ಲಾರ್ಡ್ಸ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಮತ್ತು ಜಾಕ್ ಕ್ರಾಲಿ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಯ ಓವರ್‌ನಲ್ಲಿ ಕ್ರಾಲಿ ಉದ್ದೇಶಪೂರ್ವಕವಾಗಿ ಎಸೆತವನ್ನು ಎದುರಿಸದಿರಲು ಪ್ರಯತ್ನಿಸಿದರು ಎಂದು ಭಾರತೀಯ ಆಟಗಾರರು ಆರೋಪಿಸಿದರು.
ಲಂಡನ್: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಆಲೌಟ್ ಆಯಿತು. ಜೋ ರೂಟ್ (104 ರನ್) ಶತಕ ಬಾರಿಸಿದರು. ಜೇಮೀ ಸ್ಮಿತ್ (51), ಬ್ರೈಡನ್ ಕಾರ್ಸ್ (56) ಅರ್ಧಶತಕ ಬಾರಿಸಿದರು. ಭಾರತದ ಪರ ಬುಮ್ರಾ 5 ವಿಕೆಟ್ ಪಡೆದರು. ಇನ್ನು ಮೂರನೇ ದಿನದಾಟದ ಕೊನೆಯ ಓವರ್ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಹಾಗೂ ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಜಾಕ್ ಕ್ರಾಲಿ ನಡುವಿನ ಮಾತಿನ ಚಕಮಕಿಗೆ ಕಾರಣವಾಯಿತು.
ಭಾರತ ತಂಡ ಆಲೌಟ್
ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡವು ಇಂಗ್ಲೆಂಡ್ ಗಳಿಸಿದ್ದ 387 ರನ್‌ಗಳಿಗೆ ಆಲೌಟ್ ಆಯಿತು. ಕೆ.ಎಲ್.ರಾಹುಲ್ (100 ರನ್) ಅದ್ಭುತ ಶತಕ ಬಾರಿಸಿದರು. ರಿಷಭ್ ಪಂತ್ (74), ಜಡೇಜಾ (72) ಅರ್ಧಶತಕಗಳನ್ನು ಗಳಿಸಿದರು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 3 ವಿಕೆಟ್‌ಗಳನ್ನು ಮತ್ತು ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್ ತಲಾ 2 ವಿಕೆಟ್‌ಗಳನ್ನು ಪಡೆದರು.
ಕೊನೆಯ ಓವರ್‌ನಲ್ಲಿ ನಡೆದ ಘಟನೆ
ಭಾರತ ತಂಡ ಆಲೌಟ್ ಆದಾಗ ಪಂದ್ಯ ಮುಗಿಯುವ ಹಂತದಲ್ಲಿತ್ತು. ಇಂಗ್ಲೆಂಡ್ ಆಟಗಾರರು ಬ್ಯಾಟಿಂಗ್‌ಗೆ ಇಳಿದರು. ಜಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಕ್ರೀಸ್‌ಗೆ ಬಂದರು. ಕೇವಲ ಒಂದು ಓವರ್ ಮಾತ್ರ ಬಾಕಿ ಇತ್ತು. ಆ ಓವರ್ ಅನ್ನು ಜಸ್ಪ್ರೀತ್ ಬುಮ್ರಾ ಎಸೆದರು. ಬುಮ್ರಾ ಅವರ ಮೊದಲ ಎಸೆತವನ್ನು ಬಿಟ್ಟ ಕ್ರಾಲಿ, ಎರಡನೇ ಎಸೆತದಲ್ಲಿ ಎರಡು ರನ್ ಗಳಿಸಿದರು.
ಬುಮ್ರಾ ಎಸೆತಕ್ಕೆ ಹೆದರಿದ ಕ್ರಾಲಿ
ಮೂರನೇ ಎಸೆತವನ್ನು ಬುಮ್ರಾ ಎಸೆಯಲು ಬಂದಾಗ, ಕ್ರಾಲಿ ತನಗೆ ನೇರವಾಗಿ ಯಾರೋ ನಿಂತಿದ್ದಾರೆ ಎಂದು ಹೇಳಿ, ಎಸೆತವನ್ನು ಎದುರಿಸದೆ ಸ್ಟಂಪ್‌ನಿಂದ ದೂರ ಸರಿದರು. ಆದರೆ ಕ್ರಾಲಿ ಹೇಳಿದಂತೆ ಯಾರೂ ಇರಲಿಲ್ಲ. ಇದರಿಂದ ಕೋಪಗೊಂಡ ಶುಭಮನ್ ಗಿಲ್, ಕ್ರಾಲಿಯ ಬಳಿ ಹೋಗಿ 'ಏಕೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದೀರಿ' ಎಂದು ವಾಗ್ವಾದ ನಡೆಸಿದರು. ಇದೇ ರೀತಿ ಇತರ ಭಾರತೀಯ ಆಟಗಾರರು ಸಹ ಅಲ್ಲಿಗೆ ಬಂದರು.
