T20 World cup ಹೀನಾಯ ಸೋಲಿಗೆ ತಲೆದಂಡ, ಕೋಚ್ ದ್ರಾವಿಡ್ ಅಮಾನತಿಗೆ ಹೆಚ್ಚಿದ ಒತ್ತಡ!
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಹೀನಾಯ ಸೋಲಿಗೆ ಹೊಣೆ ಯಾರು? ಇಂಗ್ಲೆಂಡ್ ವಿರುದ್ಧ ಮುಗ್ಗರಿಸಿದ ಟೀಂ ಇಂಡಿಯಾ ವಿರುದ್ಧ ಆಕ್ರೋಶದ ಕಟ್ಟೆ ಒಡೆದಿದೆ. ಇದೀಗ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೋಚ್ ರಾಹುಲ್ ದ್ರಾವಿಡ್ ತಲೆದಂಡಕ್ಕೆ ಒತ್ತಡ ಹೆಚ್ಚಾಗಿದೆ.
ಆಡಿಲೇಡ್(ನ.10): ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಟೂರ್ನಿ ಸೆಮಿಫೈನಲ್ ಪಂದ್ಯದ ಸೋಲು ಟೀಂ ಇಂಡಿಯಾ ತಂಡದ ಬುಡವನ್ನೇ ಅಲ್ಲಾಡಿಸಿದೆ. ಒಂದೆಡೆ ಹಿರಿಯ ಆಟಗಾರರಿಕೆ ಕೊಕ್ ನೀಡಲು ಆಗ್ರಹ ಕೇಳಿಬರುತ್ತಿದೆ. ಟಿ20 ತಂಡಕ್ಕೆ ಸ್ಫೋಟಕ ಹಾಗೂ ಯುವ ಕ್ರಿಕೆಟಿಗರನ್ನು ಕರೆ ತರಲು ಒತ್ತಡ ಹೆಚ್ಚಾಗುತ್ತಿದೆ. ಇದರ ನಡುವೆ ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲಿಗೆ ಹೊಣೆ ಯಾರು? ಯಾರ ತಲೆಗೆ ಈ ಸೋಲನ್ನು ಹೊರಿಸಬೇಕು ಅನ್ನೋ ಚರ್ಚೆಯೂ ನಡೆಯುತ್ತಿದೆ. ನಾಯಕ ರೋಹಿತ್ ಶರ್ಮಾ ತಲೆದಂಡಕ್ಕೆ ಕೆಲ ಅಭಿಮಾನಿಳ ಗುಂಪು ನೋ ಎಂದಿದೆ. ಇದರ ಬೆನ್ನಲ್ಲೇ ಇದೀಗ ಎಲ್ಲ ಚಿತ್ತ ಕೋಚ್ ರಾಹುಲ್ ದ್ರಾವಿಡ್ ಮೇಲೆ ನೆಟ್ಟಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹೊರಬಿದ್ದಿರುವ ಹಿನ್ನಲೆಯಲ್ಲಿ ಕೋಚ್ ರಾಹುಲ್ ದ್ರಾವಿಡ್ ತಲೆದಂಡಕ್ಕೆ ಒತ್ತಡ ಹೆಚ್ಚಾಗಿದೆ.
ದ್ರಾವಿಡ್ ಔಟ್ ಎಂದು ಟ್ವಿಟರ್‌ನಲ್ಲಿ ಭಾರಿ ಟ್ರೆಂಡ್ ಆಗಿದೆ. ಈ ಸೋಲಿಗೆ ಕೋಚ್ ರಾಹುಲ್ ದ್ರಾವಿಡ್ ಹೊಣೆಯಾಗಿದ್ದಾರೆ. ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅದ್ವಿತೀಯ ಗೆಲುವು ಸಾಧಿಸಿಲ್ಲ. ಎಲ್ಲವೂ ಪ್ರಯಾಸದ ಗೆಲುವಾಗಿತ್ತು. ಉತ್ತಮ ತಂಡ ಆಯ್ಕೆ ಮಾಡುವಲ್ಲಿ ಕೋಚ್ ವಿಫಲರಾಗಿದ್ದಾರೆ. ಹೀಗಾಗಿ ದ್ರಾವಿಡ್ ವಜಾ ಮಾಡಿ ಎಂದು ಅಭಿಯಾನ ಶುರುವಾಗಿದೆ.
ಸೋಲಿನ ಆಘಾತಕ್ಕೆ ಕಣ್ಣೀರಿಟ್ಟ ನಾಯಕ ರೋಹಿತ್, ಸಮಾಧಾನ ಪಡಿಸಿದ ದ್ರಾವಿಡ್!
