Asianet Suvarna News Asianet Suvarna News

ದೀಪ್ತಿ ಶರ್ಮಾ ಮಾಡಿದ ರನೌಟ್‌ ಈಗ ಟಾಕ್ ಆಫ್‌ ದಿ ಟೌನ್.!

ಲಾರ್ಡ್ಸ್‌ ಮೈದಾನದಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ಎದುರು ಗೆದ್ದು ಬೀಗಿದ ಭಾರತ
ದೀಪ್ತಿ ಶರ್ಮಾ ಮಾಡಿದ ರನೌಟ್ ಈಗ ಚರ್ಚೆಯ ಕೇಂದ್ರ ಬಿಂದು
ದೀಪ್ತಿ ಶರ್ಮಾ ನಡೆಯನ್ನು ಸಮರ್ಥಿಸಿಕೊಂಡ ಭಾರತೀಯ ಕ್ರಿಕೆಟಿಗರು

Deepti Sharma Run Out Of Charlie Dean Divides is Cricket talk of town
Author
First Published Sep 25, 2022, 2:07 PM IST

ಲಂಡನ್‌(ಸೆ.25): ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯವು ಜೂಲನ್ ಗೋಸ್ವಾಮಿ ಪಾಲಿಗೆ ವಿದಾಯದ ಪಂದ್ಯವೆನಿಸಿತ್ತು. ಈ ಪಂದ್ಯದಲ್ಲಿ ಆಲ್ರೌಂಡರ್ ದೀಪ್ತಿ ಶರ್ಮಾ, ನಾನ್‌ ಸ್ಟ್ರೈಕರ್‌ನಲ್ಲಿದ್ದ ಇಂಗ್ಲೆಂಡ್‌ನ ಚಾರ್ಲೆಟ್ಟೆ ಡೀನ್ ಅವರನ್ನು ರನೌಟ್ ಮಾಡುವ ಮೂಲಕ ಭಾರತ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಪಂದ್ಯ ನಿರ್ಣಾಯಕ ಘಟ್ಟದಲ್ಲಿರುವಾಗ ದೀಪ್ತಿ ಶರ್ಮಾ ಮಾಡಿದ ರನೌಟ್‌ ಇದೀಗ ಸದ್ಯ ಕ್ರಿಕೆಟ್‌ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಬಹುತೇಕ ಮಂದಿ ದೀಪ್ತಿ ಶರ್ಮಾ ಮಾಡಿದ ರನೌಟ್‌ ಸಮರ್ಥಿಸಿಕೊಂಡರೆ, ಮತ್ತೆ ಕೆಲವರು ಇದು ಕ್ರೀಡಾ ಸ್ಪೂರ್ತಿಗೆ ವಿರುದ್ದದವಾದ ನಡೆ ಎಂದು ಹಳೆ ರಾಗ ತೆಗೆದಿದ್ದಾರೆ.

