ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 54ನೇ ಶತಕ ಸಿಡಿಸಿ, ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿದರು. ಈ ಶತಕಕ್ಕೆ ಕೋಚ್ ಗೌತಮ್ ಗಂಭೀರ್ ಡಗೌಟ್‌ನಿಂದ ಎದ್ದುನಿಂತು ಚಪ್ಪಾಳೆ ತಟ್ಟಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಇಂದೋರ್: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಸೋತು ಸರಣಿ ಕಳೆದುಕೊಂಡರೂ, ಶತಕ ಸಿಡಿಸಿ ಹೋರಾಡಿದ ವಿರಾಟ್ ಕೊಹ್ಲಿಯನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ. ವಿರಾಟ್ ಕೊಹ್ಲಿ ಶತಕ ಪೂರೈಸಿದಾಗ ಕೋಚ್ ಗೌತಮ್ ಗಂಭೀರ್ ಡಗೌಟ್‌ನಲ್ಲಿ ಎದ್ದುನಿಂತು ಚಪ್ಪಾಳೆ ತಟ್ಟಿದ್ದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಕೊಹ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ಬೆನ್ನಲ್ಲೇ ಈ ಶತಕ ಬಂದಿದೆ. ಇದರೊಂದಿಗೆ ನ್ಯೂಜಿಲೆಂಡ್ ವಿರುದ್ಧ ಏಕದಿನದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ರಿಕಿ ಪಾಂಟಿಂಗ್ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

ನ್ಯೂಜಿಲೆಂಡ್ ಇನ್ನಿಂಗ್ಸ್‌ನ 40ನೇ ಓವರ್‌ನಲ್ಲಿ 91 ಎಸೆತಗಳಲ್ಲಿ ಕೊಹ್ಲಿ ತಮ್ಮ 54ನೇ ಏಕದಿನ ಶತಕ ಪೂರೈಸಿದರು. ಎಂದಿನಂತೆ ಯಾವುದೇ ಅಬ್ಬರದ ಪ್ರದರ್ಶನವಿಲ್ಲದೆ ಕೊಹ್ಲಿ ಶತಕವನ್ನು ಸಂಭ್ರಮಿಸಿದರು. ಇದರ ಬೆನ್ನಲ್ಲೇ ಗೌತಮ್ ಗಂಭೀರ್ ಸೇರಿದಂತೆ ಟೀಂ ಇಂಡಿಯಾ ಆಟಗಾರರು ಹಾಗೂ ಸಿಬ್ಬಂದಿ ಎದ್ದುನಿಂತು ಚಪ್ಪಾಳೆ ತಟ್ಟಿದರು.

Scroll to load tweet…

ಕೊಹ್ಲಿ ಶತಕಕ್ಕೆ ಸಹ ಆಟಗಾರರೊಂದಿಗೆ ಕೋಚ್ ಗೌತಮ್ ಗಂಭೀರ್ ಕೂಡ ಎದ್ದುನಿಂತು ಚಪ್ಪಾಳೆ ತಟ್ಟಿದ್ದು ಕುತೂಹಲಕಾರಿ ದೃಶ್ಯವಾಗಿತ್ತು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಟೆಸ್ಟ್ ನಿವೃತ್ತಿಯ ಹಿಂದೆ ಗೌತಮ್ ಗಂಭೀರ್ ಕೈವಾಡವಿದೆ ಎಂದು ಈ ಹಿಂದೆ ವರದಿಯಾಗಿತ್ತು. 2027ರ ಏಕದಿನ ವಿಶ್ವಕಪ್‌ನಲ್ಲಿ ಆಡಲು ಎದುರು ನೋಡುತ್ತಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಗಂಭೀರ್ ತಂಡದಿಂದ ಹೊರಗಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಇಬ್ಬರ ಅಭಿಮಾನಿಗಳು ಅಸಮಾಧಾನ ಹೊರಹಾಕುತ್ತಲೇ ಬಂದಿದ್ದಾರೆ. ಆದರೆ, ಈ ಭರ್ಜರಿ ಪ್ರದರ್ಶನದೊಂದಿಗೆ ಕೊಹ್ಲಿ 2027ರ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಗೌತಮ್ ಗಂಭೀರ್ ಟ್ರೋಲ್ ಮಾಡಿದ ನೆಟ್ಟಿಗರು:

