ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಹೀನಾಯ ಸೋಲುಇಂಗ್ಲೆಂಡ್‌ ಎದುರು ಆಘಾತಕಾರಿ ಸೋಲು ಅನುಭವಿಸಿದ ರೋಹಿತ್ ಶರ್ಮಾ ಪಡೆಬಿಗ್‌ಬ್ಯಾಶ್‌ ಅನುಭವ ಇಂಗ್ಲೆಂಡ್‌ಗೆ ನೆರವಾಯ್ತು ಎಂದ ರಾಹುಲ್ ದ್ರಾವಿಡ್

ಅಡಿಲೇಡ್‌(ನ.11): ಭಾರತೀಯ ಕ್ರಿಕೆಟಿಗರಿಗೆ ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಅನುಮತಿ ನೀಡಬೇಕೆ ಎನ್ನುವ ಚರ್ಚೆ ಮತ್ತೊಮ್ಮೆ ಶುರುವಾಗಿದೆ. ಭಾರತದ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌, ಬಿಗ್‌ಬ್ಯಾಶ್‌ನಂತಹ ಟೂರ್ನಿಗಳಲ್ಲಿ ಆಡುವುದರಿಂದ ಖಂಡಿತ ಲಾಭವಿದೆ ಎಂದು ಒಪ್ಪಿಕೊಂಡಿದ್ದಾರಾದರೂ, ಆಟಗಾರರಿಗೆ ಅನುಮತಿ ನೀಡುವುದು ಬಿಡುವುದು ಬಿಸಿಸಿಐಗೆ ಬಿಟ್ಟಿದ್ದು ಎಂದಿದ್ದಾರೆ.

ಸೆಮಿಫೈನಲ್‌ ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್‌, ‘ಇಂಗ್ಲೆಂಡ್‌ ಆಟಗಾರರು ಬಿಗ್‌ಬ್ಯಾಶ್‌ ಟಿ20 ಲೀಗ್‌ನಲ್ಲಿ ಆಡಿದ ಅನುಭವ ಹೊಂದಿದ್ದು, ಅದನ್ನು ವಿಶ್ವಕಪ್‌ನಲ್ಲಿ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಅಲೆಕ್ಸ್ ಹೇಲ್ಸ್‌, ಜೋಸ್ ಬಟ್ಲರ್‌ ಸೇರಿ ಬಹುತೇಕರು ಬಿಬಿಎಲ್‌ನಲ್ಲಿ ಆಡಿದ್ದಾರೆ. ಆದರೆ ಭಾರತೀಯರಿಗೆ ಆಡಲು ಅನುಮತಿ ನೀಡಿದರೆ ನಮ್ಮ ದೇಸಿ ಟೂರ್ನಿಗಳ ಗುಣಮಟ್ಟ ಹಾಳಾಗಲಿದೆ. ನಮ್ಮ ತಂಡವೂ ವೆಸ್ಟ್‌ ಇಂಡೀಸ್‌ ತಂಡದಂತೆ ಆಗಬಹುದು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

T20 World Cup: ಬಲಿಷ್ಠ ಟೀಂ ಇಂಡಿಯಾ ವೈಫಲ್ಯಕ್ಕೆ ಕಾರಣವೇನು..?

2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ 10 ವಿಕೆಟ್‌ಗಳಿಂದ ಭಾರತವನ್ನು ಬಗ್ಗುಬಡಿದು ಫೈನಲ್‌ಗೇರಿದೆ. 3ನೇ ಬಾರಿಗೆ ವಿಶ್ವಕಪ್‌ನ ಫೈನಲ್‌ ಪ್ರವೇಶಿಸಿರುವ ಇಂಗ್ಲೆಂಡ್‌, 2ನೇ ಬಾರಿಗೆ ಟ್ರೋಫಿ ಗೆಲ್ಲುವ ತವಕದಲ್ಲಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮೊದಲು ಬ್ಯಾಟ್ ಮಾಡಿ 168 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಅಲೆಕ್ಸ್‌ ಹೇಲ್ಸ್ ಹಾಗೂ ಜೋಸ್ ಬಟ್ಲರ್ ಜೋಡಿ ಮೊದಲ ವಿಕೆಟ್‌ಗೆ 170 ರನ್‌ಗಳ ಜತೆಯಾಟವಾಡುವ ಇನ್ನೂ 24 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.

ಅಂತಾರಾಷ್ಟ್ರೀಯ ಟಿ20ಯಲ್ಲಿ ಕೊಹ್ಲಿ 4,000 ರನ್‌: ಮೊದಲಿಗ!

ಅಡಿಲೇಡ್‌: ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ 4,000 ರನ್‌ ಪೂರ್ತಿಗೊಳಿಸಿದ ಮೊದಲ ಬ್ಯಾಟರ್‌ ಎಂಬ ದಾಖಲೆ ಬರೆದಿದ್ದಾರೆ. ಗುರುವಾರ ಇಂಗ್ಲೆಂಡ್‌ ವಿರುದ್ಧದ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ 50 ರನ್‌ ಗಳಿಸಿದ ಕೊಹ್ಲಿ ಈ ಮೈಲಿಗಲ್ಲು ತಲುಪಿದರು. ವಿರಾಟ್ ಕೊಹ್ಲಿ ಸದ್ಯ 107 ಇನ್ನಿಂಗ್ಸ್‌ಗಳಲ್ಲಿ 4,008 ರನ್‌ ಕಲೆ ಹಾಕಿದ್ದು, ರೋಹಿತ್‌ ಶರ್ಮಾ 3,853 ರನ್‌ (140 ಇನ್ನಿಂಗ್ಸ್‌) ಗಳಿಸಿ 2ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಮಾರ್ಟಿನ್‌ ಗಪ್ಟಿಲ್‌(3,531), ಪಾಕಿಸ್ತಾನ ಬಾಬರ್‌ ಆಜಂ(3,323), ಐರ್ಲೆಂಡ್‌ನ ಪಾಲ್‌ ಸ್ಟಿರ್ಲಿಂಗ್‌(3,181) ಹಾಗೂ ಆಸ್ಪ್ರೇಲಿಯಾದ ಆ್ಯರೋನ್‌ ಫಿಂಚ್‌(3,120) ನಂತರದ ಸ್ಥಾನಗಳಲ್ಲಿದ್ದಾರೆ.

ಲಾರಾ ದಾಖಲೆ ಪತನ: ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ಅತೀ ಹೆಚ್ಚು ಅಂ.ರಾ. ರನ್‌ ಗಳಿಸಿದ ವಿದೇಶಿ ಬ್ಯಾಟರ್‌ ಎಂಬ ಹಿರಿಮೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಕೊಹ್ಲಿ 15 ಇನ್ನಿಂಗ್ಸಲ್ಲಿ 950 ರನ್‌ ಕಲೆಹಾಕಿದ್ದು, ಬ್ರಿಯಾನ್‌ ಲಾರಾ(15 ಇನ್ನಿಂಗ್ಸ್‌ನಲ್ಲಿ 940 ರನ್‌)ರನ್ನು ಹಿಂದಿಕ್ಕಿದ್ದಾರೆ.