ಕೊಹ್ಲಿ, ರೋಹಿತ್ 2027ರ ಏಕದಿನ ವಿಶ್ವಕಪ್ ಆಡ್ತಾರಾ..?: ಮಹತ್ವದ ಅಪ್‌ಡೇಟ್ ಕೊಟ್ಟ ಗೌತಮ್ ಗಂಭೀರ್..!
ಟೀಂ ಇಂಡಿಯಾ ನೂತನ ಹೆಡ್ ಕೋಚ್ ಗೌತಮ್ ಗಂಭೀರ್, ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಲಂಕಾ ಪ್ರವಾಸ ಕೈಗೊಳ್ಳುವ ಮುನ್ನ ಗಂಭೀರ್, ಹಲವು ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ
ಮುಂಬೈ: ಟೀಂ ಇಂಡಿಯಾ ನೂತನ ಹೆಡ್ ಕೋಚ್ ಆದ ಬಳಿಕ ಗೌತಮ್ ಗಂಭೀರ್ ಇಂದು ಮೊದಲ ಸುದ್ದಿಗೋಷ್ಠಿ ನಡೆಸಿ ಹಲವು ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಇದೇ ವೇಳೆ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಾರಾ ಎನ್ನುವ ಕುರಿತಾದ ಪ್ರಶ್ನೆಗೂ ಖಡಕ್ ಉತ್ತರ ನೀಡಿದ್ದಾರೆ.
ಹೌದು, ಭಾರತ ಕ್ರಿಕೆಟ್ ತಂಡವು ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ 2024ರ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ರಾಹುಲ್ ದ್ರಾವಿಡ್ ಅವರ ಹೆಡ್ ಕೋಚ್ ಅವಧಿ ಮುಕ್ತಾಯವಾಯಿತು. ಇನ್ನು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಕೂಡಾ ಅಂತಾರಾಷ್ಟ್ರೀಯ ಟಿ20 ಮಾದರಿಯ ಕ್ರಿಕೆಟ್‌ಗೂ ವಿದಾಯ ಘೋಷಿಸಿದ್ದರು. ಅದರಲ್ಲೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಈಗಾಗಲೇ 35 ವರ್ಷ ದಾಟಿರುವುದರಿಂದ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿವೆ. ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಈ ಇಬ್ಬರು ಕ್ರಿಕೆಟಿಗರು ಇನ್ನೆಷ್ಟು ವರ್ಷ ಕ್ರಿಕೆಟ್ ಆಡಲಿದ್ದಾರೆ? ಅವರು 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯವರೆಗೂ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರಾ ಎನ್ನುವಂತ ಪ್ರಶ್ನೆಗಳಿಗೆ ಗಂಭೀರ್ ಮೊದಲ ಪ್ರೆಸ್ ಕಾನ್ಫರೆನ್ಸ್ ವೇಳೆಯಲ್ಲಿಯೇ ಸ್ಪಷ್ಟವಾದ ಉತ್ತರ ನೀಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024: ಪದಕ ಭೇಟೆಗೆ ಹೊರಟ ಭಾರತೀಯ ಅಥ್ಲೀಟ್‌ಗಳಿಗೆ ಬಿಸಿಸಿಐ ಬಂಪರ್ ಗಿಫ್ಟ್..!
