ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್‌ನಿಂದ ವೇಗಿ ಆಕಾಶ್‌ದೀಪ್ ಬೆನ್ನುನೋವಿನಿಂದ ಹೊರಬಿದ್ದಿದ್ದಾರೆ. ಈ ಸರಣಿಯಲ್ಲಿ ಈಗಾಗಲೇ ಭಾರತ 1-2 ಹಿನ್ನಡೆಯಲ್ಲಿದೆ. ಆಕಾಶ್‌ದೀಪ್ ಸ್ಥಾನದಲ್ಲಿ ಪ್ರಸಿದ್ಧ್ ಕೃಷ್ಣ ಅಥವಾ ಹರ್ಷಿತ್ ರಾಣಾ ಆಡುವ ಸಾಧ್ಯತೆ ಇದೆ. ಸರಣಿ ಸಮಬಲಕ್ಕೆ ಭಾರತ ಈ ಟೆಸ್ಟ್ ಗೆಲ್ಲಲೇಬೇಕು.

ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ಜನವರಿ 03ರಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ. ಈಗಾಗಲೇ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಸೋತು ಸರಣಿಯಲ್ಲಿ 1-2ರ ಹಿನ್ನಡೆಯಲ್ಲಿರುವ ಭಾರತ ತಂಡಕ್ಕೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ತಂಡದ ಪ್ರಮುಖ ವೇಗಿ ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.

ಈ ಶಾಕ್‌ನಿಂದ ಹೊರಬರುವ ಮುನ್ನವೇ ಭಾರತ ತಂಡಕ್ಕೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಪ್ರಮುಖ ವೇಗಿ ಆಕಾಶ್‌ದೀಪ್ ಇದೀಗ ಆಸ್ಟ್ರೇಲಿಯಾ ಎದುರಿನ ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಆಕಾಶ್‌ದೀಪ್, ಆಸ್ಟ್ರೇಲಿಯಾ ಎದುರಿನ ಬ್ರಿಸ್ಬೇನ್ ಹಾಗೂ ಮೆಲ್ಬರ್ನ್‌ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದು ಟೀಂ ಇಂಡಿಯಾ ಪರ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಅದರಲ್ಲೂ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಆಕಾಶ್‌ದೀಪ್, ಬುಮ್ರಾ ಜತೆಗೂಡಿ ಬ್ಯಾಟಿಂಗ್‌ನಲ್ಲಿ ತಂಡವನ್ನು ಫಾಲೋಆನ್ ಭೀತಿಯಿಂದಲೂ ಪಾರು ಮಾಡಿದ್ದರು. ಸದ್ಯ ಆಕಾಶ್‌ದೀಪ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಸ್ವತಃ ಟೀಂ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್ ಖಚಿತಪಡಿಸಿದ್ದಾರೆ.

ಟೀಂ ಇಂಡಿಯಾ ಜೆರ್ಸಿ ತೊಟ್ಟು ವಿನೋದ್ ಕಾಂಬ್ಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್! ಮಹತ್ವದ ಸಂದೇಶ ಸಾರಿದ ಮಾಜಿ ಕ್ರಿಕೆಟರ್

28 ವರ್ಷದ ಮಧ್ಯಮ ವೇಗದ ಬೌಲರ್ ಆಕಾಶ್‌ದೀಪ್ ಎರಡು ಟೆಸ್ಟ್ ಪಂದ್ಯಗಳಿಂದ ಬರೋಬ್ಬರಿ 87.5 ಓವರ್ ಬೌಲಿಂಗ್ ಮಾಡಿದ್ದರು. ಆಸ್ಟ್ರೇಲಿಯಾದ ಹಾರ್ಡ್‌ ಪಿಚ್‌ನಲ್ಲಿ ದೀರ್ಘಕಾಲ ಬೌಲಿಂಗ್ ಮಾಡುವುದರಿಂದ ಆಟಗಾರರಿಗೆ ಮಂಡಿನೋವು, ಪಾದದ ನೋವು ಹಾಗೂ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ ಎನಿಸಿದೆ. ಇದೀಗ ಆಕಾಶ್‌ದೀಪ್ ಅನುಪಸ್ಥಿತಿಯಲ್ಲಿ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಇಲ್ಲವೇ ಹರ್ಷಿತ್ ರಾಣಾ ಭಾರತದ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಟೀಂ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್, 'ಆಕಾಶ್‌ದೀಪ್‌ಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರು ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇನ್ನು ಭಾರತದ ಆಡುವ ಹನ್ನೊಂದರ ಬಳಗದ ಮಾಹಿತಿಯನ್ನು ಟಾಸ್ ವೇಳೆ ಹಂಚಿಕೊಳ್ಳಲಾಗುವುದು' ಎಂದು ಹೇಳಿದ್ದಾರೆ.

2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲೂ ಸೋತ್ರೆ ಗೌತಮ್ ಗಂಭೀರ್‌ ತಲೆದಂಡ?

5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಜಯಿಸಿತ್ತು. ಇದಾದ ಬಳಿಕ ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 10 ವಿಕೆಟ್ ಅಂತರದ ಜಯ ದಾಖಲಿಸಿತ್ತು. ಇನ್ನು ಬ್ರಿಸ್ಬೇನ್‌ನ ಗಾಬಾ ಟೆಸ್ಟ್ ಪಂದ್ಯವು ಮಳೆ ಅಡಚಣೆಯಿಂದಾಗಿ ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದಾದ ಬಳಿಕ ಡಿಸೆಂಬರ್ 26ರಿಂದ ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್‌ ಮೈದಾನದಲ್ಲಿ ಆರಂಭವಾದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 184 ರನ್ ಅಂತರದ ರೋಚಕ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದೆ. ಒಂದು ವೇಳೆ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸಬೇಕಿದ್ದರೇ, ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಟೆಸ್ಟ್‌ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ರೋಹಿತ್ ಶರ್ಮಾ ಪಡೆ ಸಿಲುಕಿದೆ. ಯಾಕೆಂದರೆ ಕಳೆದೊಂದು ದಶಕದಿಂದಲೂ ಬಾಕ್ಸಿಂಗ್ ಡೇ ಟೆಸ್ಟ್ ಟ್ರೋಫಿ ಭಾರತವೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಭಾರತ ತಂಡವು 2014ರಲ್ಲಿ ಕೊನೆಯ ಬಾರಿಗೆ ಬಾಕ್ಸಿಂಗ್ ಡೇ ಟೆಸ್ಟ್ ಸರಣಿಯನ್ನು ಸೋತಿತ್ತು.