ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಫೆಬ್ರವರಿ 09ರಿಂದ ಆರಂಭಟೀಂ ಇಂಡಿಯಾ ಪರ ರೋಹಿತ್ ಶರ್ಮಾ-ಶುಭ್‌ಮನ್ ಗಿಲ್ ಇನಿಂಗ್ಸ್ ಆರಂಭಿಸಲಿಗಿಲ್ ಪರ ಬ್ಯಾಟ್ ಬೀಸಿದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್

ನವದೆಹಲಿ(ಫೆ.06): ಬಹುನಿರೀಕ್ಷಿತ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಇದೇ ಫೆಬ್ರವರಿ 09ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ 23 ವರ್ಷದ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್‌, ಆರಂಭಿಕನಾಗಿ ಕಣಕ್ಕಿಳಿಯಲಿ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 

ಶುಭ್‌ಮನ್ ಗಿಲ್ ಸದ್ಯ ಕ್ರಿಕೆಟ್ ವೃತ್ತಿಜೀವನದ ಉತ್ತುಂಗದ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಕೆ ಎಲ್ ರಾಹುಲ್ ಬದಲು ಶುಭ್‌ಮನ್ ಗಿಲ್ ಅವರೇ ರೋಹಿತ್ ಶರ್ಮಾ ಜತೆ ಇನಿಂಗ್ಸ್ ಆರಂಭಿಸುವುದು ಒಳ್ಳೆಯದ್ದು ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಫೆಬ್ರವರಿ 09ರಂದು ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.

ಈ ಕುರಿತಂತೆ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಹರ್ಭಜನ್ ಸಿಂಗ್, ಆರಂಭಿಕ ಜತೆಯಾಟವು ಯಾವುದೇ ಸರಣಿಯ ಹಣೆಬರಹವನ್ನು ನಿರ್ಧರಿಸುತ್ತದೆ. ಹೀಗಾಗಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಜತೆ ಶುಭ್‌ಮನ್ ಗಿಲ್ ಇನಿಂಗ್ಸ್ ಆರಂಭಿಸಲಿ ಎಂದು ಹರ್ಭಜನ್ ಸಿಂಗ್ ಸಲಹೆ ನೀಡಿದ್ದಾರೆ.

"ಆರಂಭಿಕ ಜತೆಯಾಟವು ತುಂಬ ಮಹತ್ವದ ವಿಚಾರ. ಆರಂಭಿಕರು ಸರಣಿಯ ಹಣೆಬರಹವನ್ನು ನಿರ್ಧರಿಸುತ್ತಾರೆ. ನನ್ನ ಪ್ರಕಾರ ಹೇಳುವುದಾದರೇ, ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ರೋಹಿತ್ ಶರ್ಮಾ ಜತೆ ಶುಭ್‌ಮನ್ ಗಿಲ್ ಇನಿಂಗ್ಸ್ ಆರಂಭಿಸುವುದು ಒಳ್ಳೆಯದು" ಎಂದು ಭಜ್ಜಿ ಹೇಳಿದ್ದಾರೆ.

Border Gavaskar Trophy ಆಸೀಸ್‌ ಸ್ಪಿನ್‌ ಚಾಲೆಂಜ್‌ಗೆ ಭಾರತ ಭರ್ಜರಿ ತಯಾರಿ..!

"ಸದ್ಯ ಶುಭ್‌ಮನ್ ಗಿಲ್‌, ಬೇರೆಯದ್ದೇ ಹಂತದ ಫಾರ್ಮ್‌ನಲ್ಲಿದ್ದಾರೆ. ಕೆ ಎಲ್ ರಾಹುಲ್ ಅತ್ಯುತ್ತಮ ಆಟಗಾರನಾಗಿರಬಹುದು. ಆದರೆ ಕಳೆದ ವರ್ಷದಲ್ಲಿ ಮೂರು ಮಾದರಿಯ ಕ್ರಿಕೆಟ್ ಅಂಕಿ-ಅಂಶ ಗಮನಿಸಿದರೇ ಅಷ್ಟೇನೂ ಉತ್ತಮವಾಗಿಲ್ಲ. ಇನ್ನು ಇದೇ ವೇಳೆ ಶುಭ್‌ಮನ್ ಗಿಲ್ ಅತ್ಯುತ್ತಮ ಲಯದಲ್ಲಿದ್ದು, ಕಳೆದ ಕೆಲ ತಿಂಗಳಿನಲ್ಲಿ ಹಲವು ದಾಖಲೆಗಳನ್ನು ಧೂಳೀಪಟ ಮಾಡಿದ್ದಾರೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಒಂದು ವೇಳೆ ಭಾರತ ತಂಡವು ಆಸ್ಟ್ರೇಲಿಯಾ ಎದುರು ಟೆಸ್ಟ್ ಸರಣಿಯನ್ನು ಗೆಲ್ಲಬೇಕೆಂದಿದ್ದರೇ, ರೋಹಿತ್ ಶರ್ಮಾ ಜತೆ ಶುಭ್‌ಮನ್ ಗಿಲ್ ಇನಿಂಗ್ಸ್‌ ಆರಂಭಿಸಬೇಕು. ಯಾಕೆಂದರೆ, ಶುಭ್‌ಮನ್ ಗಿಲ್‌, ಆಸೀಸ್ ಎದುರಿನ ಸಂಪೂರ್ಣ ಸರಣಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಯೋಗ್ಯರಾಗಿದ್ದಾರೆ ಎಂದು ಭಜ್ಜಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ: 

ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್‌ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್‌ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್

ಆಸೀಸ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಹೀಗಿದೆ: 

ರೋಹಿತ್‌ ಶರ್ಮಾ, ಕೆ ಎಲ್ ರಾಹುಲ್‌, ಶುಭ್‌ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್‌, ಇಶಾನ್ ಕಿಶನ್‌, ರವಿಚಂದ್ರನ್‌ ಅಶ್ವಿನ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌, ಉಮೇಶ್‌ ಯಾದವ್, ಜಯದೇವ್ ಉನಾದ್ಕತ್‌.