ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಹಾಕಿ ತಂಡ ಆಘಾತಕಾರಿ ಸೋಲು ಕಂಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಶಾರ್ಜಾ: ಚೊಚ್ಚಲ ಐಸಿಸಿ ವಿಶ್ವಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದ ಭಾರತ ಮಹಿಳಾ ತಂಡದ ಕನಸು ಸದ್ಯಕ್ಕೆ ನನಸಾಗುವ ಸಾಧ್ಯತೆ ಕಾಣಿಸುತ್ತಿಲ್ಲ. 9ನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಗುಂಪು ಹಂತದಲ್ಲೇ ಹೊರಬೀಳುವ ಆತಂಕ್ಕೆ ಗುರಿಯಾಗಿದೆ. ಭಾನುವಾರ ನಿರ್ಣಾಯಕ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ತಂಡ 6 ಬಾರಿ ಚಾಂಪಿಯನ್‌ ಆಸ್ಟ್ರೇಲಿಯಾ ವಿರುದ್ಧ 09 ರನ್‌ ಸೋಲನುಭವಿಸಿತು. ಇದು ಭಾರತಕ್ಕೆ ಟೂರ್ನಿಯಲ್ಲಿ 2ನೇ ಸೋಲು. ಅತ್ತ ಆಸೀಸ್‌ ಸತತ 4ನೇ ಗೆಲುವಿನೊಂದಿಗೆ ಅಜೇಯವಾಗಿ ಸೆಮಿಫೈನಲ್‌ ಪ್ರವೇಶಿಸಿತು.

ಭಾರತ ತನ್ನೆಲ್ಲಾ 4 ಪಂದ್ಯಗಳನ್ನಾಡಿದ ಬಳಿಕ 4 ಅಂಕಗಳೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 8 ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಸೋಮವಾರ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ನ್ಯೂಜಿಲೆಂಡ್‌ ಗೆದ್ದರೆ, ಭಾರತ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ. ಒಂದು ವೇಳೆ ಪಾಕಿಸ್ತಾನ ಗೆದ್ದರೆ ಆಗ ಸೆಮೀಸ್‌ ರೇಸ್‌ ಕುತೂಹಲ ಕೆರಳಿಸಲಿದ್ದು, ಭಾರತ, ನ್ಯೂಜಿಲೆಂಡ್‌, ಪಾಕಿಸ್ತಾನ ತಂಡಗಳ ಪೈಕಿ ನೆಟ್‌ ರನ್‌ರೇಟ್‌ನಲ್ಲಿ ಮುಂದಿರುವ ತಂಡ ಸೆಮಿಫೈನಲ್‌ ಪ್ರವೇಶಿಸಲಿವೆ.

ಬಾಬರ್ ಅಜಂ, ಶಾಹೀನ್ ಅಫ್ರಿದಿಗೆ ಗೇಟ್‌ಪಾಸ್; ಇಂಗ್ಲೆಂಡ್ ಎದುರಿನ ಉಳಿದೆರಡು ಟೆಸ್ಟ್‌ಗೆ ಪಾಕ್ ತಂಡದಲ್ಲಿ ಮೇಜರ್ ಸರ್ಜರಿ!

ಭಾನುವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಸೀಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 151 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ಹರ್ಮನ್‌ಪ್ರೀತ್ ಕೌರ್‌ ಹೋರಾಟದ ಹೊರತಾಗಿಯೂ 9 ವಿಕೆಟ್‌ಗೆ 142 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಆರಂಭಿಕ ಆಟಗಾರರು ಈ ಪಂದ್ಯದಲ್ಲೂ ತಂಡಕ್ಕೆ ನೆರವಾಗಲಿಲ್ಲ. ಶಫಾಲಿ ವರ್ಮಾ 20 ರನ್‌ ಸಿಡಿಸಿದರೂ, ಸ್ಮೃತಿ ಮಂಧನಾ 6 ರನ್‌ ಗಳಿಸಲು 12 ಎಸೆತ ಬಳಸಿಕೊಂಡರು. ಜೆಮಿಮಾ ರೋಡ್ರಿಗ್ಸ್‌ 16 ರನ್‌ಗೆ ವಿಕೆಟ್‌ ಒಪ್ಪಿಸಿದರು. ಈ ಹಂತದಲ್ಲಿ ಜೊತೆಯಾದ ಹರ್ಮನ್‌ಪ್ರೀತ್‌ ಹಾಗೂ ದೀಪ್ತಿ ಶರ್ಮಾ 63 ರನ್‌ ಜೊತೆಯಾಟವಾಡಿದರು. ದೀಪ್ತಿ 29 ರನ್‌ಗೆ ಔಟಾದ ಬಳಿಕ ಹರ್ಮನ್‌(47 ಎಸೆತಗಳಲ್ಲಿ ಅಜೇಯ 54) ಹೋರಾಟ ನಡೆಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ. ಸೋಫಿ ಮೋಲಿನ್ಯುಕ್ಸ್‌ 2 ವಿಕೆಟ್‌ ಕಿತ್ತರು.

