ವೆಸ್ಟ್ ಇಂಡೀಸ್ ಎದುರು ಮೊದಲೆರಡು ಟಿ20 ಪಂದ್ಯ ಸೋತಿರುವ ಭಾರತಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಹಾರ್ದಿಕ್ ಪಾಂಡ್ಯ ಪಡೆಕೋಚ್ ದ್ರಾವಿಡ್ ಮೇಲೆ ಗಂಭೀರ ಆರೋಪ ಮಾಡಿದ ಮಾಜಿ ಕ್ರಿಕೆಟಿಗ

ಪೋರ್ಟ್ ಆಫ್‌ ಸ್ಪೇನ್(ಆ.08): ಭಾರತ ಕ್ರಿಕೆಟ್ ತಂಡವು ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಟೆಸ್ಟ್, ಏಕದಿನ ಸರಣಿ ಬಳಿಕ ಇದೀಗ ಟಿ20 ಸರಣಿಯಲ್ಲಿ ಪಾಲ್ಗೊಂಡಿದೆ. ಟೆಸ್ಟ್ ಹಾಗೂ ಏಕದಿನ ಸರಣಿ ಗೆದ್ದು ಬೀಗಿರುವ ಟೀಂ ಇಂಡಿಯಾಗೆ ಇದೀಗ ಟಿ20 ಸರಣಿಯು ಒಂದು ರೀತಿ ಕಬ್ಬಿಣದ ಕಡಲೆಯಂತೆ ಭಾಸವಾಗುತ್ತಿದೆ. ವೆಸ್ಟ್‌ ಇಂಡೀಸ್ ಎದುರಿನ 5 ಪಂದ್ಯಗಳ ಟಿ20 ಸರಣಿಯ ಪೈಕಿ ಮೊದಲೆರಡು ಪಂದ್ಯಗಳಲ್ಲಿ ಮುಗ್ಗರಿಸುವ ಮೂಲಕ ನಾಯಕ ಹಾರ್ದಿಕ್ ಪಾಂಡ್ಯ, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಮೇಲ್ನೋಟಕ್ಕೆ ಭಾರತೀಯ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಮಾಡುತ್ತಿರುವ ಪ್ರಯೋಗಗಳ ಕುರಿತಂತೆಯೂ ಕ್ರಿಕೆಟ್ ಪಂಡಿತರು ಟೀಕಾ ಪ್ರಹಾರವನ್ನೇ ನಡೆಸುತ್ತಿದ್ದಾರೆ. ತಂಡದ ಆಯ್ಕೆಯ ವಿಚಾರದಲ್ಲಿ ಹಾಗೂ ಪಂದ್ಯದ ವೇಳೆ ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಹಾರ್ದಿಕ್ ಪಾಂಡ್ಯ ಪದೇ ಪದೇ ಎಡವುತ್ತಿರುವುದು ಟೀಕಾಕಾರರ ಬಾಯಿಗೆ ಸುಲಭ ತುತ್ತಾಗಿ ಪರಿಣಮಿಸಿದೆ. 

ಹಾರ್ದಿಕ್‌ ಎಡ​ವ​ಟ್ಟು!

ವಿಂಡೀಸ್‌ ಗೆಲು​ವಿ​ನತ್ತ ಮುನ್ನು​ಗ್ಗು​ತ್ತಿ​ದ್ದಾಗ ಇನ್ನಿಂಗ್‌್ಸನ 16ನೇ ಓವ​ರಲ್ಲಿ 3 ವಿಕೆಟ್‌ ಪತ​ನ​ಗೊಂಡವು. ಶೆಫರ್ಡ್‌ ರನೌಟ್‌ ಆದರೆ, ಅಪಾ​ಯ​ಕಾರಿ ಹೋಲ್ಡರ್‌ ಹಾಗೂ ಹೆಟ್ಮೇ​ಯರ್‌ರನ್ನು ಚಹಲ್‌ ಔಟ್‌ ಮಾಡಿ​ದರು. ಇದ​ರಿಂದಾಗಿ ವಿಂಡೀಸ್‌ ಒತ್ತ​ಡಕ್ಕೆ ಸಿಲು​ಕಿತು. ಆದರೆ ನಾಯಕ ಹಾರ್ದಿಕ್‌ ಮುಂದಿನ 3 ಓವರ್‌ ವೇಗಿ​ಗ​ಳಿಂದ ಬೌಲ್‌ ಮಾಡಿ​ಸಿ​ದರು. ಚಹಲ್‌ರ ಎಸೆ​ತ​ಗ​ಳನ್ನು ಎದು​ರಿ​ಸಲು ವಿಂಡೀಸ್‌ ದಾಂಡಿ​ಗರು ಪರದಾ​ಡು​ತ್ತಿ​ದ್ದದ್ದು ಸ್ಪಷ್ಟ​ವಾಗಿ ಕಂಡುಬಂದ​ರೂ, ಅವ​ರಿಗೆ ಮತ್ತೊಂದು ಓವರ್‌ ನೀಡದೆ ಹಾರ್ದಿಕ್‌ ಎಡ​ವಟ್ಟು ಮಾಡಿ​ದರು.