ನಂತರ ನೋವು ಎಂದು ನಾಟಕ
ಶುಭಮನ್ ಗಿಲ್ ಜೊತೆ ಮಾತನಾಡಿದ ನಂತರ, ಮುಂದಿನ ಎಸೆತವನ್ನು ಕ್ರಾಲಿ ಎದುರಿಸಿದಾಗ, ಚೆಂಡು ಅವರ ಕೈಗವಸನ್ನು ತಾಗಿತು. ಇದರಿಂದಾಗಿ ಅವರ ಬೆರಳಿಗೆ ನೋವಾಯಿತು ಎಂದು ಹೇಳಿ ತಂಡದ ಫಿಸಿಯೋ ಅವರನ್ನು ಮೈದಾನಕ್ಕೆ ಪ್ರಥಮ ಚಿಕಿತ್ಸೆಗಾಗಿ ಕರೆಸಿಕೊಂಡರು. ಫಿಸಿಯೋ ಬಂದು ಏನನ್ನೂ ಮಾಡದೆ ಹೋದರು. ಕ್ರಾಲಿ ಸುಳ್ಳು ಹೇಳುತ್ತಿದ್ದಾನೆ ಎಂದು ಭಾವಿಸಿದ ಶುಭಮನ್ ಗಿಲ್ ಮತ್ತೆ ಅವರೊಂದಿಗೆ ವಾಗ್ವಾದ ನಡೆಸಿದರು. ಬೆನ್ ಡಕೆಟ್ ಏನೋ ಹೇಳಿದಾಗ, ಗಿಲ್ ಅವರೊಂದಿಗೂ ವಾಗ್ವಾದ ನಡೆಸಿದರು.
ಹೀಗಿತ್ತು ನೋಡಿ ಆ ಕ್ಷಣ:
ಕ್ಯಾಪ್ಟನ್ ಶುಭಮನ್ ಗಿಲ್ ವಾಗ್ವಾದ
ಇತರ ಭಾರತೀಯ ಆಟಗಾರರು ಗಿಲ್‌ಗೆ ಬೆಂಬಲ ನೀಡಿದರು. ನಂತರ ಅಂಪೈರ್ ಮಧ್ಯಪ್ರವೇಶಿಸಿ ವಾಗ್ವಾದವನ್ನು ನಿಲ್ಲಿಸಿದರು. ಪಂದ್ಯ ಮುಗಿಯಲು ಕೇವಲ ಒಂದು ಓವರ್ ಇರುವಾಗ, ಕ್ರಾಲಿ ಔಟ್ ಆಗಬಾರದು ಎಂದು ಉದ್ದೇಶಪೂರ್ವಕವಾಗಿ ಎಸೆತವನ್ನು ಎದುರಿಸದಿರಲು ಪ್ರಯತ್ನಿಸಿದರು. ಇದಕ್ಕೆ ಭಾರತೀಯ ಆಟಗಾರರು ಪ್ರತಿಕ್ರಿಯಿಸಿದರು.
ಕಿಚಾಯಿಸಿದ ಭಾರತೀಯ ಆಟಗಾರರು
ನಂತರ ಉಳಿದ ಎಸೆತಗಳನ್ನು ಎದುರಿಸಿ 3ನೇ ದಿನದಾಟ ಮುಗಿದ ನಂತರ ಕ್ರಾಲಿ ಪೆವಿಲಿಯನ್‌ಗೆ ಹಿಂತಿರುಗುವಾಗ, ಭಾರತ ತಂಡದ ನಾಯಕ ಶುಭಮನ್ ಗಿಲ್ ಸೇರಿದಂತೆ ಆಟಗಾರರು, ''ಎಸೆತಗಳನ್ನು ಎದುರಿಸಲು ಭಯ ಆಯ್ತಾ ಕುಮಾರ'' ಎಂಬಂತೆ ಕ್ರಾಲಿಯನ್ನು ಕಿಚಾಯಿಸಿದರು. ಆದರೆ ಕ್ರಾಲಿ ಏನನ್ನೂ ಹೇಳದೆ ಸುಮ್ಮನೆ ಪೆವಿಲಿಯನ್‌ಗೆ ಹೋದರು. ಇಂಗ್ಲೆಂಡ್ ತಂಡ 2/0 ರನ್‌ಗಳೊಂದಿಗೆ ಇಂದು ನಾಲ್ಕನೇ ದಿನದಾಟವನ್ನು ಆರಂಭಿಸಲಿದೆ.


