ಹಾರ್ದಿಕ್ ಪಾಂಡ್ಯ ಅವರು ಮಗನೊಂದಿಗೆ ಹಲವು ಚಿತ್ರಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ ಆದರೆ ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಎಲ್ಲಾ ಚಿತ್ರಗಳಿಂದ ನಾಪತ್ತೆಯಾಗಿದ್ದಾರೆ. 

ಮುಂಬೈ (ಜು.6): ಹಾರ್ದಿಕ್‌ ಪಾಂಡ್ಯ ಹಲವು ದಿನಗಳ ಬಳಿಕ ಪುತ್ರ ಅಗಸ್ತ್ಯನ ಜೊತೆ ಕಾಣಿಸಿಕೊಂಡಿದ್ದಾರೆ. ಕಳೆದ ಶನಿವಾರ ಬಾರ್ಬಡೋಸ್‌ನಲ್ಲಿ ಐತಿಹಾಸಿಕ ಟಿ20 ವಿಶ್ವಕಪ್‌ ಗೆಲುವಿಗೆ ಪ್ರಮುಖವಾಗಿ ಕಾರಣವಾದ ಬಳಿಕ ಶುಕ್ರವಾರ ಹಾರ್ದಿಕ್‌ ಪಾಂಡ್ಯ ತಮ್ಮ ಸ್ವಗೃಹಕ್ಕೆ ವಾಪಸಾಗಿದ್ದಾರೆ. ಈ ವೇಳೆ ಮಗನೊಂದಿಗೆ ಸಾಕಷ್ಟು ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ. ಆದರೆ, ಅಚ್ಚರಿ ಎನ್ನುವಂತೆ ಅವರ ಪತ್ನಿ ನತಾಶಾ ಸ್ಟಾಂಕೋವಿಕ್‌ ಮಾತ್ರ ಎಲ್ಲಾ ಫೋಟೋಗಳಿಂದ ನಾಪತ್ತೆಯಾಗಿದ್ದಾರೆ. ಅದರೊಂದಿಗೆ ಇವರಿಬ್ಬರ ಡಿವೋರ್ಸ್‌ಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಪುತ್ರ ಅಗಸ್ತ್ಯನ ಜೊತೆ ಇರುವ ಸಾಕಷ್ಟು ಪೋಟೋಗಳನ್ನು ಹಾರ್ದಿಕ್‌ ಪಾಂಡ್ಯ ಹಂಚಿಕೊಂಡಿದ್ದಾರೆ. ನೀಲಿ ಬಣ್ಣದ ಬಲೂನ್‌ನ ಹಿನ್ನಲೆಯಲ್ಲಿ ಹಾರ್ದಿಕ್‌ ಪಾಂಡ್ಯ ಮನೆಯಲ್ಲಿಯೇ ಕೇಕ್‌ ಕತ್ತರಿಸಿದ್ದಾರೆ. ಈ ಚಿತ್ರಗಳಿಗೆ 'ನನ್ನ ನಂ.1, ನಾನೇನು ಮಾಡುತ್ತೇನೆಯೋ, ಅದೆಲ್ಲವೂ ನಿನಗಾಗಿ ಮಾತ್ರ..' ಎಂದು ಅವರು ಬರೆದುಕೊಂಡಿದ್ದಾರೆ. ಈ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಯಾರು ಶೂಟ್‌ ಮಾಡಿದ್ದಾರೆ ಅನ್ನೋದು ತಿಳಿದಿಲ್ಲ. ಆದರೆ, ಎಲ್ಲಾ ಪೋಸ್ಟ್‌ಗಳಲ್ಲಿ ನತಾಶಾ ಮಾತ್ರ ಮಿಸ್‌ ಆಗಿದ್ದಾರೆ.

