ಭಾರತ ನೀಡಿದ 331 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್ ಮಾಡಿ 3 ವಿಕೆಟ್‌ಗಳ ಐತಿಹಾಸಿಕ ಜಯ ಸಾಧಿಸಿತು. ಅಲೀಸಾ ಹೀಲಿ ಅವರ ಸ್ಫೋಟಕ ಶತಕ (142) ಆಸೀಸ್ ಗೆಲುವಿಗೆ ಕಾರಣವಾಯಿತು.

ವಿಶಾಖಪಟ್ಟಣಂ: 7 ಬಾರಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ, ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್‌ನೊಂದಿಗೆ ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲೂ ತಾನೇ ಗೆಲ್ಲುವ ಫೇವರಿಟ್ ಎನ್ನುವುದನ್ನು ತೋರಿದೆ. ಭಾರತ ವಿರುದ್ದ ಭಾನುವಾರ ಇಲ್ಲಿ ನಡೆದ ಪಂದ್ಯದಲ್ಲಿ 331 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ಆಸ್ಟ್ರೇಲಿಯಾ 3 ವಿಕೆಟ್ ಜಯದೊಂದಿಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು. 4 ಪಂದ್ಯಗಳಿಂದ 7 ಅಂಕ ಗಳಿಸಿರುವ ಆಸೀಸ್, ಅಜೇಯವಾಗಿ ಉಳಿದಿದ್ದು ಸೆಮಿಫೈನಲ್‌ನತ್ತ ಮುನ್ನುಗ್ಗಿದೆ.

ಟಾಸ್ ಸೋತು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆಸೀಸ್‌ಗೆ ಭಾರತದ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧನಾ ಹಾಗೂ ಪ್ರತಿಕಾ ರಾವಲ್ ಆಕರ್ಷಕ ಬ್ಯಾಟಿಂಗ್ ಮೂಲಕ ಕಾಡಿದರು. ಭಾರತದ ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ 155 ಜೊತೆಯಾಟವಾಡಿತು. ಸ್ಮೃತಿ 80 ರನ್ ಗಳಿಸಿ ಔಟಾದರೆ, ಪ್ರತಿಕಾ 75 ರನ್ ಕಲೆಹಾಕಿದರು. ಹರ್ಲೀನ್ ಡಿಯೋಲ್ 38, ಹರ್ಮನ್‌ ಪ್ರೀತ್ 22, ಜೆಮಿಮಾ 33 ರನ್ ಕೊಡುಗೆ ನೀಡಿದರು. ಭಾರತ ಒಂದು ಹಂತದಲ್ಲಿ 350ಕ್ಕೂ ಹೆಚ್ಚು ಮೊತ್ತ ದಾಖಲಿಸುವ ನಿರೀಕ್ಷೆಯಲ್ಲಿತ್ತು. ಆದರೆ ಕೊನೆ 6 ಓವರಲ್ಲಿ 36 ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದು ಭಾರತಕ್ಕೆ ಹಿನ್ನಡೆ ಉಂಟು ಮಾಡಿತು. 48.5 ಓವರಲ್ಲಿ ಭಾರತ 330 ರನ್‌ಗೆ ಆಲೌಟ್ ಆಯಿತು. ಅನಾಬೆಲ್ ಸದರ್‌ಲೆಂಡ್ 5 ವಿಕೆಟ್ ಕಬಳಿಸಿದರು.

ಆಸ್ಟ್ರೇಲಿಯಾ ಸ್ಪೋಟಕ ಆರಂಭ

ಆಸ್ಟ್ರೇಲಿಯಾ ಕೂಡ ಸ್ಪೋಟಕ ಆರಂಭ ಪಡೆಯಿತು. ನಾಯಕಿ ಅಲೀಸಾ ಹೀಲಿ ಹಾಗೂ ಫೀಬಿ ಲಿಚ್‌ಫೀಲ್ಡ್ ಮೊದಲ ವಿಕೆಟ್‌ಗೆ 85 ರನ್ ಸೇರಿಸಿದರು. ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅಲೀಸಾ 107 ಎಸೆತದಲ್ಲಿ 21 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 142 ರನ್ ಗಳಿಸಿ ಔಟಾದರು.

