ಗೌತಮ್ ಗಂಭೀರ್ ಕೋಚ್ ಆಗಿ ಸೂಕ್ತರಲ್ಲ, ಫಲಿತಾಂಶಗಳೇ ಸಾಕ್ಷಿ ಎಂದು ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಟೀಕಿಸಿದ್ದಾರೆ. ಕೆಕೆಆರ್ ಗೆಲುವಿನ ಶ್ರೇಯಸ್ಸು ಗಂಭೀರ್‌ಗೆ ಮಾತ್ರವಲ್ಲ ಎಂದಿದ್ದಾರೆ. ಆದರೆ, ಹರ್ಷಿತ್ ರಾಣಾ, ನಿತೀಶ್ ರಾಣಾ ಗಂಭೀರ್ ಪರ ನಿಂತಿದ್ದು, ವೈಯಕ್ತಿಕ ಟೀಕೆ ಬೇಡ ಎಂದಿದ್ದಾರೆ.

ಕೋಲ್ಕತಾ: ಭಾರತದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ವಿರುದ್ಧ ಮಾಜಿ ಕ್ರಿಕೆಟಿಗ ಮನೋಜ್‌ ತಿವಾರಿ ತೀವ್ರ ಕಿಡಿಕಾರಿದ್ದು, ಗಂಭೀರ್‌ ಕೋಚ್‌ ಹುದ್ದೆ ಅರ್ಹರಲ್ಲ ಎಂದಿದ್ದಾರೆ. 

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಫಲಿತಾಂಶಗಳು ಸುಳ್ಳು ಹೇಳುವುದಿಲ್ಲ. ಗಂಭೀರ್‌ ಪ್ರದರ್ಶನದ ಬಗ್ಗೆ ಅವರ ದಾಖಲೆಗಳೇ ಮಾತನಾಡುತ್ತವೆ. ಅವರು ಹೇಳಿದ್ದನ್ನು ಮಾಡಲಾಗದ ಕಪಟಿ’ ಎಂದು ಟೀಕಿಸಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ ಕೋಲ್ಕತಾ ತಂಡ ಚಾಂಪಿಯನ್‌ ಆಗಿದ್ದಕ್ಕೆ ಕೇವಲ ಗಂಭೀರ್‌ಗೆ ಕ್ರೆಡಿಟ್‌ ನೀಡಲಾಗುತ್ತಿದೆ. ಹಾಗಿದ್ದರೆ ಕೋಚ್‌ ಆಗಿದ್ದ ಚಂದ್ರಕಾಂತ್‌ ಪಂಡಿತ್‌ ಕೊಡುಗೆ ಏನಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ. 

'ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ'; ಹಿಂದಿ ಹೇರಲು ಹೊರಟವರಿಗೆ ಅಶ್ವಿನ್ ಚಾಟಿ ಏಟು

2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗೌತಮ್ ಗಂಭೀರ್, ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಇನ್ನು ಚಂದ್ರಕಾಂತ್ ಪಂಡಿತ್, ಕೆಕೆಆರ್ ತಂಡದ ಹೆಡ್‌ ಕೋಚ್ ಆಗಿದ್ದರು. ಇವರ ಮಾರ್ಗದರ್ಶನದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು 2024ರ ಐಪಿಎಲ್ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇನ್ನು ಕೆಕೆಆರ್ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಕೋಚ್ ಆಗಿ ಯಾವುದೇ ಅನುಭವ ಇರದ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ಭಾರತ ಕ್ರಿಕೆಟ್ ತಂಡದ ಹೆಡ್‌ಕೋಚ್ ಆಗಿ ನೇಮಿಸಿತ್ತು.

ಗಂಭೀರ್ ಮಾರ್ಗದರ್ಶನದಲ್ಲಿ ಭಾರತ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು: ಗಂಭೀರ್‌ ಕೋಚ್‌ ಆದ ಬಳಿಕ ಭಾರತ 10 ಟೆಸ್ಟ್‌ ಆಡಿದ್ದು, ಕೇವಲ 3ರಲ್ಲಿ ಗೆದ್ದಿದೆ. ಇದರಲ್ಲಿ 2 ಟೆಸ್ಟ್‌ ಬಾಂಗ್ಲಾ ವಿರುದ್ಧ. ತಂಡ ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ವಿರುದ್ಧ 6 ಟೆಸ್ಟ್‌ ಸೋತಿದೆ. ಇನ್ನು, ಏಕದಿನದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲೂ ಗೆಲುವಿಲ್ಲ.

ಜನವರಿ 12ಕ್ಕೆ ಕೋಚ್‌ ಗೌತಮ್ ಗಂಭೀರ್‌ ಭವಿಷ್ಯ ನಿರ್ಧಾರ? ಬಲಿಷ್ಠ ತಂಡ ಕಟ್ಟಲು ಮಾಸ್ಟರ್ ಪ್ಲಾನ್

ಆದರೆ ಮನೋಜ್‌ ಟೀಕೆಗೆ ಕೆಕೆಆರ್‌ ಆಟಗಾರ ಹರ್ಷಿತ್‌ ರಾಣಾ, ತಂಡದ ಮಾಜಿ ನಾಯಕ ನಿತೀಶ್‌ ರಾಣಾ ತೀವ್ರ ಕಿಡಿಕಾರಿದ್ದು, ಯಾರೂ ವೈಯಕ್ತಿಕ ಟೀಕೆಗೆ ಇಳಿಯಬಾರದು. ಗಂಭೀರ್‌ ಏನು ಎಂಬುದನ್ನು ಅವರ ಸಾಧನೆಗಳೇ ಹೇಳುತ್ತದೆ’ ಎಂದಿದ್ದಾರೆ.