ಈ ಫೋಟೋಗೆ ಸಾಕಷ್ಟು ಅಭಿಮಾನಿಗಳು ಹಾರ್ದಿಕ್‌ಗೆ ಶುಭಾಶಯ ತಿಳಿಸಿದ್ದಾರೆ. ಅದರೊಂದಿಗೆ ನತಾಶಾ ಎಲ್ಲಿದ್ದಾರೆ ಎಂದೂ ಪ್ರಶ್ನೆ ಮಾಡಿದ್ದಾರೆ. ನಿಮ್ಮ ವೈಫ್‌ ಯಾವ ಫೋಟೋದಲ್ಲೂ ಕಾಣುತ್ತಿಲ್ಲವಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬ ಅಭಿಮಾನಿ, ನತಾಶಾ ಜೊತೆ ನೀವು ಇನ್ನೊಂದು ಫೋಟೋ ಪೋಸ್ಟ್‌ ಮಾಡಿ, ನತಾಶಾ ಜೊತೆಗೂ ನೀವು ಫೋಟೋ ಹಂಚಿಕೊಳ್ಳಿ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ನತಾಶಾ ಸ್ಟಾಂಕೋವಿಕ್‌ ಹಾಗೂ ಹಾರ್ದಿಕ್‌ ಪಾಂಡ್ಯ ಇಬ್ಬರೂ ವಿಚ್ಛೇದನಕ್ಕೆ ಒಳಗಾಗಲಿದ್ದಾರೆ ಎನ್ನುವ ಸುದ್ದು ರೆಡಿಟ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಅದರೊಂದಿಗೆ ಇದು ಇತರ ಸೋಶಿಯಲ್‌ ಮೀಡಿಯಾ ಪೇಜ್‌ ಹಾಗೂ ಮಾಧ್ಯಮಗಳಲ್ಲೂ ಸಾಕಷ್ಟು ಸುದ್ದಿಯಾಯಿತು. ಹೆಚ್ಚಿನವರು ನತಾಶಾ ಸ್ಟಾಂಕೋವಿಕ್‌, ಹಾರ್ದಿಕ್‌ ಪಾಂಡ್ಯನನ್ನು ಮದುವೆಯಾಗಿದ್ದು ಬರೀ ಹಣಕ್ಕಾಗಿ ಮಾತ್ರ. ಈಗ ವಿಚ್ಛೇದನದ ಮೂಲಕ ಆತನ ಆಸ್ತಿಯ ಶೇ. 70ರಷ್ಟು ಪಾಲು ಪಡೆದುಕೊಳ್ಳಲಿದ್ದಾರೆ ಎಂದು ವರದಿಗಳೂ ಬಂದಿದ್ದವು. ಆದರೆ, ಇಲ್ಲಿಯವರೆಗೂ ತಮ್ಮಿಬ್ಬರ ನಡುವಿನ ವಿಚ್ಛೇದನದ ಬಗ್ಗೆ ಹಾರ್ದಿಕ್‌ ಪಾಂಡ್ಯ ಆಗಲಿ, ನತಾಶಾ ಸ್ಟಾಂಕೋವಿಕ್‌ ಆಗಲಿ ಮಾತನಾಡಿಲ್ಲ.

ಇನ್ನೊಂದೆಡೆ, ಭಾರತ ತಂಡ ವಿಶ್ವಕಪ್‌ ಗೆಲ್ಲಲು ಹಾರ್ದಿಕ್‌ ಪಾಂಡ್ಯ ಪ್ರಮುಖವಾಗಿ ಕಾರಣರಾಗಿದ್ದರು. ಅದರಲ್ಲೂ ಫೈನಲ್‌ ಪಂದ್ಯದ ಕೊನೇ ಓವರ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಅವರ ಬೌಲಿಂಗ್‌ ಅದ್ಭುತವಾಗಿತ್ತು. ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಹಾರ್ದಿಕ್‌ ಪಾಂಡ್ಯ ಭಾವುಕರಾಗಿ ಕಣ್ಣೀರಿಟ್ಟಿದ್ದರು. ಇದು 2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ಗೆದ್ದ ಮೊದಲ ಐಸಿಸಿ ಟ್ರೋಫಿಯಾಗಿತ್ತು. ಇನ್ಸ್‌ಟಾಗ್ರಾಮ್‌ನಲ್ಲಿ ಸಾಕಷ್ಟು ಆಕ್ಟೀವ್‌ ಕೂಡ ಆಗಿರುವ ನತಾಶಾ ಸ್ಟಾಂಕೋವಿಕ್‌, ಹಾರ್ದಿಕ್‌ ಪಾಂಡ್ಯ ಬಗ್ಗೆಯಾಗಲಿ, ಟೀಮ್‌ ಇಂಡಿಯಾದ ವಿಶ್ವಕಪ್‌ ಗೆಲುವಿನ ಬಗ್ಗೆಯಾಗಲಿ ಒಂದೇ ಒಂದು ಪೋಸ್ಟ್‌ ಮಾಡಿರಲಿಲ್ಲ. ಆಕೆಯ ಮೌನವೇ ಡಿವೋರ್ಸ್ ಊಹಾಪೋಹಕ್ಕೆ ಇನ್ನಷ್ಟು ಬಲ ಬರಲು ಕಾರಣವಾಗಿದೆ.

ಪತ್ನಿ ಹೇಳಿದ ಹಾಗೆ, 30 ಕೋಟಿಯ ಮನೆ ಸೇರಿ 90 ಕೋಟಿ ಆಸ್ತಿ ಹೊಂದಿರುವ ಹಾರ್ದಿಕ್‌ ಪಾಂಡ್ಯ ಬೀದಿಗೆ ಬೀಳ್ತಾರಾ?

2020ರ ಮೇ 31 ರಂದು ಹಾರ್ದಿಕ್‌ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್‌ ವಿವಾಹವಾಗಿದ್ದರು. ವಿವಾಹದ ಬೆನ್ನಲ್ಲಿಯೇ ಜುಲೈ 30 ರಂದು ನತಾಶಾ ಸ್ಟಾಂಕೋವಿಕ್‌ ಮೊದಲ ಪುತ್ರ ಅಗಸ್ತ್ಯನಿಗೆ ಜನ್ಮ ನೀಡಿದ್ದರು.

ನತಾಶಾಗೆ 70 ಪರ್ಸೆಂಟ್ ಅಲ್ಲ, 70 ರೂಪಾಯಿ ಕೂಡ ಸಿಗೋದಿಲ್ಲ: ಹಾರ್ದಿಕ್‌ 'ಗುಜರಾತಿ ಬ್ರೇನ್‌..' ಗೆ ಭೇಷ್‌ ಎಂದ ನೆಟ್ಟಿಗರು!