ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿ ಫೆಬ್ರವರಿ 09ರಿಂದ ಆರಂಭಮೊದಲ ಟೆಸ್ಟ್ ಪಂದ್ಯಕ್ಕೆ ನಾಗ್ಪುರ ಆತಿಥ್ಯಆಸ್ಟ್ರೇಲಿಯಾ 18 ಸದಸ್ಯರ ತಂಡದಲ್ಲಿ 4 ಸ್ಪಿನ್ನರ್‌ಗಳಿಗೆ ಸ್ಥಾನ

ನಾಗ್ಪುರ(ಫೆ.06): ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ ಮಹತ್ವದ 4 ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ ಸ್ಪಿನ್‌ ಸಹಕಾರಿ ಪಿಚ್‌ ಬಗ್ಗೆ ಚರ್ಚೆಗಳು ಜಾಸ್ತಿಯಾಗಿದ್ದು, ಉಭಯ ತಂಡಗಳೂ ಸ್ಪಿನ್‌ ಅಸ್ತ್ರ ಬಳಸಲು ಭರ್ಜರಿ ತಯಾರಿ ಆರಂಭಿಸಿವೆ. ಈ ನಡುವೆ ಭಾರತ ತವರಿನ ಸ್ಪಿನ್‌ ಲಾಭವೆತ್ತಲು ಭಾರೀ ಸಿದ್ಧತೆ ನಡೆಸುತ್ತಿದ್ದು, ಒಟ್ಟು 6 ಸ್ಪಿನ್ನರ್‌ಗಳನ್ನು ನೆಟ್‌ ಬೌಲರ್‌ಗಳಾಗಿ ನೇಮಕ ಮಾಡಿಕೊಂಡಿದೆ.

ದಿನಗಳ ಹಿಂದಷ್ಟೇ ತಾರಾ ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್‌, ರಾಹುಲ್‌ ಚಹರ್‌, ಸಾಯಿ ಕಿಶೋರ್‌ ಹಾಗೂ ಸೌರಭ್‌ ಕುಮಾರ್‌ರನ್ನು ಬಿಸಿಸಿಐ ಆಯ್ಕೆ ಸಮಿತಿ ಟೆಸ್ಟ್‌ ಸರಣಿಗಾಗಿ ನೆಟ್‌ ಬೌಲರ್‌ಗಳನ್ನಾಗಿ ನೇಮಿಸಿತ್ತು. ಭಾನುವಾರ ಮತ್ತಿಬ್ಬರು ಸ್ಪಿನ್ನರ್‌ಗಳಾದ ಜಯಂತ್‌ ಯಾದವ್‌ ಹಾಗೂ ಪುಲ್ಕಿತ್‌ ನಾರಂಗ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ತಂಡದಲ್ಲಿ ಈಗಾಗಲೇ ಆರ್‌.ಅಶ್ವಿನ್‌, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌ ಹಾಗೂ ಕುಲ್‌ದೀಪ್‌ ಯಾದವ್‌ ಇದ್ದಾರೆ.

ಇದೇ ವೇಳೆ ಆಸ್ಪ್ರೇಲಿಯಾ ಕೂಡಾ ಭಾರತದ ಪಿಚ್‌ನಲ್ಲಿ ಪ್ರಮುಖವಾಗಿ ಸ್ಪಿನ್ನ ಅಸ್ತ್ರ ಬಳಸಲು ಸಜ್ಜಾಗಿದೆ. 18 ಸದಸ್ಯರ ತಂಡದಲ್ಲಿ 4 ಸ್ಪಿನ್ನರ್‌ಗಳಿದ್ದು, ಯಾವುದೇ ಅಂತಾರಾಷ್ಟ್ರೀಯ ಪಂದ್ಯವಾಡದ ಟಾಡ್‌ ಮುರ್ಫಿ ಸೇರಿದಂತೆ ನಾಲ್ವರು ಸ್ಪಿನ್ನರ್‌ಗಳಿಗೆ ಸ್ಥಾನ ನೀಡಲಾಗಿದೆ. ಜೊತೆಗೆ ಆರ್‌.ಅಶ್ವಿನ್‌ ಅವರಂತೆಯೇ ಬೌಲ್‌ ಮಾಡುವ ಮಹೀಶ್‌ ಪಿಥಿಯಾ ಎಂಬವರನ್ನು ಕರೆತಂದು ಸ್ಪಿನ್‌ ಅಭ್ಯಾಸ ನಡೆಸುತ್ತಿದೆ. ಸದ್ಯ ಆಟಗಾರರು ಬೆಂಗಳೂರಿನಲ್ಲಿ ಅಭ್ಯಾಸ ನಿರತರಾಗಿದ್ದಾರೆ.