ರೋಹಿತ್ ಶರ್ಮಾ ನಾಯಕತ್ವದಿಂದ ಕಿತ್ತೆಸೆಯಿರಿ, ಹಿರಿಯ ಆಟಗಾರರನ್ನು ಏಕದಿನ ಅಥವಾ ಟೆಸ್ಟ್ ಪಂದ್ಯಕ್ಕೆ ಸೀಮಿತಗೊಳಿಸಿ, ಯುವ ಆಟಗಾರರನ್ನು ಟಿ20 ತಂಡಕ್ಕೆ ಆಯ್ಕೆ ಮಾಡಿ ಎಂದು ಹಲವರು ಸಲಹೆ ನೀಡಿದ್ದಾರೆ. ಈ ಸಲಹೆಯಲ್ಲಿ ದ್ರಾವಿಡ್‌ರನ್ನು ಕೋಚ್ ಸ್ಥಾನದಿಂದ ವಜಾ ಮಾಡಿ ಎಂದು ಆಗ್ರಹಿಸಲಾಗಿದೆ.
ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಮಾರ್ಗದರ್ಶನ ಉತ್ತಮವಾಗಿಲ್ಲ. ತಂಡದ ಆಯ್ಕೆ ಸರಿಯಾಗಿಲ್ಲ, ಕರ್ನಾಟಕ ಲಾಬಿ ಮಾಡಿದ್ದಾರೆ. ಹೀಗಾಗಿ ಕೆಎಲ್ ರಾಹುಲ್‌ಗೆ ಮತ್ತೆ ಮತ್ತೆ ಅವಕಾಶ ನೀಡಿದ್ದಾರೆ. ಕೆಎಲ್ ರಾಹುಲ್ ಉತ್ತಮ ಆರಂಭ ನೀಡಲೇ ಇಲ್ಲ. ಹೀಗಾಗಿ ರಾಹುಲ್ ದ್ರಾವಿಡ್ ವಜಾ ಮಾಡಿ ವಿದೇಶಿ ಕೋಚ್ ನೇಮಕ ಮಾಡುವಂತೆಯೂ ಆಗ್ರಹ ಕೇಳಿಬಂದಿದೆ. ಭಾರತೀಯ ಕೋಚ್ ಮಾತುಗಳನ್ನು ಆಟಗಾರರು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ವಿದೇಶಿ ಕೋಚ್ ತಂದು ಟೀಂ ಇಂಡಿಯಾ ಕ್ರಿಕಟಿಗರ ನೆಟ್ಟಗೆ ಮಾಡಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಟೀಂ ಇಂಡಿಯಾಗೆ ಚೋಕರ್ಸ್ ಪಟ್ಟ, ಮಿಸ್ ಯು ಧೋನಿ ಎಂದ ಭಾರತ!
ಪಂದ್ಯದ ಸೋಲಿನ ಬಳಿಕ ಮಾಧ್ಯಮದ ಜೊತೆಗಿನ ಸುದ್ದಿಗೋಷ್ಠಿಗೆ ಆಗಮಿಸಿದ ರಾಹುಲ್ ದ್ರಾವಿಡ್, ಹಲವು ತಪ್ಪಗಳು ಆಗಿದೆ. ಟೀಂ ಇಂಡಿಯಾ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಹೀಗಾಗಿ ಮುಗ್ಗರಿಸಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ. ಇತ್ತ ಹಿರಿಯ ಕ್ರಿಕೆಟಿಗರ ಭವಿಷ್ಯದ ಕುರಿತ ಪ್ರಶ್ನೆಗೆ ರಾಹುಲ್ ದ್ರಾವಿಡ್ ಖಡಕ್ ಉತ್ತರ ನೀಡಿದ್ದಾರೆ. ವಿರಾಟ್ ಕೊಹ್ಲಿ, ರೊಹಿತ್ ಶರ್ಮಾ, ಆರ್ ಅಶ್ವಿನ್ , ಭುವನೇಶ್ವರ್ ಕುಮಾರ್ ಸೇರಿದಂತೆ ಹಿರಿಯ ಕ್ರಿಕೆಟಿಗರ ಭವಿಷ್ಯದ ಕುರಿತು ಮಾತನಾಡಲು ಇದು ಸೂಕ್ತ ಸಮಯವಲ್ಲ. ಒಂದು ಪಂದ್ಯದಿಂದ ಅವರ ಸಾಮರ್ಥ್ಯವನ್ನು, ಪ್ರದರ್ಶನವನ್ನು ಅಳೆಯಲು ಸಾಧ್ಯವಿಲ್ಲ. ಇದಕ್ಕಿಂತ ಹೆಚ್ಚಾಗಿದೆ. ಈ ಸಮಯ ಸೂಕ್ತವಲ್ಲ ಎಂದು ದ್ರಾವಿಡ್ ಹೇಳಿದ್ದಾರೆ.