ಪಂಜಾಬ್ ಕಿಂಗ್ಸ್ ತಂಡದ ಕ್ರಿಕೆಟಿಗ ಶಶಾಂಕ್ ಸಿಂಗ್ ಮತ್ತು ಅವರ ತಂದೆ, ಐಪಿಎಸ್ ಅಧಿಕಾರಿ ಶೈಲೇಶ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಡುಗೆಯ ವಿಚಾರವಾಗಿ ತಮ್ಮ ಮನೆಯ ಕುಕ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಅವರ ಮೇಲಿದೆ. ಈ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಂಡೀಗಢ: ಭಾರತದ ಪ್ರತಿಭಾನ್ವಿತ ಯುವ ಕ್ರಿಕೆಟಿಗ ಹಾಗೂ ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಆಲ್ರೌಂಡರ್ ಶಶಾಂಕ್ ಸಿಂಗ್ ಹಾಗೂ ಅವರ ತಂದೆ ಐಪಿಎಸ್ ಅಧಿಕಾರಿ ಶೈಲೇಶ್ ಸಿಂಗ್ ವಿರುದ್ದ ಎಫ್‌ಐಆರ್ ದಾಖಲಾಗಿದೆ. ಶಶಾಂಕ್ ಸಿಂಗ್ ಹಾಗೂ ಅವರ ತಂದೆ ಶೈಲೇಶ್ ಸಿಂಗ್ ಇಬ್ಬರೂ ಸೇರಿ ಮನೆಯ ಅಡುಗೆ ಮಾಡುವ ಕುಕ್ ವಿಪೇಂದ್ರ ಸಿಂಗ್ ತೋಮರ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಇದರ ಬೆನ್ನಲ್ಲೇ ಎಫ್‌ಐಆರ್ ದಾಖಲಾಗಿದೆ.
ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಮನೆಯ ಕುಕ್ ವಿಪೇಂದ್ರ ಸಿಂಗ್ ಮಾಡುತ್ತಿದ್ದ ಅಡುಗೆಯ ಬಗ್ಗೆ ಶಶಾಂಕ್ ಸಿಂಗ್ ಕುಟುಂಬಸ್ಥರು ತೀವ್ರ ಅಸಮಾಧಾನ ಹೊಂದಿದ್ದರು. ಇದಾದ ನಂತರ ಕುಕ್ ಹಾಗೂ ಶಶಾಂಕ್ ಸಿಂಗ್ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಕ್ರಿಕೆಟಿಗನ ಕುಟುಂಬದವರು, ಕುಕ್ ಮೇಲೆ ಅಸಭ್ಯವಾಗಿ ನಿಂದಿಸಿದ್ದು ಮಾತ್ರವಲ್ಲದೇ, ಹಲ್ಲೆ ನಡೆಸಿದ್ದಾರೆ. ಇದಷ್ಟೇ ಅಲ್ಲದೇ ಕುಕ್ ವಿಪೇಂದ್ರ ಅವರ ಮೊಬೈಲ್ ಕಸಿದುಕೊಂಡು, ಮತ್ತೆ ಬೇರೆ ಅಡುಗೆ ಮಾಡುವಂತೆ ಬಲವಂತ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇದಾದ ಬಳಿಕ ವಿಪೇಂದ್ರ ಸಿಂಗ್ ಜೀವಭಯದಿಂದ ಒಂದು ಕೋಣೆಯೊಳಗೆ ಹೋಗಿ ಬೀಗ ಹಾಕಿಕೊಂಡಿದ್ದಾನೆ ಎಂದು ವರದಿಯಾಗಿದೆ. ಆದರೆ ಶಶಾಂಕ್ ಸಿಂಗ್ ಕುಟುಂಬದವರು ಬಲವಂತವಾಗಿ ಬಾಗಿಲು ತೆರೆದು ಅವರ ಮೇಲೆ ಮತ್ತೆ ಹಲ್ಲೆ ನಡೆಸಿದ್ದಾರೆ. ಇದರಿಂದ ವಿಪೇಂದ್ರ ಅವರ ಮುಖ ಹಾಗೂ ದೇಹದ ಮೇಲೆ ಗಾಯಗಳಾಗಿವೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಶಾಂಕ್ ಕುಟುಂಬಕ್ಕೆ ವಿಪೇಂದ್ರ ಸಿಂಗ್ ತೋಮರ್ ಪರಿಚಯವಾಗಿದ್ದು ಹೇಗೆ?
