ಇಸ್ಲಾಂಗೆ ಮತಾಂತರಕ್ಕೆ ಅಫ್ರಿದಿ ಒತ್ತಡ: ಕನೇರಿಯಾ ಗಂಭೀರ ಆರೋಪ
* ಪಾಕಿಸ್ತಾನ ಮಾಜಿ ನಾಯಕ ಅಫ್ರಿದಿ ಮೇಲೆ ಕನೇರಿಯಾ ಗಂಭೀರ ಆರೋಪ
* ಕನೇರಿಯಾ ಹಣ ಮತ್ತು ಪ್ರಚಾರಕ್ಕೆ ಮಾತನಾಡುತ್ತಿದ್ದಾರೆ ಎಂದಿದ್ದ ಅಫ್ರಿದಿ
* ಭಾರತ ನಮ್ಮ ಶತ್ರು ರಾಷ್ಟ್ರವಲ್ಲ. ಹಾಗೆ ಪರಿಗಣಿಸಿದರೆ ನೀವು ಭಾರತೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಬೇಡಿ ಎಂದ ಕನೇರಿಯಾ
ಇಸ್ಲಾಮಾಬಾದ್(ಮೇ.10): ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ (Danish Kaneria) ತಮ್ಮ ಸಹ ಆಟಗಾರ ಶಾಹಿದ್ ಅಫ್ರಿದಿ (Shahid Afridi) ವಿರುದ್ಧ ಮತ್ತೊಮ್ಮೆ ಮತಾಂತರ ಯತ್ನ ಆರೋಪ ಮಾಡಿದ್ದಾರೆ. ಕಳೆದ ವಾರ ಕನೇರಿಯಾ, ‘ಅಫ್ರಿದಿ ನನ್ನನ್ನು ಇಸ್ಲಾಂಗೆ ಮತಾಂತರಗೊಳ್ಳಲು ಒತ್ತಾಯಿಸಿದ್ದರು. ಆದರೆ ನಾನು ನನ್ನ ಧರ್ಮವನ್ನೇ ನಂಬಿದ್ದೆ’ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಫ್ರಿದಿ, ಕನೇರಿಯಾ ಹಣ ಮತ್ತು ಪ್ರಚಾರಕ್ಕೆ ಈ ರೀತಿ ಹೇಳುತ್ತಿದ್ದಾರೆ. ಶತ್ರು ದೇಶಕ್ಕೆ ಧಾರ್ಮಿಕ ಭಾವನೆ ಕೆರಳಿಸುವ ಹೇಳಿಕೆ ನೀಡುತ್ತಿದ್ದಾರೆ’ ಎಂದಿದ್ದರು.
ಸೋಮವಾರ ಮತ್ತೆ ಟ್ವೀಟ್ ಮಾಡಿದ ದಾನೀಶ್ ಕನೇರಿಯಾ, ‘ಒತ್ತಾಯದ ಮತಾಂತರದ ವಿರುದ್ಧ ಧ್ವನಿ ಎತ್ತಿದಾಗ ನನ್ನ ಕ್ರಿಕೆಟ್ ಬದುಕು ಅಂತ್ಯಗೊಳಿಸುವ ಬೆದರಿಕೆ ಹಾಕಲಾಗಿತ್ತು. ಭಾರತ ನಮ್ಮ ಶತ್ರು ರಾಷ್ಟ್ರವಲ್ಲ. ಹಾಗೆ ಪರಿಗಣಿಸಿದರೆ ನೀವು ಭಾರತೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಬೇಡಿ’ ಎಂದು ಅಫ್ರಿದಿಯನ್ನು ಕುಟುಕಿದ್ದಾರೆ.
ಭಾರತವು ನಮ್ಮ ಶತ್ರು ರಾಷ್ಟ್ರವಲ್ಲ. ನಮ್ಮ ನಿಜವಾದ ಶತ್ರುಗಳೆಂದರೆ, ಧರ್ಮದ ಹೆಸರಿನಲ್ಲಿ ಜನರಿಗೆ ಪ್ರಚೋದನೆ ಮಾಡುವವರು ನಿಜವಾದ ಶತ್ರುಗಳು. ಹಾಗೊಂದು ವೇಳೆ ನೀವು ಭಾರತವನ್ನು ಶತ್ರು ರಾಷ್ಟ್ರ ಎಂದು ಕರೆಯುವುದಾದರೇ, ನೀವು ಯಾವತ್ತೂ ಭಾರತೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಹೋಗಬೇಡಿ ಎಂದು ಶಾಹಿದ್ ಅಫ್ರಿದಿಗೆ ಸವಾಲೆಸೆದಿದ್ದಾರೆ. ನಾನು ಒತ್ತಾಯದ ಮತಾಂತರದ ಬಗ್ಗೆ ದ್ವನಿ ಎತ್ತಿದಾಗ, ನನ್ನ ವೃತ್ತಿಜೀವನವನ್ನೇ ನಾಶ ಪಡೆಸುವುದಾಗಿ ಬೆದರಿಕೆಯೊಡ್ಡಲಾಗಿತ್ತು ಎಂದು ದಾನಿಶ್ ಕನೇರಿಯಾ ಟ್ವೀಟ್ ಮಾಡಿದ್ದಾರೆ.