"ನನ್ನ ಪ್ರಕಾರ, ಅದು ಟಿ20 ವಿಶ್ವಕಪ್ ಇರಲಿ ಅಥವಾ ಏಕದಿನ ವಿಶ್ವಕಪ್ ಇರಲಿ, ದೊಡ್ಡ ಹಂತದ ಪಂದ್ಯಗಳಲ್ಲಿ ತಾವೇನೂ ಮಾಡಬಲ್ಲರು ಎನ್ನುವುದನ್ನು ಈಗಾಗಲೇ ಸಾಧಿಸಿ ತೋರಿಸಿದ್ದಾರೆ" ಎಂದು ಗಂಭೀರ್ ಹೇಳಿದ್ದಾರೆ. "ಈ ವಿಚಾರವಾಗಿ ಒಂದಂತೂ ಸ್ಪಷ್ಟವಾಗಿ ಹೇಳಬಯಸುವುದೇನೆಂದರೇ, ಈ ಇಬ್ಬರೂ ಕ್ರಿಕೆಟಿಗರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಇದೆ. ಅದರಲ್ಲೂ ಮುಖ್ಯವಾಗಿ ನಮ್ಮ ಮುಂದೇ ಇದೇ ವರ್ಷದ ಕೊನೆಯಲ್ಲಿ ಆಸೀಸ್ ಪ್ರವಾಸದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಡುವುದಿದೆ. ಅದೇ ರೀತಿ 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಬೇಕಿದೆ. ಇದಕ್ಕಾಗಿ ಅವರು ಸಜ್ಜಾಗಿದ್ದಾರೆ. ಒಂದು ವೇಳೆ ಅವರು ಫಿಟ್‌ನೆಸ್ ಕಾಪಾಡಿಕೊಂಡರೆ 2027ರ ಐಸಿಸಿ ವಿಶ್ವಕಪ್ ಕೂಡಾ ಆಡಲಿದ್ದಾರೆ ಎನ್ನುವ ವಿಶ್ವಾಸವಿದೆ" ಎಂದು ಟೀಂ ಇಂಡಿಯಾ ನೂತನ ಹೆಡ್ ಕೋಚ್ ಗಂಭಿರ್ ಹೇಳಿದ್ದಾರೆ.
"ಯಾರು ಎಷ್ಟು ವರ್ಷ ಕ್ರಿಕೆಟ್ ಆಡಬೇಕು, ಯಾರು ಯಾವಾಗ ನಿವೃತ್ತಿಯಾಗಬೇಕು ಎನ್ನುವುದು ಅವರವರ ವೈಯುಕ್ತಿಕ ನಿರ್ಧಾರ. ಅವರಲ್ಲಿ ಇನ್ನೆಷ್ಟು ಕ್ರಿಕೆಟ್ ಬಾಕಿ ಉಳಿದಿದೆ ಎಂದು ನಾನು ಹೇಳಲು ಸಾಧ್ಯವಿಲ್ಲ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಲ್ಲಿಯವರೆಗೆ ಸಾಧಿಸಿದ್ದನ್ನು ನೋಡಿದಾಗ, ಅವರಿನ್ನೂ ವರ್ಲ್ಡ್ ಕ್ಲಾಸ್ ಆಟಗಾರರು ಎಂದು ಹೇಳಬಹುದು ಎಂದು ಗೌತಿ ಹೇಳಿದ್ದಾರೆ.
'ನಿಮಗೆ ಧೈರ್ಯವಿದ್ರೆ..?': ಸಾನಿಯಾ ಜತೆ ಶಮಿ ಮದುವೆ ಬಗ್ಗೆ ಮೊದಲ ಬಾರಿ ತುಟಿಬಿಚ್ಚಿದ್ದ ಟೀಂ ಇಂಡಿಯಾ ವೇಗಿ..!
ಇನ್ನು ಇದೇ ವೇಳೆ ಶ್ರೀಲಂಕಾ ಎದುರಿನ ಸರಣಿಯಲ್ಲಿ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಆಯ್ಕೆಯಾಗದಿರುವ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸ್ಪಷ್ಟನೆ ನೀಡಿದ್ದಾರೆ. ನಾವು ರವೀಂದ್ರ ಜಡೇಜಾ ಅವರನ್ನು ಈ ಸರಣಿಯಿಂದ ಕೈಬಿಟ್ಟಿಲ್ಲ, ಬದಲಾಗಿ ವಿಶ್ರಾಂತಿ ನೀಡಿದ್ದೇವೆ. ಯಾಕೆಂದರೆ ಮುಂಬರುವ ದಿನಗಳಲ್ಲಿ ಮಹತ್ವದ ಟೆಸ್ಟ್ ಸರಣಿಯನ್ನು ಅವರು ಆಡಬೇಕಿದೆ. ಅವರು ಈ ಮಾದರಿಯ ಕ್ರಿಕೆಟ್ ಆಡಲು ಸದೃಢರಿದ್ದಾರೆ. ಅವರೊಬ್ಬ ನಮ್ಮ ತಂಡದ ಮಹತ್ವದ ಆಟಗಾರರಾಗಿದ್ದಾರೆ ಎಂದು ಅಗರ್ಕರ್ ಸ್ಪಷ್ಟನೆ ನೀಡಿದ್ದಾರೆ.