ಕೋಲ್ಕತಾ(ಮಾ.16): ಇತ್ತೀಚೆಗೆ ದೆಹಲಿ-ಡೆಹ್ರಾಡೂನ್‌ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗೆ ಬೆಂಕಿ ಬಿದ್ದಾಗ ಅದರಲ್ಲಿ ಮಧ್ಯಪ್ರದೇಶ ಆರ್ಚರಿ ತಂಡ ಸಹ ಇತ್ತು. ಡೆಹ್ರಾಡೂನ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ತಂಡ ತೆರಳುತ್ತಿದ್ದಾಗ, ಕ್ರೀಡಾಪಟುಗಳಿದ್ದ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಅವರೆಲ್ಲಾ ತಕ್ಷಣ ಪಕ್ಕದ ಬೋಗಿಗೆ ಹಾರಿ ಜೀವಾಪಾಯದಿಂದ ಪಾರಾದರು. ಆದರೆ ಅವರ ಉಪಕರಣಗಳು, ಆಧಾರ್‌ ಕಾರ್ಡ್‌, ಜನನ ಪ್ರಮಾಣ ಪತ್ರ ಸೇರಿ ಅವರ ಬಳಿ ಇದ್ದ ಎಲ್ಲವೂ ಸುಟ್ಟು ಕರಕಲಾದವು. ಆದರೂ ಮಧ್ಯಪ್ರದೇಶ ತಂಡ ಚಾಂಪಿಯನ್‌ಶಿಪ್‌ನಲ್ಲಿ 4ಕ್ಕೂ ಹೆಚ್ಚು ಪದಕಗಳನ್ನು ಗೆದ್ದು ಅಸಾಧ್ಯವೆನಿಸುವ ಸಾಧನೆ ಮಾಡಿದೆ.

ವಿಷಯ ತಿಳಿದ ಕೋಚ್‌ ತಕ್ಷಣ ಹೊಸ ಉಪಕರಣಗಳನ್ನು ತರಿಸುವ ವ್ಯವಸ್ಥೆ ಮಾಡಿದರು. ಆದರೆ ಅವು ಪಟಿಯಾಲಾದಿಂದ ಬಂದಿದ್ದು ಸ್ಪರ್ಧೆಯ ದಿನ ನಸುಕಿನ ಜಾವ 2ಕ್ಕೆ. ಆಗ ಅವುಗಳನ್ನು ತಮ್ಮ ಅವಶ್ಯಕತೆಗೆ ತಕ್ಕಂತೆ ಸಿದ್ಧಪಡಿಸಿಕೊಂಡು, ಬೆಳಗ್ಗೆ 6ಕ್ಕೆ ಮೈದಾನಕ್ಕೆ ತೆರಳಿ ಕೆಲ ಕಾಲ ಅಭ್ಯಾಸ ನಡೆಸಿ ಸ್ಪರ್ಧೆಗಿಳಿದ ಆರ್ಚರ್‌ಗಳು ಪದಕ ಗೆದ್ದು ಅಚ್ಚರಿ ಮೂಡಿಸಿದರು. 

‘ಭಾರತದಲ್ಲಿ ಒಲಿಂಪಿಕ್ಸ್‌ ಆಯೋಜಿಸುವ ಗುರಿ’: ರಿಜಿಜು

ಕೋಚ್‌ಗಳ ಪ್ರಕಾರ ಹೊಸ ಉಪಕರಣಗಳು ಆರ್ಚರ್‌ಗಳ ಕೈಯಲ್ಲಿ ಪಳಗಲು ಕೆಲ ದಿನಗಳು ಬೇಕಾಗುತ್ತದೆ. ಹೀಗಿರುವಾಗ ಹೊಸ ಉಪಕರಣಗಳನ್ನು ಬಳಸಿ, ಹಿಂದಿನ ದಿನದ ಆತಂಕಕಾರಿ ಘಟನೆಯನ್ನು ಮರೆತು ಪದಕ ಗೆದ್ದಿರುವುದು ದೊಡ್ಡ ಸಾಧನೆ ಎಂದು ಭಾರತೀಯ ಆರ್ಚರಿ ಸಂಸ್ಥೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.