ಇಲ್ಲಿನ ಲಾರ್ಡ್ಸ್‌ ಕ್ರಿಕೆಟ್‌ ಮೈದಾನದಲ್ಲಿ ಗೆಲ್ಲಲು 170 ರನ್‌ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು ಆರಂಭಿಕ ಆಘಾತದ ಹೊರತಾಗಿಯೂ ಕೊನೆಯಲ್ಲಿ ಗೆಲುವಿನ ದಾಪುಗಾಲಿಡುತ್ತಿತ್ತು. ಒಂದು ಹಂತದಲ್ಲಿ ಇಂಗ್ಲೆಂಡ್ ತಂಡವು 118 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಕೊನೆಯಲ್ಲಿ ಚಾರ್ಲೊಟ್ಟೆ  ಡೀನ್ ಹಾಗೂ ಪ್ರೆಯಾ ಡೇವಿಸ್ ಜೋಡಿ 10ನೇ ವಿಕೆಟ್‌ಗೆ 35 ರನ್‌ಗಳ ಜತೆಯಾಟವಾಡುವ ಮೂಲಕ ಇಂಗ್ಲೆಂಡ್ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಆದರೆ 44ನೇ ಓವರ್‌ನ ಮೂರನೇ ಎಸೆತದಲ್ಲಿ ದೀಪ್ತಿ ಶರ್ಮಾ ಬೌಲಿಂಗ್ ಮಾಡುವ ಮುನ್ನವೇ ನಾನ್‌ ಸ್ಟ್ರೈಕರ್‌ನಲ್ಲಿದ್ದ ಚಾರ್ಲೊಟ್ಟೆ ಡೀನ್‌ ಕ್ರೀಸ್‌ ತೊರೆದು ಮುಂದೆ ಹೋದಾಗ ತಡ ಮಾಡದೇ ದೀಪ್ತಿ ಶರ್ಮಾ ಬೇಲ್ಸ್‌ ಎಗರಿಸುವ ಮೂಲಕ ರನೌಟ್ ಮಾಡಿದರು. ಕೆಲ ದಿನಗಳ ಹಿಂದಷ್ಟೇ ಐಸಿಸಿಯು ಮಂಕಡಿಂಗ್ ಎನ್ನುವ ಬದಲಿಗೆ ಈ ರೀತಿ ಔಟ್ ಮಾಡುವುದನ್ನು ರನೌಟ್ ಎಂದು ತೀರ್ಮಾನಿಸಿ ತನ್ನ ನಿರ್ಣಯ ಪ್ರಕಟಿಸಿತ್ತು. ಇದೀಗ ದೀಪ್ತಿ ಶರ್ಮಾ, ಕ್ರಿಕೆಟ್ ಕಾಶಿ ಎನಿಸಿಕೊಂಡಿರುವ ಲಾರ್ಡ್ಸ್‌ ಮೈದಾನದಲ್ಲೇ ಈ ರನೌಟ್ ಅನುಷ್ಟಾನಕ್ಕೆ ತಂದಿದ್ದಾರೆ.

ಆದರೆ ದೀಪ್ತಿ ಶರ್ಮಾ ಮಾಡಿದ ಈ ರನೌಟ್ ಕುರಿತಂತೆ ಸಾಕಷ್ಟು ಪರ ಹಾಗೂ ವಿರೋಧ ಚರ್ಚೆಗಳು ವ್ಯಕ್ತವಾಗಿವೆ. ಇಂಗ್ಲೆಂಡ್ ಕ್ರಿಕೆಟಿಗರಾದ ಜೇಮ್ಸ್‌ ಆಂಡರ್‌ಸನ್, ಸ್ಟುವರ್ಟ್‌ ಬ್ರಾಡ್, ಸ್ಯಾಮ್ ಬಿಲ್ಲಿಂಗ್ಸ್ ಸೇರಿದಂತೆ ಕೆಲ ಕ್ರಿಕೆಟಿಗರು ದೀಪ್ತಿ ಶರ್ಮಾ ನಡೆಯನ್ನು ಟೀಕಿಸಿದ್ದಾರೆ. ಸ್ಯಾಮ್ ಬಿಲ್ಲಿಂಗ್ಸ್‌, ಕ್ರಿಕೆಟ್ ಆಡುವ ಯಾರೂ ಕೂಡಾ ಇದನ್ನು ಒಪ್ಪಲು ಸಾಧ್ಯವಿಲ್ಲ, ಇದು ಕ್ರಿಕೆಟ್ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ಅನುಭವಿ ಜೇಮ್ಸ್ ಆಂಡರ್‌ಸನ್‌, ನೋಡಿ, ಬೌಲಿಂಗ್ ಮಾಡುವ ಉದ್ದೇಶವೇ ಇರುವಂತೆ ಕಾಣುತ್ತಿಲ್ಲ ಎಂದು ಕೋಪದ ಎಮೋಜಿ ಬಳಸಿ ಟ್ವೀಟ್ ಮಾಡಿದ್ದಾರೆ.