ಇನ್ನು ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸುತ್ತಿದ್ದಂತೆಯೇ ಡಗೌಟ್‌ನಲ್ಲಿ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಹುರಿದುಂಬಿಸಿದರು. ಇನ್ನು ಕೊಹ್ಲಿ ಶತಕ ಸಿಡಿಸಿ ಔಟಾಗಿ ವಾಪಾಸ್ ಬರುವ ವೇಳೆಯಲ್ಲೂ ಗಂಭೀರ್ ಚಪ್ಪಾಳೆ ತಟ್ಟಿದರು. ಇದನ್ನು ಗಮನಿಸಿದ ವಿರಾಟ್ ಕೊಹ್ಲಿ, ಈಗ ನಿಜವಾದ ಬಾಸ್ ಯಾರು ಎನ್ನುವುದು ಗೊತ್ತಾಯಿತಾ ಎಂದು ಗಂಭೀರ್ ಅವರನ್ನು ಟ್ರೋಲ್ ಮಾಡಿದ್ದಾರೆ.

Scroll to load tweet…

Scroll to load tweet…

54ನೇ ಏಕದಿನ ಶತಕ ಸಿಡಿಸಿದ ವಿರಾಟ್ ಕೊಹ್ಲಿ:

ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ ಏಳು ರನ್ ಅಂತರದಲ್ಲಿ ಶತಕ ವಂಚಿತರಾಗಿದ್ದರು. ಆದರೆ ಕೊನೆಯ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಅಂದಹಾಗೆ ಇದು ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಬಾರಿಸಿದ 54ನೇ ಶತಕ ಎನಿಸಿಕೊಂಡಿತು. ಇದಷ್ಟೇ ಅಲ್ಲದೇ ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಎದುರು ಅತಿಹೆಚ್ಚು ಶತಕ ಬಾರಿಸಿದ ಬ್ಯಾಟರ್ ಎನ್ನುವ ಅಪರೂಪದ ದಾಖಲೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.

ಹೌದು, ನ್ಯೂಜಿಲೆಂಡ್ ಎದುರು ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ದಾಖಲೆ ಇದೀಗ ವಿರಾಟ್ ಕೊಹ್ಲಿ ಪಾಲಾಗಿದೆ. ಈ ಮೊದಲು ರಿಕಿ ಪಾಂಟಿಂಗ್ ಕಿವೀಸ್ ಎದುರು 50 ಏಕದಿನ ಇನ್ನಿಂಗ್ಸ್‌ಗಳನ್ನಾಡಿ 6 ಶತಕ ಸಿಡಿಸಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿ, ಕಿವೀಸ್ ಎದುರು ಕೇವಲ 36 ಇನ್ನಿಂಗ್ಸ್‌ಗಳನ್ನಾಡಿ 7 ಶತಕ ಸಿಡಿಸುವ ಮೂಲಕ ಪಾಂಟಿಂಗ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ತಮ್ಮದಾಗಿಸಿಕೊಂಡರು.

ಇನ್ನು ಇದಷ್ಟೇ ಅಲ್ಲದೇ ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಅತಿಹೆಚ್ಚು ರನ್ ಬಾರಿಸಿದ್ದ ರಿಕಿ ಪಾಂಟಿಂಗ್ ದಾಖಲೆಯನ್ನೂ ಕೊಹ್ಲಿ ನುಚ್ಚುನೂರು ಮಾಡಿದರು. ಪಾಂಟಿಂಗ್ ಮೂರನೇ ಕ್ರಮಾಂಕದಲ್ಲಿ 12655 ರನ್ ಬಾರಿಸಿದ್ದರು. ಇದೀಗ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ 12,672 ರನ್ ಸಿಡಿಸಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.