ನವದೆಹಲಿ(ನ.15): ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌, ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್‌ ಸೇರ್ಪಡೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 

‘75ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕ್ರಿಕೆಟ್‌ ಆಡಲಾಗುತ್ತಿದೆ. ಟಿ20 ಕ್ರಿಕೆಟ್‌ ಎಲ್ಲೆಡೆ ಜನಪ್ರಿಯಗೊಂಡಿದೆ. ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಟಿ20 ಮಾದರಿ ಸೇರ್ಪಡೆಗೊಂಡರೆ ಕ್ರಿಕೆಟ್‌ ಆಟಕ್ಕೆ ಮತ್ತಷ್ಟು ಜನಪ್ರಿಯತೆ ಸಿಗಲಿದೆ’ ಎಂದು ದ್ರಾವಿಡ್‌ ಪ್ರತಿಷ್ಠಿತ ವೆಬ್‌ಸೈಟ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಟಿ20 ಕ್ರಿಕೆಟ್ ಆಯೋಜಿಸುವುದು ದೊಡ್ಡ ಸವಾಲು ಎನ್ನುವುದು ಗೊತ್ತಿದೆ. ಆದರೆ ಇತ್ತೀಚೆಗಷ್ಟೇ ಐಪಿಎಲ್ ಯಶಸ್ವಿಯಾಗಿದ್ದನ್ನು ನಾವೆಲ್ಲ ನೋಡಿದ್ದೇವೆ. ಒಳ್ಳೆಯ ಗುಣಮಟ್ಟದ ಪಿಚ್ ನಿರ್ಮಿಸಿದರೆ ಒಲಿಂಪಿಕ್ಸ್‌ನಲ್ಲೂ ಸ್ಫರ್ಧಾತ್ಮಕ ಟಿ20 ಕ್ರಿಕೆಟ್‌ನ್ನು ನಿರ್ಮಿಸಬಹುದು ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ಯುಎಇನಲ್ಲಿ ಪ್ರೇಕ್ಷಕರಿಲ್ಲದೇ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಭರ್ಜರಿಯಾಗಿಯೇ ಯಶಸ್ಸು ಕಂಡಿತ್ತು.

IPL 2021: ನಾವು ಆತನನ್ನು ಬಿಟ್ಟುಕೊಡಲ್ಲ; ವಾರ್ನರ್‌ ಹೀಗಂದಿದ್ದು ಯಾರ ಬಗ್ಗೆ..?

2018ರಲ್ಲಿ ಐಸಿಸಿ ಪ್ರಕಟಿಸಿದ್ದ ಸಮೀಕ್ಷೆಯ ವರದಿ ಪ್ರಕಾರ, ಶೇ.87ರಷ್ಟು ಅಭಿಮಾನಿಗಳು ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಇರಬೇಕು ಎಂದು ಅಭಿಪ್ರಾಯಿಸಿದ್ದರು. 

ಈ ಹಿಂದೆ ಬಿಸಿಸಿಐ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಟೀಂ ಇಂಡಿಯಾ ಕಳಿಸಿಕೊಡಲು ಒಪ್ಪಿಗೆ ಸೂಚಿಸಿರಲಿಲ್ಲ. 2010 ಹಾಗೂ 2014ರ ಏಷ್ಯನ್‌ ಗೇಮ್ಸ್‌ನಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿತ್ತು. ಆದರೆ ಬಿಸಿಸಿಐ ಭಾರತ ತಂಡವನ್ನು ಈ ಕ್ರೀಡಾಕೂಟಕ್ಕೆ ಕಳಿಸಿಕೊಟ್ಟಿರಲಿಲ್ಲ.