Scroll to load tweet…

ಮೊದಲೆರಡು ಟೆಸ್ಟ್‌ಗಳಿಗೆ ಹೇಜಲ್‌ವುಡ್‌ ಅಲಭ್ಯ?

ನವದೆಹಲಿ: ಗಾಯದಿಂದ ಇನ್ನಷ್ಟೇ ಚೇತರಿಸಿಕೊಳ್ಳುತ್ತಿರುವ ಆಸ್ಪ್ರೇಲಿಯಾದ ಪ್ರಮುಖ ವೇಗಿ ಜೋಶ್‌ ಹೇಜಲ್‌ವುಡ್‌ ಭಾರತ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯಕ್ಕೆ ಗೈರಾಗಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ 2ನೇ ಟೆಸ್ಟ್‌ನಲ್ಲೂ ಆಡುವುದು ಅನುಮಾನ ಎಂದು ವರದಿಯಾಗಿದೆ. 

Border Gavaskar Trophy: ಸ್ಪಿನ್‌ ಅಸ್ತ್ರಕ್ಕೆ ನಾವೂ ಸಿದ್ದ..! ಆಸೀಸ್ ಮೈಂಡ್‌ ಗೇಮ್‌ ಆರಂಭ

ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ 32 ವರ್ಷದ ಹೇಜಲ್‌ವುಡ್‌ ಎಡಗಾಲಿಗೆ ಗಾಯವಾಗಿತ್ತು. ಇದರಿಂದ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಕೆಲ ದಿನಗಳ ವಿಶ್ರಾಂತಿ ಕೂಡಾ ಅಗತ್ಯವಿರುವ ಕಾರಣ ಆರಂಭಿಕ ಟೆಸ್ಟ್‌ಗಳಿಗೆ ಅಲಭ್ಯರಾಗಬಹುದು. ಗಾಯಾಳು ಮಿಚೆಲ್‌ ಸ್ಟಾರ್ಕ್ ಕೂಡಾ ಮೊದಲ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ:

ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್‌ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್‌ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್

ಆಸೀಸ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಹೀಗಿದೆ: 

ರೋಹಿತ್‌ ಶರ್ಮಾ, ಕೆ ಎಲ್ ರಾಹುಲ್‌, ಶುಭ್‌ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್‌, ಇಶಾನ್ ಕಿಶನ್‌, ರವಿಚಂದ್ರನ್‌ ಅಶ್ವಿನ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌, ಉಮೇಶ್‌ ಯಾದವ್, ಜಯದೇವ್ ಉನಾದ್ಕತ್‌.

ಭಾರತ ಸರಣಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:

ಪ್ಯಾಟ್ ಕಮಿನ್ಸ್‌(ನಾಯಕ), ಆಸ್ಟನ್ ಅಗರ್, ಸ್ಕಾಟ್ ಬೋಲೆಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಜೋಶ್ ಹೇಜಲ್‌ವುಡ್‌, ಪೀಟರ್‌ ಹ್ಯಾಂಡ್ಸ್‌ಕಂಬ್, ಟ್ರಾವಿಸ್ ಹೆಡ್‌, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ನೇಥನ್ ಲಯನ್, ಲಾನ್ಸ್ ಮೋರಿಸ್, ಟೋಡ್ ಮುರ್ಫೆ, ಮ್ಯಾಥ್ಯೂ ರೆನ್‌ಶೋ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್‌, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.