ಇನ್ನು ಭಾರತದ ವಾಸೀಂ ಜಾಫರ್, ರವಿಚಂದ್ರನ್ ಅಶ್ವಿನ್, ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಕ್ರಿಕೆಟಿಗರು ದೀಪ್ತಿ ಶರ್ಮಾ ಅವರು ಮಾಡಿದ ರನೌಟ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.  ಈ ಕುರಿತಂತೆ ಟ್ವೀಟ್ ಮಾಡಿರುವ ವಾಸೀಂ ಜಾಫರ್, 'ಇದು ತುಂಬಾ ಸಿಂಪಲ್‌, ಬೌಲರ್ ಬೌಲಿಂಗ್ ಮಾಡಲು ಓಡಿ ಬರುತ್ತಿದ್ದಂತೆಯೇ ಸ್ಟ್ರೈಕ್‌ನಲ್ಲಿರುವ ಬ್ಯಾಟರ್ ಹಾಗೂ ನಾನ್‌ ಸ್ಟ್ರೈಕರ್‌ನಲ್ಲಿರುವ ಬ್ಯಾಟರ್‌ ಚೆಂಡಿನ ಮೇಲೆ ಗಮನ ಕೊಡಬೇಕು. ಒಂಚೂರು ಅಜಾಗೃತೆ ತೋರಿದರೂ ಎದುರಾಳಿ ನಿಮ್ಮನ್ನು ಔಟ್ ಮಾಡುತ್ತಾರೆ. ಅದು ಯಾವುದೇ ಬದಿಯಲ್ಲಾದರೂ ಔಟ್ ಆಗುವ ಸಾಧ್ಯತೆ ಇರುತ್ತದೆ ಎಂದು ಜಾಫರ್ ಟ್ವೀಟ್ ಮಾಡಿದ್ದಾರೆ.

ಕ್ರಿಕೆಟ್‌ ಕಂಡು ಹಿಡಿದವರೇ ನಿಯಮ ಮರೆತಿದ್ದಾರೆ ಎಂದು ವಿರೇಂದ್ರ ಸೆಹ್ವಾಗ್ ನಾನ್‌ ಸ್ಟ್ರೈಕ್ ರನೌಟ್‌ನ ರೂಲ್ಸ್‌ ಮಾಹಿತಿಯೊಂದಿಗೆ ಟ್ವೀಟ್ ಮಾಡಿ ಇಂಗ್ಲೆಂಡ್ ತಂಡವನ್ನು ಕಾಲೆಳೆದಿದ್ದಾರೆ. 

ಇನ್ನು ಇಂದು ಯಾಕಾಗಿ ಅಶ್ವಿನ್‌ ಟ್ರೆಂಡಿಂಗ್ ಆಗುತ್ತಿದೆ? ಇಂದು ರಾತ್ರಿ ನಿಜವಾದ ಬೌಲಿಂಗ್ ಹೀರೋ ದೀಪ್ತಿ ಶರ್ಮಾ ಎಂದು ಟ್ವೀಟ್ ಮಾಡುವ ಮೂಲಕ ದೀಪ್ತಿ ಅವರ ಕ್ರಮವನ್ನು ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸಮರ್ಥಿಸಿಕೊಂಡಿದ್ದಾರೆ.

ಈ ಮೊದಲು ರವಿಚಂದ್ರನ್ ಅಶ್ವಿನ್‌, ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಇಂಗ್ಲೆಂಡ್ ಬ್ಯಾಟರ್ ಜೋಸ್ ಬಟ್ಲರ್ ಅವರನ್ನು ಮಂಕಡಿಂಗ್ ರನೌಟ್ ಮಾಡಿದ್ದರು. ಇದಾದ ಬಳಿಕ ಈ ರೀತಿಯ ಘಟನೆ ನಡೆದಾಗಲೆಲ್ಲಾ ಕ್ರಿಕೆಟ್ ಅಭಿಮಾನಿಗಳು ರವಿಚಂದ್ರನ್ ಅಶ್ವಿನ್ ಅವರನ್ನು ನೆನಪಿಸಿಕೊಳ್ಳುತ್ತಾರೆ.

Follow Us:
Download App:
  • android
  • ios