Asianet Suvarna News Asianet Suvarna News

World Cup 2023: ವಿಶ್ವಕಪ್‌ಗೆ 18 ಆಟಗಾರರನ್ನೊಳಗೊಂಡ ಬಲಿಷ್ಠ ಸಂಭಾವ್ಯ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ..!

ಏಕದಿನ ವಿಶ್ವಕಪ್ ಟೂರ್ನಿಗೆ ಸಂಭಾವ್ಯ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟ
18 ಆಟಗಾರರನ್ನೊಳಗೊಂಡ ಸಂಭಾವ್ಯ ಆಸೀಸ್‌ ತಂಡದಲ್ಲಿ ಮಾರ್ನಸ್ ಲಬುಶೇನ್‌ಗಿಲ್ಲ ಸ್ಥಾನ
ಸಾಕಷ್ಟು ಯುವ-ಅನುಭವಿ ಆಟಗಾರರನ್ನು ಒಳಗೊಂಡ ಆಸೀಸ್ ಸಂಭಾವ್ಯ ತಂಡ ಪ್ರಕಟ

Cricket Australia announces their 18 man Probable squad for the ICC ODI World Cup 2023 kvn
Author
First Published Aug 8, 2023, 3:47 PM IST

ಮೆಲ್ಬರ್ನ್‌(ಆ.08): ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಏಕದಿನ ಕ್ರಿಕೆಟ್‌ನ ಅತಿದೊಡ್ಡ ಹಬ್ಬಕ್ಕೆ ವೇದಿಕೆ ಸಜ್ಜಾಗಿದ್ದು, ಇದೇ ಮೊದಲ ಬಾರಿಗೆ ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿದೆ. ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳುತ್ತಿದ್ದು, ಎಲ್ಲಾ ತಂಡಗಳು ಟ್ರೋಫಿ ಮೇಲೆ ಕಣ್ಣಿಟ್ಟಿವೆ.

ಇನ್ನು ಪ್ರತಿಷ್ಠಿತ ವಿಶ್ವಕಪ್ ಟ್ರೋಫಿ ಗೆಲ್ಲಲು ಎಲ್ಲಾ ತಂಡಗಳು ಸಾಕಷ್ಟು ರಣತಂತ್ರ ಹೆಣೆಯುತ್ತಿದ್ದು, ಸಾಕಷ್ಟು ಅಳೆದು ತೂಗಿ ತಂಡಗಳನ್ನು ಆಯ್ಕೆ ಮಾಡುತ್ತಿವೆ. ಇನ್ನು 5 ಬಾರಿಯ ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಎಲ್ಲರಿಗಿಂತ ಮೊದಲೇ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ 18 ಆಟಗಾರನ್ನೊಳಗೊಂಡ ಸಂಭಾವ್ಯ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ನಿರೀಕ್ಷೆಯಂತೆಯೇ ಪ್ಯಾಟ್‌ ಕಮಿನ್ಸ್‌, ನಾಯಕನಾಗಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದು, ಎಲ್ಲಾ ವಿಭಾಗದಲ್ಲೂ ಬಲಾಢ್ಯ ವಿಶ್ವದರ್ಜೆಯ ಆಟಗಾರರು ಒಳಗೊಂಡಿದ್ದಾರೆ. ಆಸ್ಟ್ರೇಲಿಯಾ ಪ್ರಕಟಿಸಿದ 18 ಸಂಭಾವ್ಯ ಆಟಗಾರರ ತಂಡದಲ್ಲಿ ಸಾಕಷ್ಟು ಅನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡಿದ್ದಾರೆ.

ಕಾಶ್ಮೀರಿ ಯುವತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸರ್ಫರಾಜ್ ಖಾನ್..! ಇಲ್ಲಿವೆ ನೋಡಿ ಮದುವೆ ಫೋಟೋಗಳು

ಆಸ್ಟ್ರೇಲಿಯಾ ಸಂಭಾವ್ಯ ತಂಡದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್ ಅವರಂತಹ ಆಟಗಾರರು ಸ್ಥಾನ ಪಡೆದಿದ್ದಾರೆ. ಒತ್ತಡದ ಪರಿಸ್ಥಿತಿಯಲ್ಲೂ ಸರಾಗವಾಗಿ ರನ್‌ ಗಳಿಸುವ ಕ್ಷಮತೆ ಈ ಬ್ಯಾಟರ್‌ಗಳ ಬಳಿ ಇದೆ. ಇನ್ನು ಆಸೀಸ್ ತಂಡದಲ್ಲಿ ಆಲ್ರೌಂಡರ್‌ಗಳ ದಂಡೇ ಇದ್ದು, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್, ಮಿಚೆಲ್ ಮಾರ್ಷ್, ಕ್ಯಾಮರೋನ್ ಗ್ರೀನ್‌ ಅವರಂತಹ ತಾರಾ ಆಟಗಾರರಿಗೆ ಮಣೆ ಹಾಕಲಾಗಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ನಾಯಕ ಪ್ಯಾಟ್ ಕಮಿನ್ಸ್‌ ಜತೆಗೆ ಜೋಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್, ಶಾನ್ ಅಬೋಟ್, ನೇಥನ್ ಎಲ್ಲಿಸ್ ಸ್ಥಾನ ಪಡೆದಿದ್ದಾರೆ. ಸ್ಪಿನ್ನರ್ ವಿಭಾಗದಲ್ಲಿ ಆಸ್ಟನ್ ಏಗಾರ್, ಆಡಂ ಜಂಪಾ ಸ್ಥಾನ ಪಡೆದಿದ್ದಾರೆ. ವಿಕೆಟ್ ಕೀಪರ್ ರೂಪದಲ್ಲಿ ಅಲೆಕ್ಸ್ ಕ್ಯಾರಿ ಹಾಗೂ ಜೋಶ್ ಇಂಗ್ಲಿಶ್‌ ಸ್ಥಾನ ಪಡೆದಿದ್ದಾರೆ. ಆದರೆ ಸ್ಥಿರ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಾ ಬಂದಿರುವ ಅನುಭವಿ ಬ್ಯಾಟರ್ ಮಾರ್ನಸ್ ಲಬುಶೇನ್‌, ಅಚ್ಚರಿ ಎನ್ನುವಂತೆ ಆಸ್ಟ್ರೇಲಿಯಾ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.

ಆಸ್ಟ್ರೇಲಿಯಾ ತಂಡವು 2015ರಲ್ಲಿ ಕೊನೆಯ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2019ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ಸೆಮಿಫೈನಲ್ ಪ್ರವೇಶಿಸಿತ್ತಾದರೂ, ಅಂತಿಮ ನಾಲ್ಕರ ಘಟ್ಟದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ಮುಗ್ಗರಿಸುವ ಮೂಲಕ ತನ್ನ ಅಭಿಯಾನವನ್ನು ಮುಗಿಸಿತ್ತು. ಇದೀಗ ಕಪ್ ಗೆಲ್ಲಲು ಪ್ಯಾಟ್ ಕಮಿನ್ಸ್‌ ಪಡೆ ಎದುರು ನೋಡುತ್ತಿದೆ. 

'ಇವರೇ ಕಾರಣ': ವೆಸ್ಟ್ ಇಂಡೀಸ್ ಎದುರಿನ ಸೋಲಿಗೆ ಕಾರಣ ಬಿಚ್ಚಿಟ್ಟ ಹಾರ್ದಿಕ್ ಪಾಂಡ್ಯ..!

ಈಗಾಗಲೇ ಟೆಸ್ಟ್ ವಿಶ್ವಕಪ್‌ ಫೈನಲ್‌ ಗೆದ್ದು, ಇಂಗ್ಲೆಂಡ್‌ ನೆಲದಲ್ಲಿ ಆಷಸ್ ಟೆಸ್ಟ್ ಸರಣಿ ಉಳಿಸಿಕೊಂಡ ಪ್ಯಾಟ್ ಕಮಿನ್ಸ್‌ ಪಡೆ ಇದೀಗ ಭಾರತದಲ್ಲಿ ವಿಶ್ವಕಪ್ ಎತ್ತಿಹಿಡಿಯುವ ಕನಸು ಕಾಣುತ್ತಿದೆ. ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಭಾರತದ ವಿವಿಧ 10 ಸ್ಟೇಡಿಯಂಗಳಲ್ಲಿ ನಡೆಯಲಿದೆ. 

ಏಕದಿನ ವಿಶ್ವಕಪ್ ಟೂರ್ನಿಗೆ ಸಂಭಾವ್ಯ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:  

ಪ್ಯಾಟ್ ಕಮಿನ್ಸ್‌(ನಾಯಕ), ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಶಾನ್ ಅಬ್ಬೋಟ್, ಆಸ್ಟನ್ ಏಗರ್, ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), ನೇಥನ್ ಎಲ್ಲೀಸ್, ಕ್ಯಾಮರೋನ್ ಗ್ರೀನ್, ಆರೋನ್ ಹ್ಯಾಡ್ಲಿ, ಜೋಶ್ ಹೇಜಲ್‌ವುಡ್‌, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಶ್(ವಿಕೆಟ್ ಕೀಪರ್), ಮಿಚೆಲ್ ಮಾರ್ಷ್‌, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘಾ, ಮಿಚೆಲ್ ಸ್ಟಾರ್ಕ್‌, ಮಾರ್ಕಸ್ ಸ್ಟೋನಿಸ್, ಆಡಂ ಜಂಪಾ.

* 18 ಆಟಗಾರರ ಸಂಭಾವ್ಯ ತಂಡವನ್ನು ಪರಿಷ್ಕರಿಸಿ 15 ಆಟಗಾರರ ತಂಡ ಸದ್ಯದಲ್ಲೇ ಅಂತಿಮಗೊಳ್ಳುವ ಸಾಧ್ಯತೆಯಿದೆ

Follow Us:
Download App:
  • android
  • ios