ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್‌ ಡುಪ್ಲೆಸಿಸ್‌ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಜೊಹಾನ್ಸ್‌ಬರ್ಗ್‌(ಫೆ.17): ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್‌ ಡುಪ್ಲೆಸಿಸ್‌ ಸಾಂಪ್ರಾದಾಯಿಕ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಕೋವಿಡ್‌ ಭೀತಿಯಿಂದ ರದ್ದಾಗಿ ಕೆಲದಿನಗಳು ಕಳೆಯುವಷ್ಟರಲ್ಲೇ 36 ವರ್ಷದ ಡುಪ್ಲೆಸಿಸ್‌ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಟೆಸ್ಟ್ ವಿದಾಯದ ನಿರ್ಧಾರವನ್ನು ಪ್ರಕಟಿಸಿರುವ ಡುಪ್ಲೆಸಿಸ್‌, 'ನನ್ನ ಹೃದಯದಲ್ಲಿ ನಿರ್ಣಯ ದೃಢವಾಗಿದೆ. ಹೊಸ ಅಧ್ಯಾಯ ಆರಂಭಿಸಲು ಇದು ಸರಿಯಾದ ಸಮಯ' ಎಂದು ಹರಿಣಗಳ ಮಾಜಿ ನಾಯಕ ಬರೆದುಕೊಂಡಿದ್ದಾರೆ.

View post on Instagram

2012ರಲ್ಲಿ ಅಸ್ಟ್ರೇಲಿಯಾ ವಿರುದ್ದ ಅಡಿಲೇಡ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆ ಟೆಸ್ಟ್ ಪಂದ್ಯದ 4ನೇ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಬರೋಬ್ಬರಿ 376 ಎಸೆತಗಳನ್ನು ಎದುರಿಸಿ ಅಜೇಯ 110 ರನ್‌ ಬಾರಿಸುವ ಮೂಲಕ ಆ ಪಂದ್ಯದಲ್ಲಿ ಡ್ರಾ ಸಾಧಿಸಲು ಡುಪ್ಲೆಸಿಸ್‌ ನೆರವಾಗಿದ್ದರು.

ಇಂಗ್ಲೆಂಡ್‌ ವಿರುದ್ಧ ಟಿ20, ಏಕದಿನಕ್ಕೆ ಜಸ್ಪ್ರೀತ್‌ ಬುಮ್ರಾಗೆ ರೆಸ್ಟ್‌?

36 ವರ್ಷದ ಫಾಫ್ ಡುಪ್ಲೆಸಿಸ್‌ ದಕ್ಷಿಣ ಆಫ್ರಿಕಾ ಪರ 69 ಟೆಸ್ಟ್‌ ಪಂದ್ಯಗಳನ್ನಾಡಿ 10 ಶತಕ ಹಾಗೂ 21 ಅರ್ಧಶತಕ ಸಹಿತ 40.02ರ ಸರಾಸರಿಯಲ್ಲಿ 4163 ರನ್‌ ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. 

201ರಲ್ಲಿ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವದಿಂದ ಕೆಳಗಿಳಿದ ಬಳಿಕ ಫಾಫ್‌ ಡುಪ್ಲೆಸಿಸ್‌ ಟೆಸ್ಟ್ ಹಾಗೂ ಟಿ20 ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಕಳೆದ ವರ್ಷ ಡುಪ್ಲೆಸಿಸ್‌ ನಾಯಕತ್ವದಿಂದ ಕೆಳಗಿಳಿದಿದ್ದರು. ಆಸ್ಟ್ರೇಲಿಯಾ ವಿರುದ್ದ ತವರಿನಲ್ಲಿ ಟೆಸ್ಟ್ ಸರಣಿ ಆಡಿ ಆ ಬಳಿಕ ರೆಡ್‌ ಬಾಲ್‌ ಕ್ರಿಕೆಟ್‌ ಮಾದರಿಗೆ ಗುಡ್‌ಬೈ ಹೇಳುವ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಆ ಸರಣಿ ರದ್ದಾದ ಹಿನ್ನೆಲೆಯಲ್ಲಿ ಡುಪ್ಲೆಸಿಸ್‌ ಈ ನಿರ್ಧಾರ ತೆಗೆದುಕೊಂಡಿದ್ದಾರೆ.