ಟೀಂ ಇಂಡಿಯಾ ಕ್ರಿಕೆಟಿಗ ಆರ್ ಪಿ ಸಿಂಗ್ ತಂದೆ ಕೋವಿಡ್‌ಗೆ ಬಲಿ..!
* ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರುದ್ರ ಪ್ರತಾಪ್ ಸಿಂಗ್ ತಂದೆ ಕೋವಿಡ್‌ಗೆ ಬಲಿ
* ಟ್ವೀಟ್ ಮೂಲಕ ತಂದೆಯ ಸಾವಿನ ವಿಚಾರ ತಿಳಿಸಿದ ಎಡಗೈ ವೇಗಿ
* ಆರ್ ಪಿ ಸಿಂಗ್ ತಂದೆಯ ನಿಧನಕ್ಕೆ ಸಂತಾಪ ಸೂಚಿಸಿದ ಹಿರಿಯ ಕ್ರಿಕೆಟಿಗರು
ನವದೆಹಲಿ(ಮೇ.12): ಕೋವಿಡ್ ಎರಡನೇ ಅಲೆಗೆ ಭಾರತ ಅಕ್ಷರಶಃ ಬೆಚ್ಚಿಬಿದ್ದಿದೆ. ಅದರಲ್ಲೂ ಯಾಕೋ ಏನೋ ಕೊರೋನಾ ಹೆಮ್ಮಾರಿ ಭಾರತ ಕ್ರಿಕೆಟ್ ತಂಡದ ಆಟಗಾರರ ಪೋಷಕರ ಮೇಲೆ ವಕ್ರದೃಷ್ಟಿ ಬೀರಿದಂತಿದೆ. ವೇದಾ ಕೃಷ್ಣಮೂರ್ತಿ ತಾಯಿ, ಪೀಯೂಸ್ ಚಾವ್ಲಾ ತಂದೆಯನ್ನು ಬಲಿಪಡೆದಿದ್ದ ಕೊರೋನಾ, ಇದೀಗ ಭಾರತ ತಂಡದ ಮಾಜಿ ಕ್ರಿಕೆಟಿಗ ರುದ್ರ ಪ್ರತಾಪ್ ಸಿಂಹ ಅವರ ತಂದೆಯನ್ನು ಆಪೋಶನ ಪಡೆದಿದೆ.
ಹೌದು, ಸ್ವತಃ ಈ ವಿಚಾರವನ್ನು ಆರ್ ಪಿ ಸಿಂಗ್ ಟ್ವೀಟ್ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಕೋವಿಡ್‌ನಿಂದ ಬಳಲುತ್ತಿದ್ದ ನಮ್ಮ ತಂದೆ ಶಿವಪ್ರಸಾದ್ ಸಿಂಗ್ ಇಂದು(ಮೇ.12) ಕೊನೆಯುಸಿರೆಳೆದಿದ್ದಾರೆ. ನನ್ನ ತಂದೆಯ ಆತ್ಮಕ್ಕೆ ಸಾಕ್ಷಿಸಿಗಲೆಂದು ನೀವು ಪ್ರಾರ್ಥಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗ ಪೀಯೂಸ್ ಚಾವ್ಲಾ ತಂದೆ ಬಲಿ ಪಡೆದ ಕೊರೋನಾ..!
ರುದ್ರ ಪ್ರತಾಪ್ ಸಿಂಗ್ ತಂದೆಯ ನಿಧನಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಪ್ರಗ್ಯಾನ್ ಓಜಾ, ಸುರೇಶ್ ರೈನಾ, ರಮೇಶ್ ಪೊವಾರ್ ಹಾಗೂ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಹರ್ಷಲ್ ಗಿಬ್ಸ್ ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದಾರೆ.
ಆರ್ ಪಿ ಸಿಂಗ್ ಭಾರತ ಪರ 14 ಟೆಸ್ಟ್, 58 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 40, 69 ಹಾಗೂ 15 ವಿಕೆಟ್ ಕಬಳಿಸಿದ್ದಾರೆ. 2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಆರ್ ಪಿ ಸಿಂಗ್ ಮಹತ್ವದ ಪಾತ್ರ ನಿಭಾಯಿಸಿದ್ದರು. 35 ವರ್ಷದ ಎಡಗೈ ವೇಗಿ 2018ರ ಸೆಪ್ಟೆಂಬರ್‌ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.
ಸೋಮವಾರವಷ್ಟೇ ಟೀಂ ಇಂಡಿಯಾ ಮತ್ತೋರ್ವ ಆಟಗಾರ ಪೀಯೂಸ್ ಚಾವ್ಲಾ ತಂದೆ ಕೋವಿಡ್‌ಗೆ ಬಲಿಯಾಗಿದ್ದರು. ಇನ್ನು ಭಾರತ ಮಹಿಳಾ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಕೇವಲ 10 ದಿನಗಳ ಅಂತರದಲ್ಲಿ ತನ್ನ ತಾಯಿ ಚಲುವಾಂಬ ಹಾಗೂ ಸಹೋದರಿ ವತ್ಸಲ್‌ರನ್ನು ಕೋವಿಡ್‌ನಿಂದಾಗಿ ಕಳೆದುಕೊಂಡಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona