ಕಿಂಗ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಇಂದಿಗೆ 11 ವರ್ಷ ಭರ್ತಿ2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ರೆಡ್ ಬಾಲ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕೊಹ್ಲಿಟೆಸ್ಟ್ ನಾಯಕನಾಗಿಯೂ ಯಶಸ್ವಿಯಾಗಿದ್ದ ಕಿಂಗ್ ಕೊಹ್ಲಿ
ಬೆಂಗಳೂರು(ಜೂ.20): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ 11 ವರ್ಷ ತುಂಬಿವೆ. ವಿರಾಟ್ ಕೊಹ್ಲಿ, ಜಮೈಕಾದ ಕಿಂಗ್ಸ್‌ಟನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಪಾದಾರ್ಪಣೆ ಪಂದ್ಯದಲ್ಲಿ ಕ್ರಮವಾಗಿ 4 ಹಾಗೂ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇದಾಗಿ 11 ವರ್ಷಗಳ ಬಳಿಕ ಹಿಂತಿರುಗಿ ನೋಡಿದರೇ ವಿರಾಟ್ ರನ್‌ಗಳ ರಾಶಿಯನ್ನೇ ಗುಡ್ಡೆ ಹಾಕಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿಯುವ ವಿರಾಟ್ ಕೊಹ್ಲಿ, ಮಧ್ಯಮ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್ ಆಧಾರಸ್ತಂಭ ಎನಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿಯೂ ಸೈ ಎನಿಸಿಕೊಂಡಿದ್ದರು. ಟೆಸ್ಟ್ ಕ್ರಿಕೆಟ್ (Test Cricket) ವೃತ್ತಿಜೀವನದಲ್ಲಿ 11 ವರ್ಷಗಳನ್ನು ಪೂರೈಸುತ್ತಿದ್ದಂತೆಯೇ ವಿರಾಟ್ ಕೊಹ್ಲಿ, ಸಾಮಾಜಿಕ ಜಾಲತಾಣವಾದ 'ಕೂ' ಮೂಲಕ ವಿಡಿಯೋ ಮಾಂಟೇಜ್ ಹಂಚಿಕೊಂಡಿದ್ದು, 11 ವರ್ಷಗಳ ಸುಂದರ ಟೆಸ್ಟ್ ಬದುಕಿನ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಇದಕ್ಕೆ 'ಟೈಮ್ ಪ್ಲೈಸ್' ಎಂದು ಹೆಸರಿಟ್ಟಿದ್ದಾರೆ.
33 ವರ್ಷದ ವಿರಾಟ್ ಕೊಹ್ಲಿ, ಭಾರತ ತಂಡದ ಪರ ಇದುವರೆಗೂ 101 ಟೆಸ್ಟ್ ಪಂದ್ಯಗಳನ್ನಾಡಿ 49.95ರ ಬ್ಯಾಟಿಂಗ್ ಸರಾಸರಿಯಲ್ಲಿ 8,043 ರನ್ ಬಾರಿಸಿದ್ದಾರೆ. 254 ರನ್ ಟೆಸ್ಟ್ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಗರಿಷ್ಟ ವೈಯುಕ್ತಿಕ ಸ್ಕೋರ್ ಎನಿಸಿದೆ. ಇನ್ನು ವಿರಾಟ್ ಕೊಹ್ಲಿಯವರ ಬ್ಯಾಟಿಂಗ್ 2019ರಿಂದೀಚೆಗೆ ಕೊಂಚ ಮಂಕಾದಂತೆ ಕಂಡು ಬರುತ್ತಿದ್ದು, 2019ರ ನವೆಂಬರ್‌ನಿಂದೀಚೆಗೆ ಮೂರಂಕಿ ಮೊತ್ತ ದಾಖಲಿಸಲು ಕಿಂಗ್ ಕೊಹ್ಲಿಗೆ ಸಾಧ್ಯವಾಗುತ್ತಿಲ್ಲ. 2019ರಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ದದ ಪಿಂಕ್ ಬಾಲ್ ಟೆಸ್ಟ್ (Pink Ball Test) ಪಂದ್ಯದ ವೇಳೆ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಶತಕ ಬಾರಿಸಿದ್ದರು.
6 ತಿಂಗಳಲ್ಲಿ ಟೀಂ ಇಂಡಿಯಾಗೆ 5 ನಾಯಕರು!
ಇನ್ನು ವಿರಾಟ್ ಕೊಹ್ಲಿ, ಈ ವರ್ಷಾರಂಭದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ (Team India)) 1-2 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಸೋತಿತ್ತು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದಲೂ ಕೆಳಗಿಳಿದಿದ್ದರು. ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಭಾರತ ಪರ 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ 40 ಪಂದ್ಯಗಳಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಇನ್ನು ಒಟ್ಟಾರೆ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಟ್ಟ ನಾಯಕರ ಪೈಕಿ ಗ್ರೇಮ್ ಸ್ಮಿತ್, ಅಲನ್ ಬಾರ್ಡರ್, ಸ್ಟಿಫನ್ ಫ್ಲೆಮಿಂಗ್, ರಿಕಿ ಪಾಂಟಿಂಗ್, ಹಾಗೂ ಕ್ಲೈವ್ ಲಾಯ್ಡ್ ಬಳಿಕ ವಿರಾಟ್ ಕೊಹ್ಲಿ ಆರನೇ ಸ್ಥಾನದಲ್ಲಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಮುಂಬರುವ ಜುಲೈ 01ರಿಂದ ಇಂಗ್ಲೆಂಡ್ ಎದುರು ಆರಂಭವಾಗಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-1 ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವು ಐದು ಪಂದ್ಯಗಳ ಸರಣಿಯ ಭಾಗವಾಗಿದೆ, ಇದು ಕಳೆದ ವರ್ಷ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದ್ದರಿಂದ ಭಾರತ ತಂಡ ಕೊನೆಯ ಟೆಸ್ಟ್ ಪಂದ್ಯವಾಡದೇ ವಾಪಸಾಗಿತ್ತು. ಆ ಸರಣಿಯಲ್ಲಿ ವಿರಾಟ್ ಕೊಹ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು.