ಈ ಮೊದಲು ದಾನಿಶ್ ಕನೇರಿಯಾ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದ ಶಾಹಿದ್ ಅಫ್ರಿದಿ, ಅವರಿಗೆ ಈ ರೀತಿಯ ತೊಂದರೆಯಾಗಿದ್ದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (Pakistan Cricket Board) ದೂರ ನೀಡಬೇಕು, ಅದನ್ನು ಬಿಟ್ಟು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದಲ್ಲ ಎಂದು ಪಾಕಿಸ್ತಾನದ ಮಾಜಿ ನಾಯಕ ಅಫ್ರಿದಿ ಹೇಳಿದ್ದಾರೆ.
ನನ್ನ ವರ್ತನೆ ತಪ್ಪಾಗಿದ್ದರೆ, ನೀವ್ಯಾಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ದೂರು ನೀಡಲಿಲ್ಲ. ಅವರು ನಮ್ಮ ಶತ್ರು ರಾಷ್ಟ್ರದಲ್ಲಿ ಧಾರ್ಮಿಕ ಭಾವನೆಗಳನ್ನು ಇಟ್ಟುಕೊಂಡು ಸಂದರ್ಶನ ನೀಡುತ್ತಿದ್ದಾರೆ. ನಮ್ಮ ಮೇಲೆ ಇಷ್ಟೆಲ್ಲ ಆರೋಪ ಮಾಡುವ ಇವರು ತಮ್ಮದೇ ಚಾರಿತ್ರ್ಯವನ್ನು ನೋಡಿಕೊಳ್ಳಲಿ ಎಂದು ಕನೇರಿಯಾ ಅವರಿಗೆ ಅಫ್ರಿದಿ ತಿರುಗೇಟು ನೀಡಿದ್ದಾರೆ. ಇದಕ್ಕೂ ಮೊದಲಿನ ಸಂದರ್ಶನವೊಂದರಲ್ಲಿ ಶಾಹಿದಿ ಅಫ್ರಿದಿ, ದಾನಿಶ್ ಕನೇರಿಯಾ ತನ್ನ ಸಹೋದರನಿದ್ದಂತೆ ಎಂದು ಹೇಳಿದ್ದರು.
ಶಾಹಿದ್ ಅಫ್ರಿದಿ ಚಾರಿತ್ರ್ಯಹೀನ ವ್ಯಕ್ತಿ, ಆತ ನನ್ನ ಮೇಲೆ ಪಿತೂರಿ ಮಾಡಿದ್ದ ಎಂದ ಪಾಕ್ ಮಾಜಿ ಕ್ರಿಕೆಟಿಗ.!
ಪಾಕಿಸ್ತಾನ ಕ್ರಿಕೆಟ್ ತಂಡದ ಪರ ದಾನಿಶ್ ಕನೇರಿಯಾ 61 ಟೆಸ್ಟ್ ಪಂದ್ಯಗಳನ್ನಾಡಿ 261 ವಿಕೆಟ್ ಕಬಳಿಸಿದ್ದರು. ಈ ಮೊದಲು IANS ಸುದ್ದಿಸಂಸ್ಥೆಯ ಜತೆಗೆ ಮಾತನಾಡಿದ್ದ ದಾನೀಶ್ ಕನೇರಿಯಾ, ಶಾಹಿದ್ ಅಫ್ರಿದಿ ಓರ್ವ ದೊಡ್ಡ ಸುಳ್ಳುಗಾರ. ನಾನು ಹಿಂದೂವಾಗಿದ್ದೆ ಎನ್ನುವ ಒಂದೇ ಕಾರಣಕ್ಕೆ ಪಾಕಿಸ್ತಾನ ತಂಡದಲ್ಲಿ ಆತ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಆರೋಪ ಮಾಡಿದ್ದರು.
ದಾನೇಶ್ ಕನೇರಿಯಾ, ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪದಡಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಸಸ್ಪೆಂಡ್ ಆಗಿದ್ದರು. ನನ್ನ ಮೇಲೆ ಕೆಲವೊಂದು ಸುಳ್ಳು ಆರೋಪಗಳನ್ನು ಮಾಡಲಾಗಿತ್ತು. ಸ್ಪಾಟ್ ಫಿಕ್ಸಿಂಗ್ (Spot-Fixing) ಮಾಡಿದ ವ್ಯಕ್ತಿಯ ಜತೆ ನನ್ನ ಹೆಸರನ್ನು ತಳುಕು ಹಾಕಲಾಗಿತ್ತು. ಆತ ಶಾಹಿದ್ ಅಫ್ರಿದಿ ಹಾಗೂ ಇತರ ಆಟಗಾರರ ಸ್ನೇಹಿತನಾಗಿದ್ದ. ಆದರೆ ನನ್ನನ್ನೇ ಏಕೆ ಗುರಿ ಮಾಡಲಾಯಿತು ಎನ್ನುವುದು ಗೊತ್ತಿಲ್ಲ. ನನ್ನ ಮೇಲಿರುವ ಬ್ಯಾನ್ ಶಿಕ್ಷೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತೆರವು ಮಾಡಲಿ ಎಂದು ನಾನು ಕೇಳಿಕೊಳ್ಳಿತ್ತೇನೆಂದು ಕನೇರಿಯಾ ಹೇಳಿದ್ದರು.