Asianet Suvarna News Asianet Suvarna News

ಟೀಂ ಇಂಡಿಯಾ ಟಿ20 ತಂಡಕ್ಕೆ ದ್ರಾವಿಡ್ ಬದಲಿಗೆ ಈ ಮಾಜಿ ವೇಗಿ ಹೆಡ್‌ ಕೋಚ್ ಆಗಲಿ ಎಂದ ಭಜ್ಜಿ..!

ಟಿ20 ವಿಶ್ವಕಪ್ ಸೆಮೀಸ್‌ನಲ್ಲೇ ಟೀಂ ಇಂಡಿಯಾ ಹೋರಾಟ ಅಂತ್ಯ
ಇದರ ಬೆನ್ನಲ್ಲೇ ಹೆಡ್ ಕೋಚ್ ರಾಹುಲ್ ದ್ರಾವಿಡ್ ತಲೆದಂಡಕ್ಕೆ ಆಗ್ರಹ
ಟಿ20 ತಂಡಕ್ಕೆ ಹೊಸ ಕೋಚ್ ಹೆಸರು ಸೂಚಿಸಿದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್
 

Harbhajan Singh wants Ashish Nehra to replace Rahul Dravid as India head coach in T20Is kvn
Author
First Published Nov 11, 2022, 12:57 PM IST

ನವದೆಹಲಿ(ನ.11): ಹಲವು ಟಿ20 ಸ್ಪೆಷಲಿಸ್ಟ್ ಆಟಗಾರರನ್ನೊಳಗೊಂಡಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅಭಿಯಾನದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲೇ ಅಂತ್ಯವಾಗಿದೆ. ಅಡಿಲೇಡ್‌ ಓವಲ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಎದುರು ಟೀಂ ಇಂಡಿಯಾ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. ಇದರೊಂದಿಗೆ ಮೂರನೇ ಬಾರಿಗೆ ಟಿ20 ವಿಶ್ವಕಪ್ ಪ್ರವೇಶಿಸುವ ಟೀಂ ಇಂಡಿಯಾ ಕನಸು ಭಗ್ನವಾಗಿದೆ. ಭಾರತ ನೀಡಿದ್ದ 169 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ಇಂಗ್ಲೆಂಡ್ ತಂಡವು ಯಾವುದೇ ವಿಕೆಟ್‌ ನಷ್ಟವಿಲ್ಲದೇ 16 ಓವರ್‌ಗಳಲ್ಲೇ ಪೂರ್ಣಗೊಳಿಸುವ ಮೂಲಕ ಗೆಲುವಿನ ಕೇಕೆ ಹಾಕಿದೆ. ಇನ್ನು ಇದರ ಬೆನ್ನಲ್ಲೇ ಟೀಂ ಇಂಡಿಯಾ ನಾಯಕತ್ವ ಹಾಗೂ ಕೋಚ್ ಕುರಿತಂತೆ ಇದೀಗ ಪ್ರಶ್ನೆಗಳು ಏಳಲಾರಂಭಿಸಿವೆ.

ಆಸ್ಟ್ರೇಲಿಯಾದಲ್ಲಿ ಆರಂಭವಾದ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನದೊಂದಿಗೆ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು, ಸೂಪರ್ 12 ಹಂತದಲ್ಲೂ ಅದ್ಭುತ ಪ್ರದರ್ಶನ ತೋರುವ ಮೂಲಕ ಗ್ರೂಪ್ '2' ನಲ್ಲಿ ಅಗ್ರಸ್ಥಾನಿಯಾಗಿಯೇ ಸೆಮಿಫೈನಲ್‌ ಪ್ರವೇಶಿಸಿತ್ತು. ಆದರೆ ನಾಕೌಟ್ ಹಂತದಲ್ಲಿ ಆಘಾತಕಾರಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿತ್ತು. ಇದೀಗ ಟೀಂ ಇಂಡಿಯಾ, ಸೆಮೀಸ್‌ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಟಿ20 ಕ್ರಿಕೆಟ್‌ ಮಾದರಿಗೆ ಹೊಸ ತಂಡ ಕಟ್ಟಲು ಸಲಹೆ ನೀಡಿದ್ದಾರೆ.

T20 World Cup ಟೀಂ ಇಂಡಿಯಾ ಸೆಮೀಸ್ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್ ದ್ರಾವಿಡ್..!

India Today ಚಾನೆಲ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಹರ್ಭಜನ್ ಸಿಂಗ್, ಭಾರತ ಟಿ20 ತಂಡಕ್ಕೆ ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾ ಜೋಡಿಯ ಬದಲು ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಕ ಮಾಡಬೇಕು ಹಾಗೂ ಹೆಡ್ ಕೋಚ್ ಆಗಿ ಆಶಿಶ್ ನೆಹ್ರಾ ಅವರನ್ನು ನೇಮಕ ಮಾಡಬೇಕು ಎನ್ನುವ ಸಲಹೆ ನೀಡಿದ್ದಾರೆ. 

ಭಾರತದ ಟಿ20 ತಂಡದ ಮಟ್ಟಿಗೆ ಹೇಳುವುದಾದರೇ, ಈ ಮಾದರಿಯ ಕ್ರಿಕೆಟ್ ಆಡಿ ಇತ್ತೀಚೆಗಷ್ಟೇ ನಿವೃತ್ತಿಯಾದ ಆಶಿಶ್ ನೆಹ್ರಾ ಅವರಂತವರನ್ನು ಕೋಚ್ ಆಗಿ ನೇಮಕ ಮಾಡಬೇಕು. ಇನ್ನು ಭಾರತ ಟಿ20 ತಂಡಕ್ಕೆ ಹೊಸ ನಾಯಕನನ್ನು ನೇಮಕ ಮಾಡುವುದಾದರೇ ನನ್ನ ಆಯ್ಕೆ ಹಾರ್ದಿಕ್ ಪಾಂಡ್ಯ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

T20 World cup ಹೀನಾಯ ಸೋಲಿಗೆ ತಲೆದಂಡ, ಕೋಚ್ ದ್ರಾವಿಡ್ ಅಮಾನತಿಗೆ ಹೆಚ್ಚಿದ ಒತ್ತಡ!

ಕೆಲ ತಿಂಗಳುಗಳ ಹಿಂದಷ್ಟೇ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ-ಆಶಿಶ್ ನೆಹ್ರಾ ಜೋಡಿಯು ಗುಜರಾತ್ ಟೈಟಾನ್ಸ್ ತಂಡವನ್ನು ಮೊದಲ ಪ್ರಯತ್ನದಲ್ಲೇ ಚಾಂಪಿಯನ್ ಪಟ್ಟಕ್ಕೇರಿಸಿತ್ತು. ಇದರೊಂದಿಗೆ ಆಶಿಶ್ ನೆಹ್ರಾ, ಐಪಿಎಲ್ ಟೂರ್ನಿಯಲ್ಲಿ ಕಪ್ ಗೆದ್ದ ಮೊದಲ ಭಾರತೀಯ ಕೋಚ್ ಎನ್ನುವ ಹಿರಿಮೆಗೂ ಪಾತ್ರರಾಗಿದ್ದರು.

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ 3 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನಾಡಲು ಆಸ್ಟ್ರೇಲಿಯಾದಿಂದ ನೇರವಾಗಿ ನ್ಯೂಜಿಲೆಂಡ್ ಪ್ರವಾಸ ಮಾಡಲಿದ್ದು, ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಚುಟುಕು ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ.

Follow Us:
Download App:
  • android
  • ios