ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2024ರ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್‌ಗೆ ಸೋಲುಣಿಸಿದ ಆರ್‌ಸಿಬಿ ಚೊಚ್ಚಲ ಟ್ರೋಫಿ ಗೆದ್ದಿದೆ. ಸೂರ್ಯಕುಮಾರ್ ಯಾದವ್ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ ವಿಜೇತರಾಗಿದ್ದಾರೆ.

ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗುವುದರೊಂದಿಗೆ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತವಾಗಿ ಮುಕ್ತಾಯಗೊಂಡಿದೆ. ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ಎದುರಿನ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವು 6 ರನ್ ರೋಚಕ ಜಯ ಸಾಧಿಸಿದೆ.ಈ ಮೂಲಕ ಚೊಚ್ಚಲ ಐಪಿಎಲ್ ಟ್ರೋಫಿಗೆ ಮುತ್ತಿಕ್ಕುವಲ್ಲಿ ರಜತ್ ಪಾಟೀದಾರ್ ಪಡೆ ಯಶಸ್ವಿಯಾಗಿದೆ.

ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಂಘಟಿತ ಪ್ರದರ್ಶನದ ನೆರವಿನಿಂದ 190 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಉತ್ತಮ ಆರಂಭ ಪಡೆಯಿತಾದರೂ ಆ ಬಳಿಕ ಕೃನಾಲ್ ಪಾಂಡ್ಯ ಹಾಗೂ ಭುವನೇಶ್ವರ್ ಕುಮಾರ್ ಮಾರಕ ದಾಳಿಗೆ ತತ್ತರಿಸಿ 184 ರನ್ ಗಳಿಸಷ್ಟೇ ಶಕ್ತವಾಯಿತು. ಇದರೊಂದಿಗೆ ಆರ್‌ಸಿಬಿ 6 ರನ್ ಅಂತರದ ರೋಚಕ ಗೆಲುವು ಸಾಧಿಸಿ, ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿಹಿಡಿದಿದೆ.

ಇನ್ನು ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಕೋಟಿ ರುಪಾಯಿ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ಇನ್ನು ಕೂದಲೆಳೆ ಅಂತರದಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಪಂಜಾಬ್ ಕಿಂಗ್ಸ್ ತಂಡವು 12.5 ಕೋಟಿ ರುಪಾಯಿ ನಗದು ಬಹುಮಾನ ಪಡೆಯಿತು. ಇನ್ನು ಎಲಿಮಿನೇಟರ್ ಗೆದ್ದು, ಕ್ವಾಲಿಫೈಯರ್ 2 ಪಂದ್ಯ ಸೋತು ಮೂರನೇ ಸ್ಥಾನ ಪಡೆದ ಮುಂಬೈ ಇಂಡಿಯನ್ಸ್‌ 7 ಕೋಟಿ ರುಪಾಯಿ ಪಡೆಯಿತು. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಮುಗ್ಗರಿಸಿ ನಾಲ್ಕನೇ ಸ್ಥಾನ ಪಡೆದ ಗುಜರಾತ್ ಟೈಟಾನ್ಸ್ 6.5 ಕೋಟಿ ರುಪಾಯಿ ತನ್ನದಾಗಿಸಿಕೊಂಡಿತು.

ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್:

ಇನ್ನು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರನಾಗಿ ಹೊರಹೊಮ್ಮಿದರು. ಈ ಪ್ರಶಸ್ತಿಗೆ ಸೂರ್ಯಕುಮಾರ್ ಯಾದವ್ 15 ಲಕ್ಷ ರುಪಾಯಿ ನಗದು ಬಹುಮಾನ ಪಡೆದರು.

ಆರೆಂಜ್ ಕ್ಯಾಪ್: ಗುಜರಾತ್ ಟೈಟಾನ್ಸ್ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ 759 ರನ್ ಸಿಡಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದರು. ಹೀಗಾಗಿ ಸಾಯಿ ಸುದರ್ಶನ್‌ಗೆ ಆರೆಂಜ್ ಕ್ಯಾಪ್ ಜತೆಗೆ 10 ಲಕ್ಷ ರುಪಾಯಿ ನಗದು ಬಹುಮಾನ ಒಲಿದು ಬಂದಿತು.

ಪರ್ಪಲ್‌ ಕ್ಯಾಪ್: ಕರ್ನಾಟಕ ಮೂಲದ ಗುಜರಾತ್ ಟೈಟಾನ್ಸ್ ತಂಡದ ನೀಳಕಾಯದ ವೇಗಿ ಪ್ರಸಿದ್ದ್ ಕೃಷ್ಣ 25 ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡರು. ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಮೊದಲ ಕರ್ನಾಟಕದ ಬೌಲರ್ ಎನ್ನುವ ಹಿರಿಮೆಗೆ ಪ್ರಸಿದ್ದ್ ಕೃಷ್ಣ ಪಾತ್ರರಾದರು. ಇದರ ಜತೆ 10 ಲಕ್ಷ ರುಪಾಯಿ ತಮ್ಮದಾಗಿಸಿಕೊಂಡರು.

ಕ್ಯಾಚ್ ಆಫ್ ದಿ ಸೀಸನ್: ಸನ್‌ರೈಸರ್ಸ್ ಹೈದರಾಬಾದ್ ತಂಡದ ಕ್ರಿಕೆಟಿಗ ಕಮಿಂದು ಮೆಂಡಿಸ್, ಸಿಎಸ್‌ಕೆ ಎದುರಿನ ಪಂದ್ಯದಲ್ಲಿ ಡೆವಾಲ್ಡ್ ಬ್ರೇವಿಸ್ ಅವರ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ, ಕ್ಯಾಚ್ ಆಫ್ ದಿ ಸೀಸನ್ ಪ್ರಶಸ್ತಿಗೆ ಪಾತ್ರರಾದರು. ಜತೆಗೆ 10 ಲಕ್ಷ ರುಪಾಯಿ ನಗದು ಬಹುಮಾನ ತನ್ನದಾಗಿಸಿಕೊಂಡರು.

ಫೇರ್ ಪ್ಲೇ ಅವಾರ್ಡ್: ಪ್ಲೇ ಆಪ್‌ ರೇಸ್‌ನಿಂದ ಮೊದಲ ತಂಡವಾಗಿ ಹೊರಬಿದ್ದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಫೇರ್ ಪ್ಲೇ ಅವಾರ್ಡ್ ತಮ್ಮದಾಗಿಸಿಕೊಂಡಿತು. ಇದರ ಜತೆಗೆ 10 ಲಕ್ಷ ರುಪಾಯಿ ನಗದು ಬಹುಮಾನ ತನ್ನದಾಗಿಸಿಕೊಂಡರು.

ಉದಯೋನ್ಮುಖ ಆಟಗಾರ ಪ್ರಶಸ್ತಿ: ಚೆನ್ನೈ ಮೂಲದ ಪ್ರತಿಭಾನ್ವಿತ ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ಎಮರ್ಜಿಂಗ್ ಪ್ಲೇಯರ್ ಆಫ್‌ ದಿ ಇಯರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇದರ ಜತೆಗೆ 10 ಲಕ್ಷ ರುಪಾಯಿ ನಗದು ಬಹುಮಾನ ತನ್ನದಾಗಿಸಿಕೊಂಡರು.

ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್: ರಾಜಸ್ಥಾನ ರಾಯಲ್ಸ್‌ನ 14 ವರ್ಷದ ಯುವ ಪ್ರತಿಭಾನ್ವಿತ ಬ್ಯಾಟರ್ ವೈಭವ್ ಸೂರ್ಯವಂಶಿ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿ ಪಡೆದರು. ಇದರ ಜತೆಗೆ ಟಾಟಾ ಕರ್ವ್ ಕಾರು ತಮ್ಮದಾಗಿಸಿಕೊಂಡರು.