ನವದೆಹಲಿ(ಆ.20): ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದೇ ಸಂಜೆ ತಮ್ಮ 16 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್‌ ಬೈ ಹೇಳಿದ್ದರು. ಇದರ ಬೆನ್ನಲ್ಲೇ ಧೋನಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು.

"

ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡಾ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಅವರ ಸಾಧನೆಯನ್ನು ಪ್ರಶಂಸಿಸಿ ಪತ್ರ ಬರೆದಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆದ್ದ ಕ್ಷಣ ಹಾಗೆಯೇ ದೇಶದ ಒಂದು ಮೂಲೆಯಿಂದ ಬಂದು ಇಡೀ ದೇಶವೇ ಹೆಮ್ಮೆ ಪಡುವಂತೆ ಬೆಳೆದು ನಿಂತ ಧೋನಿ ಕ್ರಿಕೆಟ್ ವೃತ್ತಿ ಬದುಕನ್ನು ಮೋದಿ ಕೊಂಡಾಡಿದ್ದಾರೆ.

ಎಂ ಎಸ್ ಧೋನಿ ಸರಿಯಾಗಿ ಸಂಜೆ 7.29ಕ್ಕೆ ನಿವೃತ್ತಿ ಘೋಷಿಸಿದ್ದೇಕೆ..? ಇಲ್ಲಿದೆ ನಿಜವಾದ ಕಾರಣ

ಇದೇ ವೇಳೆ ರಾಂಚಿ ಆಟಗಾರನ ಭಾರತದ ಸೇನೆಯ ಜೊತೆಗಿರುವ ಸಂಬಂಧಕ್ಕೆ ಧನ್ಯವಾದ ಅರ್ಪಸಿದ್ದಾರೆ. ಇದರ ಜತೆಗೆ ಭವಿಷ್ಯದ ಜೀವನಕ್ಕೂ ಮೋದಿ ಶುಭ ಹಾರೈಸಿದ್ದಾರೆ.

ಧನ್ಯವಾದ ಅರ್ಪಿಸಿದ ಧೋನಿ: ಪ್ರಧಾನಿ ಮೋದಿ ಬರೆದ ಅಭಿನಂದನಾ ಪತ್ರವನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಹಂಚಿಕೊಂಡ ಮಹೇಂದ್ರ ಸಿಂಗ್ ಧೋನಿ ಪ್ರಧಾನಿ ಧನ್ಯವಾದ ಅರ್ಪಿಸಿದ್ದಾರೆ. ಕಲಾವಿದ, ಸೈನಿಕ ಮತ್ತು ಕ್ರೀಡಾಪಟುಗಳು ತಮ್ಮ ಪ್ರತಿಭೆ, ಸೇವೆಯನ್ನು ಗುರುತಿಸಿ ಬೆಂಬಲಿಸಲಿ ಎಂದು ಹಂಬಲಿಸುತ್ತಾರೆ. ನನ್ನನ್ನು ಗುರುತಿಸಿ ಅಭಿನಂದನಾ ಪತ್ರ ಬರೆದಿದ್ದಕ್ಕೆ ಹಾಗೂ ಶುಭಕೋರಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಧೋನಿ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಧೋನಿ ನಿವೃತ್ತಿಯಾದ ದಿನವೇ ಗೃಹಸಚಿವ ಅಮಿತ್ ಶಾ ಕೂಡಾ ಧೋನಿ ಅವರಿಗೆ ಟ್ವೀಟ್ ಮೂಲಕ ಶುಭ ಕೂರಿದ್ದರು. ಮಹೇಂದ್ರ ಸಿಂಗ್ ಧೋನಿ ತಮ್ಮದೇ ವಿಶಿಷ್ಠ ಶೈಲಿಯ ಕ್ರಿಕೆಟ್ ಮೂಲಕ ಲಕ್ಷಾಂತರ ಮಂದಿಯನ್ನು ಮೂಕವಿಸ್ಮಿತರನ್ನಾಗಿ ಮಾಡಿದ್ದರು. ಮುಂದಿನ ದಿನಗಳಲ್ಲಿ ಟೀಂ ಇಂಡಿಯಾವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಲು ಅವರು ಕೊಡುಗೆ ನೀಡುತ್ತಾರೆ ಎಂದು ಭಾವಿಸಿದ್ದೇನೆ. ಅವರ ಭವಿಷ್ಯದ ಜೀವನಕ್ಕೆ ಶುಭವಾಗಲಿ. ವಿಶ್ವ ಕ್ರಿಕೆಟ್ ಜಗತ್ತು ಇನ್ನು ಮುಂದೆ ಹೆಲಿಕಾಪ್ಟರ್ ಶಾಟ್ ನೋಡುವ ಅವಕಾಶವನ್ನು ಮಿಸ್ ಮಾಡಿಕೊಳ್ಳುತ್ತದೆ ಮಾಹಿ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದರು.