ವಿಜಯ್ ಹಜಾರೆ ಟ್ರೋಫಿಯಲ್ಲಿ ಗೋವಾ ವಿರುದ್ಧ ಸರ್ಫರಾಜ್ ಖಾನ್ ಕೇವಲ 56 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಸ್ಪೋಟಕ ಇನ್ನಿಂಗ್ಸ್ ಮೂಲಕ ಅವರು ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ಮುಂಬೈ ಪರ ಅತಿವೇಗದ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದರು.
ಜೈಪುರ: ವಿಜಯ್ ಹಜಾರೆ ಟ್ರೋಫಿಯಲ್ಲಿಂದು ಬಲಿಷ್ಠ ಮುಂಬೈ ಹಾಗೂ ಗೋವಾ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಸರ್ಫರಾಜ್ ಖಾನ್ ಹಾಗೂ ಮುಶೀರ್ ಖಾನ್ ಜೋಡಿ ಗೋವಾ ಬೌಲರ್‌ಗಳನ್ನು ಚೆಂಡಾಡಿದ್ದಾರೆ. ಸರ್ಫರಾಜ್ ಖಾನ್ ಕೇವಲ 56 ಎಸೆತಗಳಲ್ಲಿ ಶತಕ ಸಿಡಿಸಿ 156 ರನ್‌ಗಳ ದೊಡ್ಡ ಇನ್ನಿಂಗ್ಸ್ ಆಡಿದರು. ಇನ್ನು ಇನ್ನು ಮುಶೀರ್ ಖಾನ್ ಸ್ಪೋಟಕ 60 ರನ್ ಸಿಡಿಸಿದರು. ಈ ಇಬ್ಬರು ಬ್ರದರ್ಸ್ ಬರೋಬ್ಬರಿ 16 ಸಿಕ್ಸರ್ ಹಾಗೂ 14 ಬೌಂಡರಿ ಚಚ್ಚಿದರು. ಪರಿಣಾಮ ಗೋವಾ ಎದುರು ಮುಂಬೈ ತಂಡವು 444 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.
ರೋಹಿತ್ ಶರ್ಮಾ ದಾಖಲೆ ಮುರಿದ ಸರ್ಫರಾಜ್ ಖಾನ್:
ಇನ್ನು ಗೋವಾ ಎದುರಿನ ಈ ಸ್ಪೋಟಕ ಇನ್ನಿಂಗ್ಸ್‌ನೊಂದಿಗೆ ಸರ್ಫರಾಜ್ ಖಾನ್, ರೋಹಿತ್ ಶರ್ಮಾ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾಕಷ್ಟು ಸಮಯದಿಂದ ಭಾರತ ತಂಡದಿಂದ ಹೊರಗುಳಿದಿರುವ ಸರ್ಫರಾಜ್ ಖಾನ್, ಗೋವಾ ಎದುರು ಕೇವಲ 75 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 14 ಸಿಕ್ಸರ್ ಸಹಿತ ಸ್ಪೋಟಕ 157 ರನ್ ಸಿಡಿಸಿದರು. ಇದರ ಜತೆ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರ ದಾಖಲೆಯನ್ನೂ ಅಳಿಸಿ ಹಾಕಿದ್ದಾರೆ.
ಹೌದು, ವಿಜಯ್ ಹಜಾರೆ ಟ್ರೋಫಿ ಹಾಗೂ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಮುಂಬೈ ಪರ ಅತಿವೇಗದ ಶತಕ ಸಿಡಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ರೋಹಿತ್ ಶರ್ಮಾ ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ಮುಂಬೈ ಪರ 62 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ ಸರ್ಫರಾಜ್ ಖಾನ್ ಕೇವಲ 56 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ರೋಹಿತ್ ದಾಖಲೆ ನುಚ್ಚುನೂರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ರೋಹಿತ್ ಶರ್ಮಾ ಆ ಪಂದ್ಯದಲ್ಲಿ 94 ಎಸೆತಗಳನ್ನು ಎದುರಿಸಿ 155 ರನ್ ಸಿಡಿಸಿದ್ದರು.
ದೇಶಿ ಕ್ರಿಕೆಟ್‌ನಲ್ಲಿ ಸರ್ಫರಾಜ್ ಖಾನ್ ಅದ್ಬುತ ಟ್ರ್ಯಾಕ್ ರೆಕಾರ್ಡ್
ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಸರ್ಫರಾಜ್ ಖಾನ್ ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ಸರ್ಫರಾಜ್ ಖಾನ್ 63.15ರ ಬ್ಯಾಟಿಂಗ್ ಸರಾಸರಿಯಲ್ಲಿ 16 ಶತಕ ಹಾಗೂ 16 ಅರ್ಧಶತಕ ಸಿಡಿಸಿದ್ದಾರೆ. ಇನ್ನು ಇತ್ತೀಚೆಗಷ್ಟೇ ಮುಕ್ತಾಯವಾದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಸರ್ಫರಾಜ್ ಖಾನ್ 65.80 ಬ್ಯಾಟಿಂಗ್ ಸರಾಸರಿಯಲ್ಲಿ 329 ರನ್ ಸಿಡಿಸಿದ್ದರು. ಇದೀಗ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಸರ್ಫರಾಜ್ ಖಾನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಇದೀಗ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲೂ ಸರ್ಫರಾಜ್ ಖಾನ್ ತಮ್ಮ ಆರ್ಭಟ ಮುಂದುವರೆಸಿದ್ದು, ಗೋವಾ ಎದುರು 210ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿ ಮಿಂಚಿದ್ದಾರೆ. ಸರ್ಫರಾಜ್ ಖಾನ್, ಮುಶೀರ್ ಖಾನ್ ಜತೆಗೆ ಹಾರ್ದಿಕ್ ತೋಮರ್ ಕೂಡಾ ಅರ್ಧಶತಕ ಸಿಡಿಸಿದರು. ಪರಿಣಾಮ ಗೋವಾ ಎದುರು ಮುಂಬೈ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 444 ರನ್ ಸಿಡಿಸಿದ್ದು, ಎದುರಾಳಿ ಪಡೆಗೆ ಕಠಿಣ ಗುರಿ ನೀಡಿದೆ.


