* ಕೆಕೆಆರ್ ಎದುರು 156 ರನ್‌ ಕಲೆಹಾಕಿದ ಗುಜರಾತ್ ಟೈಟಾನ್ಸ್* ಕೊನೆಯ ಓವರ್‌ನಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದ ಆಂಡ್ರೆ ರಸೆಲ್* ಆಕರ್ಷಕ ಅರ್ಧಶತಕ ಚಚ್ಚಿದ ಹಾರ್ದಿಕ್ ಪಾಂಡ್ಯ

ಮುಂಬೈ(ಏ.23): ಹಾರ್ದಿಕ್‌ ಪಾಂಡ್ಯ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು 9 ವಿಕೆಟ್ ಕಳೆದುಕೊಂಡು 156 ರನ್‌ ಬಾರಿಸಿದ್ದು, ಕೋಲ್ಕತಾ ನೈಟ್ ರೈಡರ್ಸ್ ಗೆಲ್ಲಲು ಸ್ಪರ್ಧಾತ್ಮಕ ಗುರಿ ನೀಡಿದೆ. ಕೆಕೆಆರ್ ತಂಡದ ಪರ ವೇಗಿ ಟಿಮ್ ಸೌಥಿ 3 ವಿಕೆಟ್ ಕಬಳಿಸಿದರೆ, ಆಂಡ್ರೆ ರಸೆಲ್‌ ಕೇವಲ ಒಂದು ಓವರ್ ಬೌಲಿಂಗ್ ಮಾಡಿ 5 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಗುಜರಾತ್ ರನ್‌ ವೇಗಕ್ಕೆ ಕಡಿವಾಣ ಹಾಕಿದರು. 

ಇಲ್ಲಿನ ಡಾ. ಡಿವೈ ಪಾಟೀಲ್ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ವೇಗಿ ಟಿಮ್ ಸೌಥಿ ತಮ್ಮ ಮೊದಲ ಎಸೆತದಲ್ಲೇ ಶುಭ್‌ಮನ್‌ ಗಿಲ್ ಅವರ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಶುಭ್‌ಮನ್ ಗಿಲ್‌ ಕೇವಲ 7 ರನ್ ಬಾರಿಸಿ ವಿಕೆಟ್ ಕೀಪರ್ ಸ್ಯಾಮ್ ಬಿಲ್ಲಿಂಗ್ಸ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ವೃದ್ದಿಮಾನ್ ಸಾಹ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ 75 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ವಿಕೆಟ್ ಕೀಪರ್ ಬ್ಯಾಟರ್‌ ವೃದ್ದಿಮಾನ್ ಸಾಹ 25 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 25 ರನ್ ಬಾರಿಸಿ ಉಮೇಶ್ ಯಾದವ್‌ಗೆ ವಿಕೆಟ್‌ ಒಪ್ಪಿಸಿದರು.

ಸಮಯೋಚಿತ ಅರ್ಧಶತಕ ಚಚ್ಚಿದ ಹಾರ್ದಿಕ್ ಪಾಂಡ್ಯ: ಹೌದು, ಆರಂಭದಲ್ಲೇ ಶುಭ್‌ಮನ್ ಗಿಲ್ ವಿಕೆಟ್ ಕಳೆದುಕೊಂಡಿದ್ದರಿಂದ ಎರಡನೇ ಓವರ್‌ನಲ್ಲೇ ಕ್ರೀಸ್‌ಗಿಳಿದ ಹಾರ್ದಿಕ್‌ ಪಾಂಡ್ಯ, ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದರು. ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ 36 ಎಸೆತಗಳನ್ನು ಎದುರಿಸಿ ಪ್ರಸಕ್ತ ಆವೃತ್ತಿಯ ಟಾಟಾ ಐಪಿಎಲ್‌ ಟೂರ್ನಿಯಲ್ಲಿ ಮೂರನೇ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಅಂತಿಮವಾಗಿ ಹಾರ್ದಿಕ್ ಪಾಂಡ್ಯ 49 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 67 ರನ್ ಬಾರಿಸಿ ಟಿಮ್‌ ಸೌಥಿಗೆ ವಿಕೆಟ್ ಒಪ್ಪಿಸಿದರು.

Hardik Pandya ಆಕರ್ಷಕ ಅರ್ಧಶತಕ, ಬೃಹತ್ ಮೊತ್ತದತ್ತ ಟೈಟಾನ್ಸ್‌..!

Scroll to load tweet…

ಟಿಮ್‌ ಸೌಥಿ-ರಸೆಲ್ ಬಿರುಗಾಳಿ: ಪ್ಯಾಟ್ ಕಮಿನ್ಸ್‌ ಅನುಪಸ್ಥಿತಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಕಿವೀಸ್ ಅನುಭವಿ ವೇಗಿ ಟಿಮ್‌ ಸೌಥಿ, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಶುಭ್‌ಮನ್ ಗಿಲ್ ವಿಕೆಟ್‌ ಕಬಳಿಸಿದ ಸೌಥಿ, ಇದಾದ ಬಳಿಕ ಅರ್ಧಶತಕ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.

Scroll to load tweet…

ಇನ್ನು 20ನೇ ಓವರ್‌ ಬೌಲಿಂಗ್ ಮಾಡಲಿಳಿದ ಕೆರಿಬಿಯನ್ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ ಪಂದ್ಯದ ದಿಕ್ಕನ್ನೇ ಬದಲಿಸಿದರು. ಕೊನೆಯ ಓವರ್‌ನಲ್ಲಿ ಕೇವಲ 5 ರನ್‌ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು 160 ರನ್‌ಗಳೊಳಗಾಗಿ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 

ಸಂಕ್ಷಿಪ್ತ ಸ್ಕೋರ್

ಗುಜರಾತ್ ಟೈಟಾನ್ಸ್‌: 156/9
ಹಾರ್ದಿಕ್ ಪಾಂಡ್ಯ: 67
ಡೇವಿಡ್ ಮಿಲ್ಲರ್: 27

ಆಂಡ್ರೆ ರಸೆಲ್: 5/4
(* ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)