ನವದೆಹಲಿ(ಮೇ.14): ಮಾಜಿ ಸ್ಪಿನ್ನರ್‌ ರಮೇಶ್‌ ಪೊವಾರ್‌ ಭಾರತ ಮಹಿಳಾ ಕ್ರಿಕೆಟ್‌ ತಂಡದ ನೂತನ ಪ್ರಧಾನ ಕೋಚ್‌ ಆಗಿ ಗುರುವಾರ ನೇಮಕಗೊಂಡಿದ್ದಾರೆ. 

2018ರ ಟಿ20 ವಿಶ್ವಕಪ್‌ ಬಳಿಕ ನಾಯಕಿ ಮಿಥಾಲಿ ರಾಜ್‌ ಜೊತೆಗಿನ ಮನಸ್ತಾಪದಿಂದಾಗಿ ಅವರನ್ನು ಕೋಚ್‌ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಇದೀಗ ಮತ್ತೊಮ್ಮೆ ತಂಡಕ್ಕೆ ಮಾರ್ಗದರ್ಶನ ನೀಡುವ ಅವಕಾಶ ಪಡೆದಿದ್ದಾರೆ. 42 ವರ್ಷದ ಪೊವಾರ್‌ ಹೆಸರನ್ನು ಮದಲ್‌ ಲಾಲ್‌ ನೇತೃತ್ವದ ಕ್ರಿಕೆಟ್‌ ಸಲಹಾ ಸಮಿತಿ(ಸಿಎಸಿ) ಶಿಫಾರಸು ಮಾಡಿದ ಬಳಿಕ ಬಿಸಿಸಿಐ ಅಧಿಕೃತವಾಗಿ ನೇಮಕಗೊಳಿಸಿತು. ಮುಂದಿನ ವರ್ಷ ಏಕದಿನ ವಿಶ್ವಕಪ್‌ಗೆ ತಂಡವನ್ನು ಸಿದ್ಧಗೊಳಿಸುವುದು ಪೊವಾರ್‌ ಮುಂದಿರುವ ಸವಾಲಾಗಿದೆ.

ಸಿಎಸಿ ಒಟ್ಟು ತಲಾ 4 ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳನ್ನು ಸಂದರ್ಶಿಸಿತ್ತು. ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಫೈನಲ್‌ ಪ್ರವೇಶಿಸಿದ್ದರೂ, ಇತ್ತೀಚೆಗೆ ನಡೆದಿದ್ದ ದ.ಆಫ್ರಿಕಾ ವಿರುದ್ಧದ ಸರಣಿಯಲ್ಲಿ ತಂಡ ಸೋತಿದ್ದರಿಂದ ಡಬ್ಲ್ಯುವಿ ರಾಮನ್‌ ಕೋಚ್‌ ಹುದ್ದೆ ಕಳೆದುಕೊಂಡರು ಎನ್ನಲಾಗಿದೆ.

ಕಾಮನ್‌ವೆಲ್ತ್‌ ಗೇಮ್ಸ್‌‌ 2022: ಭಾರತ ಸೇರಿ 8 ಕ್ರಿಕೆಟ್ ತಂಡಗಳು ಕಣಕ್ಕೆ

ಡಬ್ಲ್ಯುವಿ ರಾಮನ್‌ 2018ರ ಡಿಸೆಂಬರ್‌ನಿಂದ ಇಲ್ಲಿಯವರೆಗೆ ಭಾರತ ಮಹಿಳಾ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ರಮೇಶ್ ಪೊವಾರ್‌ಗೆ ಟ್ವೀಟ್‌ ಮೂಲಕ ರಾಮನ್‌ ಶುಭ ಹಾರೈಸಿದ್ದಾರೆ.