* ಇಂಗ್ಲೆಂಡ್ ಎದುರು ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿ ಬೀಗಿದ ಹರ್ಮನ್‌ಪ್ರೀತ್ ಕೌರ್ ಪಡೆ* ದೀಪ್ತಿ ಶರ್ಮಾ ಮಾಡಿದ ರನೌಟ್ ಸಮರ್ಥಿಸಿಕೊಂಡ ಹರ್ಮನ್‌ಪ್ರೀತ್ ಕೌರ್* ದೀಪ್ತಿ ಶರ್ಮಾ ಮಾಡಿದ ರನೌಟ್ ಬಗ್ಗೆ ಪರ ವಿರೋಧ ಚರ್ಚೆ
ಲಂಡನ್(ಸೆ.25): ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಮೂರನೆ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು 16 ರನ್‌ಗಳ ರೋಚಕ ಸಾಧಿಸುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದೆ. ಇನ್ನು ಈ ಪಂದ್ಯದಲ್ಲಿ ದೀಪ್ತಿ ಶರ್ಮಾ ಮಾಡಿದ ನಾನ್ ಸ್ಟ್ರೈಕ್‌ನಲ್ಲಿದ್ದ ಚಾರ್ಲೊಟ್ಟೆ ಡೀನ್ ಅವರನ್ನು ರನೌಟ್ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ. ಆದರೆ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇಲ್ಲಿನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 170 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಆತಿಥೇಯ ಇಂಗ್ಲೆಂಡ್ ತಂಡವು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಒಂದು ಹಂತದಲ್ಲಿ ಇಂಗ್ಲೆಂಡ್ ಮಹಿಳಾ ತಂಡವು 118 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆದರೆ 10ನೇ ವಿಕೆಟ್‌ಗೆ ಫ್ರೇಯ ಡೇವಿಸ್ ಹಾಗೂ ಚಾರ್ಲೆ ಡೀನ್ 35 ರನ್‌ಗಳ ಜತೆಯಾಟವಾಡುವ ಮೂಲಕ ಭಾರತೀಯ ಪಾಳಯದಲ್ಲಿ ಆತಂಕ ಮನೆ ಮಾಡುವಂತೆ ಮಾಡಿದರು. ಆದರೆ 44ನೇ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತುಕೊಂಡ ದೀಪ್ತಿ ಶರ್ಮಾ, ಬೌಲಿಂಗ್ ಮಾಡುವ ಮುನ್ನವೇ ನಾನ್ ಸ್ಟ್ರೈಕರ್‌ನಲ್ಲಿದ್ದ ಚಾರ್ಲೊಟ್ಟೆ ಡೀನ್ ಕ್ರೀಸ್ ತೊರೆದು ಮುಂದೆ ಹೋದಾಗ ತಡ ಮಾಡದೇ ದೀಪ್ತಿ ಶರ್ಮಾ ಬೇಲ್ಸ್ ಎಗರಿಸುವ ಮೂಲಕ ರನೌಟ್ ಮಾಡಿದರು. ಕೆಲ ದಿನಗಳ ಹಿಂದಷ್ಟೇ ಐಸಿಸಿಯು ಮಂಕಡಿಂಗ್ ಎನ್ನುವ ಬದಲಿಗೆ ಈ ರೀತಿ ಔಟ್ ಮಾಡುವುದನ್ನು ರನೌಟ್ ಎಂದು ತೀರ್ಮಾನಿಸಿ ತನ್ನ ನಿರ್ಣಯ ಪ್ರಕಟಿಸಿತ್ತು. ಇದೀಗ ದೀಪ್ತಿ ಶರ್ಮಾ, ಕ್ರಿಕೆಟ್ ಕಾಶಿ ಎನಿಸಿಕೊಂಡಿರುವ ಲಾರ್ಡ್ಸ್ ಮೈದಾನದಲ್ಲೇ ಈ ರನೌಟ್ ಅನುಷ್ಟಾನಕ್ಕೆ ತಂದಿದ್ದಾರೆ.
ದೀಪ್ತಿ ಶರ್ಮಾ ಮಾಡಿದ ರನೌಟ್ ಈಗ ಟಾಕ್ ಆಫ್ ದಿ ಟೌನ್.!
ಪಂದ್ಯ ಮುಕ್ತಾಯದ ಬಳಿಕ ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆ, ನಿರೂಪಕರು ನಾಯಕಿ ಹರ್ಮನ್‌ಪ್ರೀತ್ ಕೌರ್‌ಗೆ ದೀಪ್ತಿ ಶರ್ಮಾ ಅವರು ರನೌಟ್ ಮಾಡಿದ ರೀತಿಯನ್ನು ಕೇಳುವ ಮೂಲಕ ಮುಜುಗರಕ್ಕೆ ಸಿಲುಕಿಸುವ ಯತ್ನ ನಡೆಸಿದರು. ಇದಕ್ಕೆ ಖಡಕ್ ಆಗಿ ಉತ್ತರಿಸಿದ ಹರ್ಮನ್‌ಪ್ರೀತ್ ಕೌರ್, ನಿಜ ಹೇಳಬೇಕೆಂದರೆ, ನೀವು ನನ್ನನ್ನು ಮೊದಲ 9 ವಿಕೆಟ್ ಕಬಳಿಸಿದ ಬಗ್ಗೆ ಕೇಳುತ್ತೀರಿ ಅಂದುಕೊಂಡಿದ್ದೆ. ಆ 9 ವಿಕೆಟ್ ಕಬಳಿಸಿದ್ದು ಸುಲಭವೇನಲ್ಲ ಎಂದು ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಹರ್ಮನ್‌ಪ್ರೀತ್ ಕೌರ್, ನನ್ನ ತಂಡವನ್ನು ನಾನು ಸಮರ್ಥಿಸಿಕೊಳ್ಳುತ್ತಿದ್ದೇನೆ. ನಾವೇನೂ ತಪ್ಪು ಮಾಡಿಲ್ಲ. ಈ ರೀತಿ ರನೌಟ್ ಮಾಡುವುದು ನಿಯಮದಲ್ಲೇ ಉಲ್ಲೇಖವಾಗಿದೆ. ಅಗತ್ಯ ಬಂದರೆ ಮುಂದೆಯೂ ನಾವು ಹೀಗೆ ಮಾಡುತ್ತೇವೆ ಎನ್ನುವ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ.