ವಿಂಡೀಸ್ ಎದುರಿನ 3ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ, 2 ಬದಲಾವಣೆ..! ಭಾರತ ಸಂಭಾವ್ಯ ತಂಡ

ಇನ್ನು ಇದೆಲ್ಲದರ ನಡುವೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೀಲ್, ಹಾರ್ದಿಕ್ ಪಾಂಡ್ಯಗೆ ಐಪಿಎಲ್‌ ವೇಳೆ ಆಶಿಶ್‌ ನೆಹ್ರಾ ಅವರಿಂದ ಸಿಗುತ್ತಿದ್ದಂತಹ ಬೆಂಬಲ ರಾಹುಲ್ ದ್ರಾವಿಡ್ ಅವರಿಂದ ಸಿಗುತ್ತಿಲ್ಲ ಎನ್ನುವ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 

2022ರ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್ ತಂಡವು ನಾಯಕರನ್ನಾಗಿ ನೇಮಕ ಮಾಡಿಕೊಂಡಿತ್ತು. ಇನ್ನು ಗುಜರಾತ್ ಟೈಟಾನ್ಸ್ ತಂಡಕ್ಕೆ ಆಶಿಶ್‌ ನೆಹ್ರಾ ಹೆಡ್ ಕೋಚ್ ಆಗಿ ನೇಮಕವಾಗಿದ್ದರು. ನೆಹ್ರಾ ಮಾರ್ಗದರ್ಶನದಲ್ಲಿ ಚೊಚ್ಚಲ ಪ್ರಯತ್ನದಲ್ಲಿಯೇ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಮರು ವರ್ಷದಲ್ಲೇ ಅಂದರೆ 2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲೂ ಗುಜರಾತ್ ಟೈಟಾನ್ಸ್ ತಂಡವು ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ರೋಚಕ ಸೋಲು ಅನುಭವಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಐಪಿಎಲ್‌ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಯಶಸ್ಸಿನ ಹಿಂದೆ ಕ್ಯಾಪ್ಟನ್-ಕೋಚ್ ಪಾತ್ರ ಮಹತ್ವದ್ದೆನಿಸಿಕೊಂಡಿತ್ತು.

World Cup 2023: ವಿಶ್ವಕಪ್‌ಗೆ 18 ಆಟಗಾರರನ್ನೊಳಗೊಂಡ ಬಲಿಷ್ಠ ಸಂಭಾವ್ಯ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ..!

ಭಾರತ ಟಿ20 ಕ್ರಿಕೆಟ್ ತಂಡದ ವಿಚಾರಕ್ಕೆ ಬಂದರೆ, ಹಾರ್ದಿಕ್‌ ಪಾಂಡ್ಯಗೆ ರಾಹುಲ್ ದ್ರಾವಿಡ್ ಅವರಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ ಎಂದು ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ. "ಕೆಲವು ಸಂದರ್ಭಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ವಿಚಾರದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಎಡವುತ್ತಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ನಿಕೋಲಸ್ ಪೂರನ್ ಬ್ಯಾಟಿಂಗ್ ಮಾಡಲಿಳಿದಾಗ ಅಕ್ಷರ್ ಪಟೇಲ್‌ಗೆ ಬೌಲಿಂಗ್ ಮಾಡಲು ಅವಕಾಶ ನೀಡಿದ್ದು, ಎರಡನೇ ಟಿ20 ಪಂದ್ಯದಲ್ಲಿ ಯುಜುವೇಂದ್ರ ಚಹಲ್‌ಗೆ 4ನೇ ಓವರ್‌ ಬೌಲಿಂಗ್ ಮಾಡಿಸದೇ ಇದ್ದದ್ದು, ಪಾಂಡ್ಯ ಮಾಡಿದ ಕೆಲವು ಎಡವಟ್ಟುಗಳಾಗಿವೆ. ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ಪರ ಅದ್ಭುತ ನಾಯಕರಾಗಿ ಹೊರಹೊಮ್ಮಿದ್ದಾರೆ. ಯಾಕೆಂದರೆ ಅಲ್ಲಿ ಕೋಚ್ ಆಶಿಶ್ ನೆಹ್ರಾ ಅವರಿಂದ ಉತ್ತಮ ಬೆಂಬಲ ಸಿಗುತ್ತಿದೆ. ಇನ್ನು ಭಾರತ ಟಿ20 ಕ್ರಿಕೆಟ್ ವಿಚಾರಕ್ಕೆ ಬಂದರೆ ರಾಹುಲ್ ದ್ರಾವಿಡ್ ಅಷ್ಟೊಂದು ಪ್ರಭಾವಿ ಕೋಚ್ ಎನ್ನುವಂತೆ ಭಾಸವಾಗುತ್ತಿಲ್ಲ. ಹಾರ್ದಿಕ್ ಪಾಂಡ್ಯ ಬೆಂಕಿ ಚೆಂಡು ಇದ್ದಂತೆ, ಅವರಿಗೆ ಕಿಡಿ ಹೊತ್ತಿಸುವವರು ಬೇಕಿದೆ. ಆ ರೀತಿಯ ಬೆಂಬಲ ದ್ರಾವಿಡ್‌ನಿಂದ ಸಿಗುತ್ತಿಲ್ಲ ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.