ಕೆಕೆಆರ್ ಎದುರು ಭರ್ಜರಿ ಅರ್ಧಶತಕ ಬಾರಿಸಿದ ಹಾರ್ದಿಕ್ ಪಾಂಡ್ಯ* ಬೃಹತ್ ಮೊತ್ತದತ್ತ ಗುಜರಾತ್ ಟೈಟಾನ್ಸ್ ದಾಪುಗಾಲು* 13 ಓವರ್ ಅಂತ್ಯದ ವೇಳಗೆ 2 ವಿಕೆಟ್ ಕಳೆದುಕೊಂಡು 102 ರನ್ ಬಾರಿಸಿದ ಗುಜರಾತ್

ಮುಂಬೈ(ಏ.23): ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಕೋಲ್ಕತಾ ನೈಟ್ ರೈಡರ್ಸ್ ಎದುರು ಮತ್ತೊಂದು ಆಕರ್ಷಕ ಇನಿಂಗ್ಸ್‌ ಆಡುವಲ್ಲಿ ಯಶಸ್ವಿಯಾಗಿದ್ದಾರೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 35ನೇ ಪಂದ್ಯದಲ್ಲಿ ಕೆಕೆಆರ್ ಎದುರು ಹಾರ್ದಿಕ್ ಪಾಂಡ್ಯ ಕೇವಲ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಸಂಭ್ರಮಿಸಿದ್ದಾರೆ.

ಇಲ್ಲಿನ ಡಾ. ಡಿವೈ ಪಾಟೀಲ್ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್‌ ಕೇವಲ 7 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನಿಂಗ್ಸ್‌ನ ಎರಡನೇ ಓವರ್‌ನ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿದ್ದರಿಂದ ಪವರ್‌ ಪ್ಲೇನಲ್ಲೇ ಕ್ರೀಸ್‌ಗಿಳಿದ ಹಾರ್ದಿಕ್ ಪಾಂಡ್ಯ, ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹ ಜತೆಗೂಡಿ 75 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ವೃದ್ದಿಮಾನ್ ಸಾಹ 25 ಎಸೆತಗಳನ್ನು ಎದುರಿಸಿ 25 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. 

ಮೂರನೇ ಅರ್ಧಶತಕ ಚಚ್ಚಿದ ಪಾಂಡ್ಯ: ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಹಾರ್ದಿಕ್ ಪಾಂಡ್ಯ ವೃತ್ತಿಜೀವನದ 7ನೇ ಐಪಿಎಲ್ ಅರ್ಧಶತಕ ಬಾರಿಸಿ ಮಿಂಚಿದರು. ಹಾರ್ದಿಕ್ ಪಾಂಡ್ಯ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೂರನೇ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಅಂದಹಾಗೆ ಇದು ಮೂರನೇ ಕ್ರಮಾಂಕದಲ್ಲಿ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಬಾರಿಸಿದ ಮೊದಲ ಅರ್ಧಶತಕ ಎನಿಸಿದೆ. ಹಾರ್ದಿಕ್ ಪಾಂಡ್ಯ ಕೇವಲ 36 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 50 ರನ್ ಪೂರೈಸಿದರು.

Scroll to load tweet…

ಹಾರ್ದಿಕ್‌ ಪಾಂಡ್ಯ ಮುಂದಾಳತ್ವದ ಗುಜರಾತ್‌ ಟೈಟಾನ್ಸ್ ಎಲ್ಲಾ ವಿಭಾಗಗಳಲ್ಲಿಯೂ ಅಬ್ಬರಿಸುತ್ತಿದ್ದು, ಆಡಿರುವ 6 ಪಂದ್ಯಗಳಲ್ಲಿ ಕೇವಲ 1ರಲ್ಲಿ ಸೋತಿದೆ. ಇನ್ನೊಂದೆಡೆ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್‌ ತಂಡವು ಹ್ಯಾಟ್ರಿಕ್ ಸೋಲು ಅನುಭವಿಸಿದ್ದು, ಗೆಲುವಿನ ಲಯಕ್ಕೆ ಬರಲು ಎದುರು ನೋಡುತ್ತಿದೆ. ಹಾರ್ದಿಕ್‌ ಪಾಂಡ್ಯ ಕೇವಲ ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್‌ನಲ್ಲೂ ಸೊಗಸಾದ ಪ್ರದರ್ಶನ ತೋರುತ್ತಿದ್ದು, ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.