ವಿಪೇಂದ್ರ ಸಿಂಗ್ ತೋಮರ್ ಪರಿಚಯಸ್ಥರು ರೇವಾದಿಂದ ಭೋಪಾಲ್‌ನಲ್ಲಿದ್ದ ವಿಪೇಂದ್ರ ಅವರಿಗೆ ಕರೆ ಮಾಡಿ, ಶೈಲೇಶ್ ಸಿಂಗ್ ಅವರ ಮನೆಯಲ್ಲಿ ಅಡುಗೆ ಮಾಡುವ ಕೆಲಸವಿದೆ ಎಂದು ಹೇಳಿದ್ದರು. ಇದಷ್ಟೇ ಅಲ್ಲದೇ ಅಲ್ಲಿ ಕೆಲಸ ಮಾಡಿದರೆ, ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಈ ಕೆಲಸ ಸಹಾಯ ಮಾಡುತ್ತದೆ ಎಂದು ಅವರಿಗೆ ತಿಳಿಸಿದ್ದರಂತೆ. ಅಡುಗೆಯವರ ಕೆಲಸಕ್ಕೆ ಅವರಿಗೆ 15,000 ರೂ. ಸಂಬಳ ನೀಡಲಾಗುವುದು ಮತ್ತು ವಸತಿ ಮತ್ತು ಆಹಾರವನ್ನು ಸಹ ಒದಗಿಸಲಾಗುವುದು ಎಂದು ಆಫರ್ ನೀಡಿದ್ದರು. ಆದರೆ, ಕೆಲಸ ಪ್ರಾರಂಭಿಸಿದ ಕೆಲವೇ ಗಂಟೆಗಳಲ್ಲಿ ಒತ್ತಡ ಹೆಚ್ಚಾಯಿತು. ಮನೆಯಲ್ಲಿ ಈಗಾಗಲೇ ಕೆಲಸ ಮಾಡುತ್ತಿದ್ದ ಅಡುಗೆಯವರ ಮೇಲೂ ದೌರ್ಜನ್ಯ ನಡೆಯುತ್ತಿದೆ ಎಂದು ವಿಪೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಪೊಲೀಸರಿಂದ ಎಫ್‌ಐಆರ್ ದಾಖಲು:
ಪೊಲೀಸರು ಶೈಲೇಶ್ ಸಿಂಗ್, ಶಶಾಂಕ್ ಸಿಂಗ್ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 296(ಬಿ), 115(2) ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ತನಿಖೆ ನಡೆಯುತ್ತಿದ್ದು, ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಯಾರು ಈ ಶಶಾಂಕ್ ಸಿಂಗ್?
34 ವರ್ಷದ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಆಲ್ರೌಂಡರ್ ಶಶಾಂಕ್ ಸಿಂಗ್, ಐಪಿಎಲ್ ಟೂರ್ನಿಯ ಅತ್ಯಂತ ಅಪಾಯಕಾರಿ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ. 2024ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಗುಜರಾತ್ ಟೈಟಾನ್ಸ್ ಎದುರು ಶಶಾಂಕ್ ಸಿಂಗ್ 29 ಎಸೆತಗಳಲ್ಲಿ 61 ರನ್ ಸಿಡಿಸಿ ಗಮನ ಸೆಳೆದಿದ್ದರು. 2024ರ ಐಪಿಎಲ್ ಟೂರ್ನಿಯಲ್ಲಿ 354 ರನ್ ಬಾರಿಸಿದ್ದ ಶಶಾಂಕ್ ಸಿಂಗ್, 2025ರ ಐಪಿಎಲ್ ಟೂರ್ನಿಯಲ್ಲಿ 350 ರನ್ ಚಚ್ಚಿದ್ದರು.


