಳವಾರ ಉದ್ಘಾಟನೆಗೊಂಡಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಾಡಿದ ಸ್ವಾಗತ ನೃತ್ಯದಲ್ಲಿ ಹಿಂದೂ, ಕ್ರಿಶ್ಚಿಯನ್, ಇಸ್ಲಾಂ ಧರ್ಮದ ಹಾಡುಗಳಿಗೆ ವಿದ್ಯಾರ್ಥಿನಿಯರು ನೃತ್ಯ ಮಾಡಿದರು. ಇಸ್ಲಾಂ ಮತದ ಅಲ್ಲಾಹು ಅಕ್ಬರ್ ( ಆಜಾನ್ ) ಗೆ ವಿದ್ಯಾರ್ಥಿಗಳು ನೃತ್ಯ ಮಾಡಿದ್ದನ್ನು ವೇದಿಕೆಯಲ್ಲಿದ್ದ ಬಿಜೆಪಿ ಮುಖಂಡ ಉಮೇಶ್ ಶೆಟ್ಟಿ ಕಲ್ಗದೆಯವರು ತೀವ್ರವಾಗಿ ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದರು. 

ಆಜಾನ್ ಗೆ ವಿದ್ಯಾರ್ಥಿನಿಯರು ನೃತ್ಯ ಮಾಡುತ್ತಿರುವ ದೃಶ್ಯವು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಸ್ಥಳೀಯ ಹಿಂದೂ ಪರ ಸಂಘಟನೆಗಳ ಯುವಕರು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಶಾಲಾ ಆಡಳಿತ ಮಂಡಳಿ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದು, ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿದರು. 

ಕ್ಷಮೆಯಾಚಿಸಿದ ಶಾಲಾ ಆಡಳಿತ ಮಂಡಳಿ

ಸ್ವಾಗತ ನೃತ್ಯದಲ್ಲಿ 30 ಸೆಕೆಂಡ್ ಆಜಾನ್ ಗೆ ವಿದ್ಯಾರ್ಥಿಗಳು ನೃತ್ಯ ಮಾಡಿದ್ದಾರೆ. ಯಾರ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸುವ ಉದ್ದೇಶ ನಮ್ಮದಾಗಿರಲಿಲ್ಲ. ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದ್ದರೆ ಕ್ಷಮೆಯಾಚಿಸುತ್ತೇವೆ ಎಂದು ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ಬಹಿರಂಗವಾಗಿ ಕ್ಷಮೆಯಾಚಿಸಿದರು.

ಶಾಸಕರ ಪ್ರತಿಕ್ರಿಯೆ

ಶಂಕರನಾರಾಯಣದಲ್ಲಿ ನಡೆದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಸ್ವಾಗತ ನೃತ್ಯ ಮಾಡುವಾಗ ಇಸ್ಲಾಂ ಮತದ ಅಜಾನ್ ಗೆ ವಿದ್ಯಾರ್ಥಿಗಳು ನೃತ್ಯ ಮಾಡಿದ್ದಾರೆ. ಸ್ಥಳೀಯರು ಈ ಬಗ್ಗೆ ನನ್ನ ಗಮನಕ್ಕೆ ತಂದಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದೇನೆ. ಶಾಲೆಯಲ್ಲಿ ಆಜಾನ್ ಗೆ ವಿದ್ಯಾರ್ಥಿಗಳಿಂದ ನೃತ್ಯ ಮಾಡಿಸಿರುವುದು ಅಕ್ಷಮ್ಯ ಅಪರಾಧ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ಮಾತನಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಶಾಲಾ ಆಡಳಿತ ಮಂಡಳಿಯವರು ಕ್ಷಮೆಯನ್ನು ಕೇಳಿದ್ದಾರೆ.  ಸ್ಥಳೀಯರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಬೈಂದೂರು  ಶಾಸಕ ಬಿ.ಎಮ್.ಸುಕುಮಾರ್ ಶೆಟ್ಟಿ ಹೇಳಿದ್ದಾರೆ.

ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ ಗಂಡನಿಗೆ ಪತ್ನಿಯ ಪಟ್ಟು: ಪೊಲೀಸ್ ಠಾಣೆಗೆ ಮುತ್ತಿಗೆ

ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ

ಶಾಲಾ ಕಾರ್ಯಕ್ರಮದಲ್ಲಿ ಆಝಾನ್ ಕೂಗಿರುವುದನ್ನು ಹಿಂದು ಜಾಗರಣ ವೇದಿಕೆ ಖಂಡಿಸಿ ಪ್ರತಿಭಟನೆ ನಡೆಸಿದೆ. ಶಂಕರನಾರಾಯಣ ಮುಖ್ಯಪೇಟೆಯಲ್ಲಿ ಸೇರಿದ ನೂರಾರು ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದಾರೆ. ಸಂಬಂಧಪಟ್ಟ ಶಾಲೆಯಲ್ಲಿ ಹಿಂದೂ ವಿರೋಧಿ ಧೋರಣೆಯನ್ನು ಪದೇಪದೇ ಅನುಸರಿಸಲಾಗುತ್ತಿದೆ. ಈ ಶಾಲೆಗೆ ಬರುವ ವಿದ್ಯಾರ್ಥಿನಿಯರಿಗೆ ಕುಂಕುಮ ಹಾಕಿಕೊಳ್ಳುವ ಅವಕಾಶವಿಲ್ಲ. ಇದೀಗ ಶಾಲಾ ಕಾರ್ಯಕ್ರಮದಲ್ಲಿ ಆಝಾನ್ ಕೂಗಿರುವುದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಪ್ರತಿಭಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

Latest Videos
Follow Us:
Download App:
  • android
  • ios