ಭಾರತ ಸುಧಾರಿತ ಫೀಲ್ಡಿಂಗ್ ಪ್ರದರ್ಶನದೊಂದಿಗೆ ಕೊನೆವರೆಗೂ ಪಂದ್ಯದಲ್ಲಿ ಉಳಿಯುವ ಪ್ರಯತ್ನ ನಡೆಸಿತು. ಆದರೆ ಆಶ್ಲೆ ಗಾರ್ಡ್‌ನರ್ 45,ಗಾಯಗೊಂಡು ನಿವೃತ್ತಿ ಪಡೆದರೂ ಕೊನೆಯಲ್ಲಿ ಮತ್ತೆ ಕ್ರೀಸ್‌ಗಿಳಿದು ಔಟಾಗದೆ 47 ರನ್ ಗಳಿಸಿದ ಎಲೈಸಿ ಪೆರ್ರಿ ಇನ್ನೂ 1 ಓವರ್‌ ಬಾಕಿ ಇರುವಂತೆಯೇ ತಂಡವನ್ನು ಜಯದ ದಡ ಸೇರಿಸಿದರು.

ಸ್ಕೋರ್: ಭಾರತ 48.5 ಓವರಲ್ಲಿ 330/10 (ಸ್ಮೃತಿ 80, ಪ್ರತಿಕಾ 75, ಸದರ್‌ಲೆಂಡ್ 5-40)

ಆಸ್ಟ್ರೇಲಿಯಾ 49 ಓವರಲ್ಲಿ 331/7 (ಅಲೀಸಾ 142, ಪೆರ್ರಿ 47*, ಶ್ರೀ ಚರಣಿ 3-41)

ಟರ್ನಿಂಗ್ ಪಾಯಿಂಟ್

ಭಾರತ 350 -360 ರನ್ ಗಳಿಸಬಹುದಿತ್ತು. ಆದರೆ 42.5 ಓವರಿಂದ 48 5 ನಡುವೆ 36 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿತು. ರಿಚಾ 43ನೇ ಓವರಲ್ಲೇ ಔಟಾಗಿದ್ದು ಭಾರತಕ್ಕೆ ತೀವ್ರ ಹಿನ್ನಡೆಯಾಯಿತು.

ಹುಟ್ಟುಹಬ್ಬದಂದು 5 ವಿಕೆಟ್ ಗೊಂಚಲು ಪಡೆದ ಸದರ್‌ಲೆಂಡ್‌!

ಆಸ್ಟ್ರೇಲಿಯಾದ ವೇಗಿ ಆ್ಯನಾಬೆಲ್ ಸದರ್‌ಲೆಂಡ್ ತಮ್ಮ ಹುಟ್ಟುಹಬ್ಬದಂದು 5 ವಿಕೆಟ್ ಗೊಂಚಲು ಪಡೆದರು. ಇದು ಮಹಿಳಾ ಏಕದಿನದಲ್ಲಿ ಮೊದಲು, ಪುರುಷರ ಏಕದಿನದಲ್ಲಿ ಒಮ್ಮೆ ಈ ಸಾಧನೆ ದಾಖಲಾಗಿದ್ದು, ಅಫ್ಘಾನಿಸ್ತಾನದ ರಶೀದ್ ಖಾನ್ 2024ರಲ್ಲಿ ದ.ಆಫ್ರಿಕಾ ವಿರುದ್ಧ ತಮ್ಮ ಬರ್ತ್‌ಡೇಯಂದು 5 ವಿಕೆಟ್ ಕಿತ್ತಿದ್ದರು.