ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಠಾಣೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ತಪಾಸಣೆ ನಡೆಯುತ್ತಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕ ಎಂದು ವರದಿಯಾಗಿದೆ. ಇತ್ತೀಚೆಗೆ ಸಚಿನ್ ಜೊತೆಗಿನ ಕಾರ್ಯಕ್ರಮದಲ್ಲಿ ಅವರ ಅಸ್ವಸ್ಥತೆ ಗೋಚರಿಸಿತ್ತು. ಕಾಂಬ್ಳಿ 1991ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು.
ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಶನಿವಾರ(ಡಿ.21) ತಡರಾತ್ರಿ ಠಾಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ವಿನೋದ್ ಕಾಂಬ್ಳಿ ಅವರನ್ನು ಹಲವು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಕೆಲವು ಮಾಧ್ಯಮಗಳ ವರದಿಯ ಪ್ರಕಾರ ವಿನೋದ್ ಕಾಂಬ್ಳಿ ಅವರ ಆರೋಗ್ಯ ಚಿಂತಾಜನಕ ಸ್ಥಿತಿಯಲ್ಲಿದೆ ಎಂದು ವರದಿಯಾಗಿದೆ.
ಕೆಲವು ದಿನಗಳ ಹಿಂದಷ್ಟೇ ವಿನೋದ್ ಕಾಂಬ್ಳಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಕಾಂಬ್ಳಿ ತನ್ನ ಬಾಲ್ಯದ ಗೆಳೆಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಆಗಲೇ ವಿನೋದ್ ಕಾಂಬ್ಳಿ ಅವರ ಆರೋಗ್ಯ ಹದಗೆಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಕಾಂಬ್ಳಿಗೆ ವೇದಿಕೆ ಬಳಿ ನಡೆದುಕೊಂಡು ಬರುವುದಿರಲಿ, ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಈ ವಿಡಿಯೋ ವೈರಲ್ ಆದ ಬಳಿಕ ಹಲವು ಕ್ರಿಕೆಟಿಗರು ವಿನೋದ್ ಕಾಂಬ್ಳಿಗೆ ಸಹಾಯ ಮಾಡುವುದಾಗಿ ಮುಂದೆ ಬಂದಿದ್ದರು.
ಪೈಸೆ ಪೈಸೆಗೂ ಪರದಾಡುತ್ತಿರುವ ವಿನೋದ್ ಕಾಂಬ್ಳಿ; ಬೀದಿಗೆ ಬೀಳುವ ಆತಂಕದಲ್ಲಿ ಮಾಜಿ ಕ್ರಿಕೆಟರ್!
1991ರಲ್ಲಿ ಕಾಂಬ್ಳಿ ಟೀಂ ಇಂಡಿಯಾಗೆ ಪಾದಾರ್ಪಣೆ;
ಪ್ರತಿಭಾನ್ವಿತ ಎಡಗೈ ಬ್ಯಾಟರ್ ಆಗಿದ್ದ ವಿನೋದ್ ಕಾಂಬ್ಳಿ 1991ರಲ್ಲಿ ಭಾರತ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ 1993ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದರು. ವಿನೋದ್ ಕಾಂಬ್ಳಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕನ್ನು ಭರ್ಜರಿಯಾಗಿಯೇ ಆರಂಭಿಸಿದ್ದರು. ಭಾರತ ಪರ ಅತಿವೇಗವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್ ಬಾರಿಸಿದ ದಾಖಲೆ ಇಂದಿಗೂ ಕಾಂಬ್ಳಿ ಹೆಸರಿನಲ್ಲಿ ಅಚ್ಚಳಿಯದೇ ಉಳಿದಿದೆ. ವಿನೋದ್ ಕಾಂಬ್ಳಿ ಕೇವಲ 14 ಟೆಸ್ಟ್ ಇನ್ನಿಂಗ್ಸ್‌ಗಳನ್ನಾಡಿ ಒಂದು ಸಾವಿರ ರನ್ ಪೂರೈಸಿದ್ದರು. ಆದರೆ ಇದಾದ ಬಳಿಕ ದಾರಿ ತಪ್ಪಿದ ವಿನೋದ್ ಕಾಂಬ್ಳಿ ದಿನಕಳೆದಂತೆ ತಮ್ಮ ಫಾರ್ಮ್ ಕೂಡಾ ಕಳೆದುಕೊಳ್ಳುತ್ತಾ ಸಾಗಿದರು.
ವಿನೋದ್ ಕಾಂಬ್ಳಿಗಿಂತ ಕರುಣಾಜನಕವಾಗಿದೆ ಈ ಕ್ರಿಕೆಟಿಗನ ಕಥೆ, ಚಪ್ಪಲಿ ಕೊಳ್ಳೋಕು ಕಾಸಿಲ್ಲ!
ವಿನೋದ್ ಕಾಂಬ್ಳಿ ಕ್ರಿಕೆಟ್ ಅಂಕಿ-ಅಂಶ:
ಸ್ಪೋಟಕ ಎಡಗೈ ಬ್ಯಾಟರ್ ಆಗಿದ್ದ ವಿನೋದ್ ಕಾಂಬ್ಳಿ ಭಾರತ ಪರ 17 ಟೆಸ್ಟ್ ಪಂದ್ಯಗಳನ್ನಾಡಿ 1084 ರನ್ ಸಿಡಿಸಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ 4 ಶತಕ ಹಾಗೂ ಮೂರು ಅರ್ಧಶತಕ ಬಾರಿಸಿದ್ದಾರೆ. ಇನ್ನು ಭಾರತ ಪರ 104 ಏಕದಿನ ಪಂದ್ಯಗಳನ್ನಾಡಿರುವ ಕಾಂಬ್ಳಿ ಇಟ್ಟು 2477 ರನ್ ಸಿಡಿಸಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ 14 ಅರ್ಧಶತಕಗಳು ಸೇರಿವೆ. ವಿನೋದ್ ಕಾಂಬ್ಳಿ 2000ನೇ ಇಸವಿಯಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯವನ್ನಾಡಿದ್ದರು.
