ಭಾರತ-ನ್ಯೂಜಿಲೆಂಡ್ ಮೂರನೇ ಟಿ20 ಪಂದ್ಯಕ್ಕೆ ಕ್ಷಣಗಣನೆಟಿ20 ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಟೀಂ ಇಂಡಿಯಾಈಗಾಗಲೇ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ಹಾರ್ದಿಕ್ ಪಾಂಡ್ಯ ಪಡೆ

ನೇಪಿಯರ್‌(ನ.22): ಟಿ20 ವಿಶ್ವಕಪ್‌ ಸೋಲಿನ ಕಹಿ ನೆನಪನ್ನು ಮರೆತು ನ್ಯೂಜಿಲೆಂಡ್‌ ವಿರುದ್ಧ ಟಿ20 ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿರುವ ಭಾರತ, ಮಂಗಳವಾರ 3ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಸರಣಿಯಲ್ಲಿ ಸದ್ಯ ಭಾರತ 1-0 ಅಂತರದಲ್ಲಿ ಮುನ್ನಡೆಯಲ್ಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೊದಲ ಟಿ20 ಪಂದ್ಯವು ಮಳೆಯಿಂದಾಗಿ ಒಂದೂ ಎಸೆತ ಕಾಣದೇ ರದ್ದಾಗಿತ್ತು. ಇನ್ನು ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬಾರಿಸಿದ ಸ್ಪೋಟಕ ಶತಕ ಹಾಗೂ ದೀಪಕ್ ಹೂಡಾ ಮಾರಕ ದಾಳಿಯ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್ ಎದುರು ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ, 65 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, ಇದೀಗ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಗೆಲುವ ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಇನ್ನು ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌, ಉಮ್ರಾನ್‌ ಮಲಿಕ್‌ಗೆ ಸ್ಥಾನ ಸಿಗುವ ನಿರೀಕ್ಷೆ ಇದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಸೂರ್ಯಕುಮಾರ್ ಯಾದವ್, ಕಿವೀಸ್ ಎದುರಿನ ಎರಡನೇ ಪಂದ್ಯದಲ್ಲೂ ಅಬ್ಬರಿಸಿದ್ದರು. ಇನ್ನು ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್‌ಗೆ ವಿಶ್ರಾಂತಿ ನೀಡಿ ಸಂಜು ಸ್ಯಾಮ್ಸನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಕಲ್ಪಿಸುವ ಸಾಧ್ಯತೆಯಿದೆ. ಇದರ ಜತೆಗೆ ಆರ್ಶದೀಪ್ ಸಿಂಗ್‌ಗೆ ವಿಶ್ರಾಂತಿ ನೀಡಿ ಮಾರಕ ವೇಗಿ ಉಮ್ರಾನ್ ಮಲಿಕ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿದರೆ ಅಚ್ಚರಿಯಿಲ್ಲ.

New Zealand vs India: ಸೂರ್ಯ ಸ್ಫೋಟಕ ಶತಕ, ಕಿವೀಸ್‌ಗೆ ಸೋಲಿನ ಸೂತಕ!

ಮತ್ತೊಂದೆಡೆ ಕಿವೀಸ್‌ಗೆ ಸರಣಿ ಸಮಬಲಗೊಳಿಸುವ ಒತ್ತಡದಲ್ಲಿದ್ದು, ಚಿಕಿತ್ಸೆಗೆ ದಾಖಲಾಗಲಿರುವ ಕಾರಣ ಕೇನ್‌ ವಿಲಿಯಮ್ಸನ್‌ ಈ ಪಂದ್ಯಕ್ಕೆ ಗೈರಾಗಲಿದ್ದಾರೆ. ಟಿಮ್‌ ಸೌಥಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಮುನ್ನಡೆಸಲಿದ್ದಾರೆ. ಕೇನ್ ವಿಲಿಯಮ್ಸನ್ ಬದಲಿಗೆ ಮಧ್ಯಮ ಕ್ರಮಾಂಕದಲ್ಲಿ ಮಾರ್ಕ್‌ ಚಾಪ್ಮನ್‌ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. 

ಈಗಾಗಲೇ ಎರಡನೇ ಟಿ20 ಪಂದ್ಯ ಸೋತಿರುವ ನ್ಯೂಜಿಲೆಂಡ್ ತಂಡವು, ಸರಣಿ ಸಮಬಲ ಸಾಧಿಸಬೇಕಿದ್ದರೇ, ಫಿನ್ ಅಲೆನ್, ಡೆವೊನ್ ಕಾನ್‌ವೇ ಜತೆಗೆ ಗ್ಲೆನ್ ಫಿಲಿಫ್ಸ್‌, ಜೇಮ್ಸ್‌ ನೀಶಮ್ ಹಾಗೂ ಡೇರಲ್ ಮಿಚೆಲ್ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಟಿಮ್ ಸೌಥಿಗೆ ಲಾಕಿ ಫರ್ಗ್ಯೂಸನ್, ಆಡಂ ಮಿಲ್ನೆ ಕೂಡಾ ಉತ್ತಮ ಸಾಥ್ ನೀಡಬೇಕಿದೆ.

ಸಂಭಾವ್ಯ ತಂಡಗಳು:

ಭಾರತ: ರಿಷಭ್ ಪಂತ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಹಲ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್.

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್‌ವೇ, ಗ್ಲೆನ್ ಫಿಲಿಫ್ಸ್, ಡೇರಲ್ ಮಿಚೆಲ್, ಮಾರ್ಕ್ ಚಾಂಪ್ಮನ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ(ನಾಯಕ), ಆಡಂ ಮಿಲ್ನೆ, ಇಶ್ ಸೋಧಿ, ಲಾಕಿ ಫರ್ಗ್ಯೂಸನ್. 

ಪಂದ್ಯ: ಮಧ್ಯಾಹ್ನ 12ಕ್ಕೆ
ನೇರ ಪ್ರಸಾರ: ಅಮೆಜಾನ್‌ ಪ್ರೈಮ್‌/ಡಿಡಿ ಸ್ಪೋರ್ಟ್ಸ್