ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ, ಆಸ್ಟ್ರೇಲಿಯಾ ಬಾಂಗ್ಲಾದೇಶ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ನಾಯಕಿ ಅಲೀಸಾ ಹೀಲಿ ಅವರ ಅಜೇಯ ಶತಕ (113) ಮತ್ತು ಫೀಬಿ ಲಿಚ್‌ಫೀಲ್ಡ್ ಅವರ ಅರ್ಧಶತಕದ (84) ನೆರವಿನಿಂದ ಆಸೀಸ್, ಸೆಮಿಫೈನಲ್‌ಗೆ ಪ್ರವೇಶಿಸಿದ ಮೊದಲ ತಂಡವಾಯಿತು.

ವಿಶಾಖಪಟ್ಟಣಂ: ಅತ್ಯುತ್ತಮ ಬೌಲಿಂಗ್ ದಾಳಿ ಹಾಗೂ ನಾಯಕಿ ಅಲೀಸಾ ಹೀಲಿ ಅವರ ಮತ್ತೊಂದು ಅಮೋಘ ಶತಕದ ನೆರವಿನಿಂದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ಗೆ ಮೊದಲ ತಂಡವಾಗಿ ಆಸ್ಟ್ರೇಲಿಯಾ ಲಗ್ಗೆಯಿಟ್ಟಿದೆ. ಗುರುವಾರ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿತು.

ಮೊದಲು ಬೌಲಿಂಗ್ ಮಾಡಿದ ಆಸ್ಟ್ರೇಲಿಯಾ, ಬಾಂಗ್ಲಾದೇಶವನ್ನು 9 ವಿಕೆಟ್‌ಗೆ 198 ರನ್‌ಗೆ ಕಟ್ಟಿಹಾಕಿತು. ಬಳಿಕ ಸುಲಭ ಗುರಿಯನ್ನು ಆಸ್ಟ್ರೇಲಿಯಾ 24.5 ಓವರಲ್ಲಿ ಬೆನ್ನಟ್ಟಿತು. ಅಲೀಸಾ ಕೇವಲ 77 ಎಸೆತದಲ್ಲಿ ಔಟಾಗದೆ 113 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 20 ಬೌಂಡರಿಗಳಿದ್ದವು. ಫೀಬಿ ಲಿಚ್‌ಫೀಲ್ಡ್ 72 ಎಸೆತದಲ್ಲಿ 12 ಬೌಂಡರಿ, 1 ಸಿಕ್ಸರ್‌ನೊಂದಿಗೆ 84 ರನ್ ಗಳಿಸಿದರು. ಆಸ್ಟ್ರೇಲಿಯಾ 134 ರನ್‌ಗಳನ್ನು ಬೌಂಡರಿ, ಸಿಕ್ಸರ್ ಮೂಲಕವೇ ದಾಖಲಿಸಿತು.

ಸ್ಕೋರ್:

ಬಾಂಗ್ಲಾದೇಶ 198/9 (ಶೋಭನಾ 66, ರುಬ್ಯಾ 44, ಅಲಾನಾ 2-18)

ಆಸ್ಟ್ರೇಲಿಯಾ 24.5 ಓವರಲ್ಲಿ 202/0 (ಅಲೀಸಾ ಹೀಲಿ 113, ಲಿಚ್‌ಫೀಲ್ಡ್ 84)

ಇಂದು ದಕ್ಷಿಣ ಆಫ್ರಿಕಾ- ಶ್ರೀಲಂಕಾ ಬಿಗ್ ಫೈಟ್

ಕೊಲಂಬೊ: ಇಲ್ಲಿ ನಡೆದಿರುವ ಕಳೆದೆರಡು ಪಂದ್ಯಗಳು ಮಳೆಗೆ ಬಲಿಯಾಗಿದ್ದು, ಶುಕ್ರವಾರದ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೂ ಮಳೆ ಭೀತಿ ಇದೆ. ಈ ಪಂದ್ಯ ಲಂಕಾಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವೆನಿಸಿದೆ. ತಂಡ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ.

2 ಪಂದ್ಯಗಳು ರದ್ದಾದ ಕಾರಣ 2 ಅಂಕ ಗಳಿಸಿರುವ ಲಂಕಾ, ಸೆಮೀಸ್ ರೇಸ್‌ನಲ್ಲಿ ಉಳಿಯ ಬೇಕಿದ್ದರೆ ಗೆಲ್ಲಲೇಬೇಕಿದೆ. ಇನ್ನು, 6 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿರುವ ದ.ಆಫ್ರಿಕಾ ಈ ಪಂದ್ಯದಲ್ಲಿ ಗೆದ್ದರೆ ಸೆಮಿಫೈನಲ್ ಪ್ರವೇಶಿಸುವುದು ಬಹುತೇಕ ಖಚಿತವಾಗಲಿದೆ.

ಅಭಿಷೇಕ್ ಶರ್ಮಾ, ಸ್ಮೃತಿ ಮಂಧನಾಗೆ ಐಸಿಸಿ ತಿಂಗಳ ಶ್ರೇಷ್ಠ ಕ್ರಿಕೆಟರ್ ಪ್ರಶಸ್ತಿ

ದುಬೈ: ಭಾರತದ ಅಭಿಷೇಕ್ ಶರ್ಮಾ ಹಾಗೂ ಸ್ಮೃತಿ ಮಂಧನಾ ಐಸಿಸಿ ತಿಂಗಳ ಶ್ರೇಷ್ಠ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆಪ್ಟೆಂಬರ್ ತಿಂಗಳ ಗೌರವಕ್ಕೆ ಅಭಿಷೇಕ್ ಶರ್ಮಾ ಹಾಗು ಸ್ಮೃತಿ ಮಂಧನಾ ಇಬ್ಬರೂ ಸ್ಪರ್ಧೆಯಲ್ಲಿದ್ದರು.

ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ, ಭಾರತದ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ಹಾಗೂ ಜಿಂಬಾಬ್ವೆಯ ಬೆನ್ನೆಟ್‌ರನ್ನು ಹಿಂದಿಕ್ಕಿ ಪ್ರಶಸ್ತಿ ಜಯಿಸಿದರೆ, ದಕ್ಷಿಣ ಆಫ್ರಿಕಾದ ತಜ್ನಿಮ್ ಬ್ರಿಟ್ಸ್ ಹಾಗೂ ಪಾಕಿಸ್ತಾನದ ಸಿದ್ರಾ ಅಮೀನ್‌ರನ್ನು ಹಿಂದಿಕ್ಕಿ ಸ್ಮೃತಿ ಮಂಧನಾ ಪ್ರಶಸ್ತಿ ಜಯಿಸಿದ್ದಾರೆ.