ಹ್ಯಾರಿಸ್‌ ಮಿಂಚು: ಆಸೀಸ್‌ ಆರಂಭವೇನೂ ಉತ್ತಮವಾಗಿರಲಿಲ್ಲ. 3ನೇ ಓವರ್‌ನಲ್ಲಿ ರೇಣುಕಾ ಸಿಂಗ್‌ 2 ವಿಕೆಟ್‌ ಕಿತ್ತು ಭಾರತಕ್ಕೆ ಮುನ್ನಡೆ ಒದಗಿಸಿದರು. ಆದರೆ ಗ್ರೇಸ್‌ ಹ್ಯಾರಿಸ್‌ 40, ನಾಯಕಿ ತಹಿಲಾ ಮೆಗ್ರಾಥ್‌ 32, ಎಲೈಸಿ ಪೆರ್ರಿ 23 ಎಸೆತಗಳಲ್ಲಿ 32 ರನ್‌ ಸಿಡಿಸಿ ತಂಡವನ್ನು 150ರ ಗಡಿ ದಾಟಿಸಿದರು. ಭಾರತದ ಪರ ರೇಣುಕಾ ಸಿಂಗ್‌, ದೀಪ್ತಿ ಶರ್ಮಾ ತಲಾ 2 ವಿಕೆಟ್‌ ಕಿತ್ತರು.

ಇಂದು ಆಸೀಸ್ ಎದುರು ಗೆದ್ದರೂ, ಸೋತರೂ ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕಿದೆ ಸೆಮೀಸ್‌ಗೇರಲು ಒಳ್ಳೆ ಚಾನ್ಸ್!

ಸ್ಕೋರ್‌: ಆಸ್ಟ್ರೇಲಿಯಾ 20 ಓವರಲ್ಲಿ 151/8 (ಹ್ಯಾರಿಸ್‌ 40, ಮೆಗ್ರಾಥ್‌ 32, ಪೆರ್ರಿ 32, ರೇಣುಕಾ 2-24, ದೀಪ್ತಿ 2-28), ಭಾರತ 20 ಓವರಲ್ಲಿ 142/9 (ಹರ್ಮನ್‌ಪ್ರೀತ್‌ 54*, ದೀಪ್ತಿ 29, ಸೋಫೀ 2-31)

04ನೇ ಫಿಫ್ಟಿ

ಹರ್ಮನ್‌ಪ್ರೀತ್‌ ಟಿ20 ವಿಶ್ವಕಪ್‌ನಲ್ಲಿ 4ನೇ ಅರ್ಧಶತಕ ಬಾರಿಸಿದರು. ಟೂರ್ನಿಯಲ್ಲಿ ಗರಿಷ್ಠ ಅರ್ಧಶತಕ ಬಾರಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು.

ಇಂದು ಕಿವೀಸ್‌ vs ಪಾಕ್‌

ಟಿ20 ವಿಶ್ವಕಪ್‌ನ ‘ಎ’ ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಸೋಮವಾರ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ಮುಖಾಮುಖಿಯಾಗಲಿವೆ. ನ್ಯೂಜಿಲೆಂಡ್‌ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದ್ದು, ಈ ಪಂದ್ಯದಲ್ಲೂ ಜಯಗಳಿಸಿದರೆ ಸೆಮಿಫೈನಲ್‌ ಪ್ರವೇಶಿಸಲಿದೆ. ಅತ್ತ ಪಾಕಿಸ್ತಾನ ಕೂಡಾ ಸೆಮೀಸ್‌ ಸ್ಥಾನದ ಮೇಲೆ ಕಣ್ಣಿಟ್ಟಿದೆ. ತಂಡ ದೊಡ್ಡ ಅಂತರದಲ್ಲಿ ಗೆದ್ದು, ಇತರ ತಂಡಗಳನ್ನು ನೆಟ್‌ ರನ್‌ರೇಟ್‌ನಲ್ಲಿ ಹಿಂದಿಕ್ಕಿದರೆ ಮಾತ್ರ ಸೆಮೀಸ್‌ ಪ್ರವೇಶಿಸಬಹುದು. ತಂಡ ಆಡಿರುವ 3 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿದೆ.