Asianet Suvarna News Asianet Suvarna News

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ಗೆ ಕೋವಿಡ್ ಪಾಸಿಟಿವ್..!

* ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್‌ಗೆ ಕೊರೋನಾ ದೃಢ

* ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ ಎಂದ ಗಂಭೀರ್

* ಕಳೆದ ವರ್ಷವೂ ಐಸೋಲೇಷನ್‌ಗೆ ಒಳಗಾಗಿದ್ದ ಮಾಜಿ ಕ್ರಿಕೆಟಿಗ

Former Team India Cricketer MP From East Delhi Gautam Gambhir Tests Positive For COVID 19 kvn
Author
Bengaluru, First Published Jan 25, 2022, 5:50 PM IST

ನವದೆಹಲಿ(ಜ.25): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಪಶ್ಚಿಮ ದೆಹಲಿಯ ಸಂಸದ ಗೌತಮ್‌ ಗಂಭೀರ್ (Gautam Gambhir) ಅವರಿಗೆ ಕೋವಿಡ್ 19 (COVID 19) ಸೋಂಕು ತಗುಲಿರುವುದು ದೃಢಪಟ್ಟಿದೆ. ಗಂಭೀರ್ ಅವರಿಗೆ ಸೋಂಕಿನ ಸೌಮ್ಯ ಲಕ್ಷಣವಿರುವುದಾಗಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ. 

ನನ್ನಲ್ಲಿ ಕೊರೋನಾ ಸೋಂಕಿನ (Coronavirus) ಸೌಮ್ಯ ಲಕ್ಷಣಗಳು ಅನುಭವಕ್ಕೆ ಬಂದಿತು. ಇದರ ಬೆನ್ನಲ್ಲೇ ಕೊರೋನಾ ಟೆಸ್ಟ್‌ ಮಾಡಿಸಿದಾಗ ನನಗೆ ಕೋವಿಡ್‌ 19 ಸೋಂಕು ತಗುಲಿರುವುದು ದೃಢಪಟ್ಟಿತು. ನನ್ನೊಂದಿದೆ ಯಾರೆಲ್ಲಾ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರೋ ಅವರೆಲ್ಲರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಗೌತಮ್‌ ಗಂಭೀರ್ ಟ್ವೀಟ್‌ ಮಾಡಿದ್ದಾರೆ.

ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ ಗೌತಮ್ ಗಂಭೀರ್ ಅವರ ಕುಟುಂಬಸ್ಥರಿಗೆ ಕೋವಿಡ್ 19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗೌತಮ್‌ ಗಂಭೀರ್ ಮನೆಯಲ್ಲಿಯೇ ಐಸೋಲೇಷನ್‌ಗೆ ಒಳಗಾಗಿದ್ದರು. 

ವೆಂಕಟೇಶ್ ಅಯ್ಯರ್‌ಗೆ ಕೇವಲ ಟಿ20 ತಂಡದಲ್ಲಿ ಮಾತ್ರ ಸ್ಥಾನ ನೀಡಿ ಎಂದ ಗೌತಮ್ ಗಂಭೀರ್

ಭಾರತ ಕ್ರಿಕೆಟ್ ತಂಡದ ಯುವ ಪ್ರತಿಭಾನ್ವಿತ ಆಲ್ರೌಂಡರ್ ವೆಂಕಟೇಶ್ ಅಯ್ಯರ್‌ (Venkatesh Iyer) ಅವರನ್ನು ಇನ್ನು ಮುಂದೆ ಏಕದಿನ ತಂಡಕ್ಕೆ ಪರಿಗಣಿಸಬಾರದು, ಅವರನ್ನು ಕೇವಲ ಟಿ20 ತಂಡದಲ್ಲಿ ಮಾತ್ರ ಅವಕಾಶ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿ ಮುಕ್ತಾಯದ ಬಳಿಕ ಗಾಯದ ಸಮಸ್ಯೆಯಿಂದಾಗಿ ಹಾರ್ದಿಕ್ ಪಾಂಡ್ಯ (Hardik Pandya) ಟೀಂ ಇಂಡಿಯಾದಿಂದ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೇ ವೆಂಕಟೇಶ್ ಅಯ್ಯರ್‌ಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದದ ಸೀಮಿತ ಓವರ್‌ಗಳ ಸರಣಿಗೆ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಏಕದಿನ ಸರಣಿಗೆ ವೆಂಕಟೇಶ್ ಅಯ್ಯರ್‌ಗೆ ತಂಡದಲ್ಲಿ ಮಣೆ ಹಾಕಲಾಗಿತ್ತು.

Pro Kabaddi League: ಪ್ರೊ ಕಬಡ್ಡಿಗೂ ಶುರುವಾಯ್ತು ಕೋವಿಡ್ ಕಾಟ, ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ..!

ಹಾರ್ದಿಕ್ ಪಾಂಡ್ಯ ಅವರ ಸ್ಥಾನವನ್ನು ತುಂಬಬಲ್ಲ ಆಟಗಾರ ಎಂದು ಬಿಂಬಿಸಲ್ಪಟ್ಟಿರುವ ಹಾರ್ದಿಕ್ ಪಾಂಡ್ಯ, ಭಾರತ ಟಿ20 ಪಂದ್ಯಗಳಲ್ಲಿ ಮೂರನೇ ಹಾಗೂ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 28 ಎಸೆತಗಳಿಮ 36 ರನ್ ಬಾರಿಸಿದ್ದಾರೆ. ಇನ್ನು ಒಂದು ಇನಿಂಗ್ಸ್‌ನಲ್ಲಿ ಮಾತ್ರ 3 ಓವರ್‌ ಬೌಲಿಂಗ್‌ ಮಾಡಿ 12 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು.

ಇನ್ನು ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಯಲ್ಲಿ ವೆಂಕಟೇಶ್ ಅಯ್ಯರ್ ಎರಡು ಪಂದ್ಯಗಳನ್ನಾಡಿ 40 ಎಸೆತಗಳನ್ನು ಎದುರಿಸಿ ಕೇವಲ 24 ರನ್‌ ಗಳಿಸಿದ್ದಾರೆ. ಇನ್ನು ಎರಡನೇ ಪಂದ್ಯದಲ್ಲಿ 5 ಓವರ್‌ ಬೌಲಿಂಗ್ ಮಾಡಿ 28 ರನ್ ನೀಡಿದ್ದರು. ಆದರೆ ವಿಕೆಟ್ ಗಳಿಸಲು ಯಶಸ್ವಿಯಾಗಿರಲಿಲ್ಲ. ಹೀಗಾಗಿ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಿಂದ ವೆಂಕಟೇಶ್ ಅಯ್ಯರ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು.

ಈ ಕುರಿತಂತೆ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೌತಮ್ ಗಂಭೀರ್, ವೆಂಕಟೇಶ್ ಅಯ್ಯರ್‌ ಅವರಿಗೆ ಏಕದಿನ ಕ್ರಿಕೆಟ್ ಆಡುವಷ್ಟು ಪ್ರಬುದ್ಧತೆ ಬಂದಿಲ್ಲ. ಹೀಗಾಗಿ ಅವರನ್ನು ಕೇವಲ ಟಿ20 ತಂಡಕ್ಕೆ ಮಾತ್ರ ಅವಕಾಶ ನೀಡಬೇಕು. ಹಾಗೂ ಟಿ20 ಕ್ರಿಕೆಟ್‌ನಲ್ಲಿ ವೆಂಕಟೇಶ್ ಅಯ್ಯರ್ ಆರಂಭಿಕನಾಗಿ ಕಣಕ್ಕಿಳಿಯಬೇಕು ಎಂದು ಗಂಭೀರ್ ಹೇಳಿದ್ದಾರೆ.

ನನಗನಿಸುತ್ತದೆ ವೆಂಕಟೇಶ್ ಅಯ್ಯರ್ ಅವರನ್ನು ಕೇವಲ ಟಿ20 ಕ್ರಿಕೆಟ್‌ಗೆ ಮಾತ್ರ ಪರಿಗಣಿಸಬೇಕು. ಏಕೆಂದರೆ ಏಕದಿನ ಕ್ರಿಕೆಟ್ ಆಡುವಷ್ಟು ಪ್ರಬುದ್ದತೆ ಅಯ್ಯರ್‌ಗೆ ಇನ್ನೂ ಬಂದಿಲ್ಲ. ಕೇವಲ 7-8 ಐಪಿಎಲ್‌ ಪಂದ್ಯದಲ್ಲಿ ತೋರಿದ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ವೆಂಕಟೇಶ್ ಅಯ್ಯರ್‌ಗೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಅವಕಾಶ ನೀಡಲಾಗಿದೆ. ಒಂದು ವೇಳೆ ನೀವು ಐಪಿಎಲ್ ಪ್ರದರ್ಶನವನ್ನೇ ಗಮನದಲ್ಲಿಟ್ಟುಕೊಂಡು ಅವಕಾಶ ನೀಡುವುದಾದರೆ, ಅವರಿಗೆ ಟಿ20 ಕ್ರಿಕೆಟ್‌ಗೆ ಮಾತ್ರ ಅವಕಾಶ ನೀಡಿ. ಏಕೆಂದರೆ ಏಕದಿನ ಕ್ರಿಕೆಟ್‌, ಟಿ20 ಕ್ರಿಕೆಟ್‌ಗೆ ಹೋಲಿಸಿದರೆ ಬೇರೆಯದ್ದೇ ರೀತಿಯ ಕ್ರಿಕೆಟ್ ಪಂದ್ಯವಾಗಿದೆ ಎಂದು ಗಂಭೀರ್ ಹೇಳಿದ್ದಾರೆ. 

ಭಾರತ ತಂಡವು ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಸೀಮಿತ ಓವರ್‌ಗಳ ಸರಣಿಯನ್ನು ಆಡಲಿದೆ. ಫೆಬ್ರವರಿ 6ರಿಂದ ಆರಂಭವಾಗಲಿರುವ ಸರಣಿಯಲ್ಲಿ ಉಭಯ ತಂಡಗಳು ತಲಾ 3 ಪಂದ್ಯಗಳ ಏಕದಿನ ಸರಣಿ ಹಾಗೂ ಟಿ20 ಸರಣಿಯನ್ನು ಆಡಲಿದೆ.

Follow Us:
Download App:
  • android
  • ios