ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಸೋತ ನಂತರ, ಅಭಿಮಾನಿಗಳು ಕೋಚ್ ಗೌತಮ್ ಗಂಭೀರ್ ಅವರನ್ನು ಟ್ರೋಲ್ ಮಾಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ವಿರಾಟ್ ಕೊಹ್ಲಿ, 'ಗಂಭೀರ್ ಹಾಯ್ ಹಾಯ್' ಎಂದು ಕೂಗುತ್ತಿದ್ದ ಅಭಿಮಾನಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಕೋಚ್ ಬೆಂಬಲಕ್ಕೆ ನಿಂತಿದ್ದಾರೆ.

ಇಂದೋರ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡವು 2-1 ಅಂತರದಲ್ಲಿ ಸರಣಿಯನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಭಾರತದ ನೆಲದಲ್ಲಿ ಇದೇ ಮೊದಲ ಬಾರಿಗೆ ಏಕದಿನ ಸರಣಿ ಜಯಿಸುವಲ್ಲಿ ಕಿವೀಸ್ ಪಡೆ ಯಶಸ್ವಿಯಾಗಿದೆ. ಇನ್ನು ಭಾರತ ತಂಡವು ಏಕದಿನ ಸರಣಿ ಸೋಲುತ್ತಿದ್ದಂತೆಯೇ ಅಭಿಮಾನಿಗಳು, ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರನ್ನು ಟ್ರೋಲ್ ಮಾಡಲಾರಂಭಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ವಿರಾಟ್ ಕೊಹ್ಲಿ, ಅಭಿಮಾನಿಗಳ ವಿರುದ್ದ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್‌ ಕೋಚ್ ಆದ ಬಳಿಕ ಸೀಮಿತ ಓವರ್‌ಗಳ ಕ್ರಿಕೆಟ್ ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ನೀರಸ ಪ್ರದರ್ಶನ ನೀಡುತ್ತಾ ಬಂದಿದೆ. ತವರಿನಲ್ಲೇ ಹಲವು ಮಹತ್ವದ ಸರಣಿಗಳನ್ನು ಸೋಲುವ ಮೂಲಕ ಮುಖಭಂಗ ಅನುಭವಿಸಿದೆ. ಇನ್ನು ಇದೀಗ ನ್ಯೂಜಿಲೆಂಡ್‌ನಲ್ಲಿ ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ, ಟಾಮ್ ಲೇಥಮ್, ಲಾಕಿ ಫರ್ಗ್ಯೂಸನ್ ಅವರಂತಹ ತಾರಾ ಆಟಗಾರರಿಲ್ಲದ ತಂಡದೆದುರು ಭಾರತ ತವರಿನಲ್ಲಿಯೇ ಸೋಲು ಅನುಭವಿಸಿದ್ದು, ಅಭಿಮಾನಿಗಳ ಆಕ್ರೋಶ ಕಟ್ಟೆಯೊಡೆಯುವಂತೆ ಮಾಡಿದೆ.

ನಿಮಗೇನು ತಲೆ ಕೆಟ್ಟಿದೆಯಾ ಎಂದು ಗರಂ ಆದ ವಿರಾಟ್ ಕೊಹ್ಲಿ!

ಇನ್ನು ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಹೀನಾಯ ಸೋಲಿನ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ವೇದಿಕೆ ಸಜ್ಜಾಗಿತ್ತು. ಈ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಗಂಭೀರ್ ಹಾಯ್ ಹಾಯ್, ಗಂಭೀರ್ ಹಾಯ್ ಹಾಯ್(ಗಂಭೀರ್ ತೊಲಗಿ) ಎಂದು ಜೋರಾಗಿ ಕಿರುಚುತ್ತಿದ್ದರು. ಇದು ಸ್ವತಃ ಗೌತಮ್ ಗಂಭೀರ್ ಸೇರಿದಂತೆ ಅಲ್ಲಿರುವ ಇಡೀ ಭಾರತ ತಂಡಕ್ಕೆ ಇರಿಸುಮುರಿಸಾಗುವಂತೆ ಮಾಡಿತು. ಆಗ ಪ್ರೇಕ್ಷಕರತ್ತ ತಿರುಗಿ, ನಿಮಗೇನು ತಲೆಕೆಟ್ಟಿದೆಯಾ? ಯಾಕೆ ಹೀಗೆ ಮಾಡುತ್ತಿದ್ದೀರಾ? ಎಂದು ಸನ್ನೆ ಮಾಡಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Scroll to load tweet…

ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಿರಿಯ ಆಟಗಾರರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವಂತಹ ಸುದ್ದಿ ಆಗಾಗ ಸದ್ದು ಮಾಡುತ್ತಲೇ ಇದೆ. ಇದೇ ಕಾರಣಕ್ಕಾಗಿ ವಿರಾಟ್ ಕೊಹ್ಲಿ ಟೆಸ್ಟ್ ಮಾದರಿಗೆ ದಿಢೀರ್ ವಿದಾಯ ಘೋಷಿಸಿದರು ಎನ್ನುವ ಚರ್ಚೆ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹೀಗಿದ್ದೂ ಇದೀಗ ವಿರಾಟ್ ಕೊಹ್ಲಿ, ಗಂಭೀರ್ ಬೆನ್ನಿಗೆ ನಿಂತಿದ್ದಾರೆ.

ಆರು ತಿಂಗಳುಗಳ ಕಾಲ ಕೊಹ್ಲಿ-ರೋಹಿತ್ ಭಾರತ ತಂಡದಿಂದ ಔಟ್:

ನ್ಯೂಜಿಲೆಂಡ್ ಎದುರಿನ ಪಂದ್ಯ ಮುಕ್ತಾಯವಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಕುಟುಂಬದ ಜತೆ ಕಾಲಕಳೆಯಲು ಲಂಡನ್‌ಗೆ ಹಾರಿದ್ದಾರೆ. ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿ ಬಳಿಕ ಟೀಂ ಇಂಡಿಯಾ, ನ್ಯೂಜಿಲೆಂಡ್ ಎದುರು ತವರಿನಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಇದಾದ ನಂತರ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಪಾಲ್ಗೊಳ್ಳಲಿದೆ. ಈ ಮೆಗಾ ಟೂರ್ನಿ ಮುಕ್ತಾಯದ ಬಳಿಕ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಡೆಯಲಿದೆ.

ಇದಾದ ಬಳಿಕ ಜೂನ್‌ನಲ್ಲಿ ಭಾರತ ತಂಡವು ಏಕದಿನ ಸರಣಿಯನ್ನಾಡಲಿದೆ. ಜೂನ್‌ನಲ್ಲಿ ಭಾರತ ತಂಡವು ತವರಿನಲ್ಲಿ ಆಫ್ಘಾನಿಸ್ತಾನ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿಯ ಮೂಲಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲಿದ್ದಾರೆ.