* ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥ ಸ್ಥಾನಕ್ಕೆ ರಾಹುಲ್‌ ದ್ರಾವಿಡ್‌ ಮರು ಅರ್ಜಿ* 2019ರಲ್ಲಿ ಎನ್‌ಸಿಎ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದ ದ್ರಾವಿಡ್‌* ಎನ್‌ಸಿಎ ಮುಖ್ಯಸ್ಥ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಆಗಸ್ಟ್ 15 ಕೊನೆಯ ದಿನವಾಗಿತ್ತು.

ನವದೆಹಲಿ(ಆ.19): ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ) ಮುಖ್ಯಸ್ಥ ಸ್ಥಾನಕ್ಕೆ ಮತ್ತೆ ಅರ್ಜಿ ಸಲ್ಲಿಸಿದ್ದಾರೆ.

2019ರಲ್ಲಿ ಎನ್‌ಸಿಎ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದ ದ್ರಾವಿಡ್‌ರ ಒಪ್ಪಂದದ ಅವಧಿ ಪೂರ್ಣಗೊಂಡ ಕಾರಣ, ನಿಯಮದ ಪ್ರಕಾರ ಬಿಸಿಸಿಐ, ಎನ್‌ಸಿಎ ಮುಖ್ಯಸ್ಥ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿತ್ತು. ಇದೀಗ ದ್ರಾವಿಡ್‌ ಹೊರತು ಪಡಿಸಿ ಇನ್ಯಾರೂ ಅರ್ಜಿ ಸಲ್ಲಿಸದ ಕಾರಣ, ಬಿಸಿಸಿಐ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಿದೆ. ಆಗಸ್ಟ್ 15 ಕೊನೆಯ ದಿನವಾಗಿತ್ತು. ಇದರೊಂದಿಗೆ ಎನ್‌ಸಿಎ ಮುಖ್ಯಸ್ಥರಾಗಿ ಮತ್ತೊಂದು ಅವಧಿಗೆ ದ್ರಾವಿಡ್‌ ಮುಂದುವರೆಯುವುದು ಬಹುತೇಕ ಖಚಿತವಾಗಿದೆ.

ಇನ್ನೊಂದೆಡೆ ಟಿ20 ವಿಶ್ವಕಪ್‌ ಬಳಿಕ ಹಿರಿಯರ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ರವಿ ಶಾಸ್ತ್ರಿಯ ಅವಧಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಅವರ ಸ್ಥಾನಕ್ಕೆ ಡ್ರಾವಿಡ್‌ ನೇಮಕಗೊಳ್ಳುವ ಸಾಧ್ಯತೆ ಇದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಶಿಖರ್ ಧವನ್‌ ನೇತೃತ್ವದ ಭಾರತ ಸೀಮಿತ ಓವರ್‌ಗಳ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ ರಾಹುಲ್‌ ದ್ರಾವಿಡ್‌ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ರಾಹುಲ್ ದ್ರಾವಿಡ್‌ ಮಾರ್ಗದರ್ಶನದ ಅನನುಭವಿ ತಂಡವು ಏಕದಿನ ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು. ಇನ್ನು 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಅನಾಯಾಸವಾಗಿ ಜಯಿಸಿತ್ತು. ಆದರೆ ಮಧ್ಯದಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಕೋವಿಡ್ 19 ದೃಢಪಟ್ಟ ಹಿನ್ನೆಲೆಯಲ್ಲಿ ಕೆಲ ಆಟಗಾರರು ಹೊರಗುಳಿಯಬೇಕಾಯಿತು. ಪರಿಣಾಮ ಟೀಂ ಇಂಡಿಯಾ 1-2 ಅಂತರದಲ್ಲಿ ಟಿ20 ಸರಣಿಯನ್ನು ಕೈಚೆಲ್ಲಿತ್ತು.

ನಮ್ಮಲ್ಲಿ ಒಬ್ಬನನ್ನು ಕೆಣಕಿದರೆ ಇಡೀ ತಂಡವೇ ತಿರುಗಿಬೀಳುತ್ತೆ: ಕೆ.ಎಲ್ ರಾಹುಲ್‌ ಎಚ್ಚರಿಕೆ

ರವಿಶಾಸ್ತ್ರಿ ಬಳಿಕ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್‌ ಆಗಿ ಆಯ್ಕೆಯಾಗಲಿ ಎಂದು ಹಲವು ಕ್ರಿಕೆಟ್ ಪಂಡಿತರು ಹಾಗೂ ಅಭಿಮಾನಿಗಳು ಆಗ್ರಹಿಸಿದ್ದಾರೆ. ಹೀಗಾಗಿ ದ್ರಾವಿಡ್‌ ಎನ್‌ಸಿಎ ಮುಖ್ಯಸ್ಥರಾಗಿ ಮುಂದುವರೆಯುತ್ತಾರೋ ಅಥವಾ ಟೀಂ ಇಂಡಿಯಾ ಹೆಡ್‌ ಕೋಚ್ ಆಗಿ ಕಾಣಿಸಿಕೊಳ್ಳುತ್ತಾರೋ ಎನ್ನುವ ಕುತೂಹಲಕ್ಕೆ ಕಾಲವೇ ಉತ್ತರಿಸಬೇಕಾಗಿದೆ.