ಪಾಕಿಸ್ತಾನದ ಆರ್ಥಿಕ ಸಂಕಷ್ಟದಿಂದ ಕ್ರಿಕೆಟ್ ಮಂಡಳಿಯು ಆಟಗಾರರ ವೇತನ ಕಡಿತಗೊಳಿಸಿದೆ. ಟಿ20 ಟೂರ್ನಿಯಲ್ಲಿ ಪಂದ್ಯಕ್ಕೆ 1 ಲಕ್ಷದ ಬದಲು 10 ಸಾವಿರ ರೂಪಾಯಿ ನೀಡಲಾಗುವುದು. ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಯಿಂದ ನಷ್ಟ ಉಂಟಾಗಿದೆ. ಭಾರತ ತಂಡದ ಪ್ರವಾಸ ರದ್ದತಿಯಿಂದ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸಲಾಯಿತು. ಪಾಕ್ ಕ್ರಿಕೆಟ್ ಐಸಿಯುನಲ್ಲಿದೆ ಎಂದು ಶಾಹಿದ್ ಅಫ್ರಿದಿ ಟೀಕಿಸಿದ್ದಾರೆ.

ಕರಾಚಿ: ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ ಮತ್ತಷ್ಟು ತಲೆದೂರಿದ್ದು, ಇದರಿಂದ ಅಲ್ಲಿನ ಕ್ರಿಕೆಟ್ ಮಂಡಳಿ ಕೂಡಾ ನಷ್ಟದಲ್ಲಿದೆ. ಹೀಗಾಗಿ ಪಾಕ್‌ನ ದೇಸಿ ಕ್ರಿಕೆಟಿಗರ ವೇತನವನ್ನೇ ಕಡಿತಗೊಳಿಸಲು ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ಮುಂದಾಗಿದೆ.

ಮುಂಬರುವ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರು ಪ್ರತಿ ಪಂದ್ಯಕ್ಕೆ ಒಂದು ಲಕ್ಷ ರುಪಾಯಿ ಬದಲು ಕೇವಲ 10 ಸಾವಿರ ರುಪಾಯಿ ಪಡೆಯಲಿದ್ದಾರೆ. ಇನ್ನು ಮೀಸಲು ಆಟಗಾರರಿಗೆ ಕೇವಲ 5 ಸಾವಿರ ರುಪಾಯಿ ಸಿಗಲಿದೆ. ಅಲ್ಲದೆ, ಈ ಮೊದಲು ಪಂಚತಾರ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದ ಆಟಗಾರರು ಇನ್ನು ಸಾಮಾನ್ಯ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಆಟಗಾರರ ದುಬಾರಿ ವಿಮಾನ ಸಂಚಾರಕ್ಕೂ ಪಿಸಿಬಿ ಕಡಿವಾಣ ಹಾಕಲಿದೆ ಎಂದು ವರದಿಯಾಗಿದೆ. ಆದರೆ ಇದೇ ವೇಳೆ ಆಯ್ಕೆ ಸಮಿತಿ ಸದಸ್ಯರು ಹಾಗೂ ಕೋಚ್‌ಗಳ ವೇತನವನ್ನು ಪಿಸಿಬಿ ಹೆಚ್ಚಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ: ಟೀಕಾಕಾರರು ಕ್ಲೀನ್‌ಬೌಲ್ಡ್‌!

ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿ ಕೈಸುಟ್ಟುಕೊಂಡ ಪಾಕ್

ಆರ್ಥಿಕ ಸಂಕಷ್ಟದ ನಡುವೆಯೂ ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಕೈಸುಟ್ಟುಕೊಂಡಿದೆ. ಭಾರತ ತಂಡವು ಪಾಕಿಸ್ತಾನ ಪ್ರವಾಸ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ಆಯೋಜನೆಗೊಂಡಿತು. ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಿ ಸ್ಟೇಡಿಯಂ ಅಭಿವೃದ್ದಿ ಪಡಿಸಲಾಯಿತು. ಹೀಗಿದ್ದೂ ಪಾಕ್ ನೀರಸ ಪ್ರದರ್ಶನ ತೋರಿ ಗ್ರೂಪ್ ಹಂತದಲ್ಲೇ ಹೊರಬಿದ್ದಿದ್ದರಿಂದ ಒಂದು ಸೆಮಿಫೈನಲ್ ಹಾಗೂ ಫೈನಲ್ ದುಬೈನಲ್ಲಿ ನಡೆಯಿತು. ಸಾಕಷ್ಟು ನಿರೀಕ್ಷೆಯಿಟ್ಟುಕೊಂಡು ಟೂರ್ನಿ ಆಯೋಜಿಸಿದ್ದ ಪಾಕಿಸ್ತಾನಕ್ಕೆ ಇದು ಗಾಯದ ಮೇಲೆ ಬರೆ ಎಳೆದಂತೆ ಮಾಡಿತು.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಂ ಇಂಡಿಯಾ ಬಸ್ ಪೆರೇಡ್‌ ಮಾಡಿಲ್ಲ ಏಕೆ?

29 ವರ್ಷ ಬಳಿಕ ಟೂರ್ನಿ ನಡೆದರೂ ಪಾಕ್‌ನಲ್ಲಿ ಸಿಗದ ಫ್ಯಾನ್ಸ್‌ ಬೆಂಬಲ

ಪಾಕಿಸ್ತಾನ 1996ರ ಬಳಿಕ ಅಂದರೆ 29 ವರ್ಷಗಳಲ್ಲಿ ಮೊದಲ ಬಾರಿ ಐಸಿಸಿ ಟೂರ್ನಿಗೆ ಆತಿಥ್ಯ ವಹಿಸಿತು. ಆದರೆ ಅಲ್ಲಿನ ಪ್ರೇಕ್ಷಕರಿಂದ ಪಂದ್ಯಾವಳಿಗೆ ಸೂಕ್ತ ಬೆಂಬಲ ಸಿಗಲಿಲ್ಲ. ಬಹುತೇಕ ಪಂದ್ಯಗಳಲ್ಲಿ ಕ್ರೀಡಾಂಗಣಗಳು ಖಾಲಿಯಾಗಿದ್ದವು. ಪಾಕಿಸ್ತಾನದ ಪಂದ್ಯಕ್ಕೂ ಕೂಡಾ ಜನ ಆಸಕ್ತಿ ತೋರಲಿಲ್ಲ.

ಪಾಕಿಸ್ತಾನ, ಇಂಗ್ಲೆಂಡ್‌ ಗುಂಪು ಹಂತದಲ್ಲೇ ಔಟ್‌

ಆತಿಥ್ಯ ದೇಶ, ಹಾಲಿ ಚಾಂಪಿಯನ್‌ ಪಟ್ಟದೊಂದಿಗೆ ಟೂರ್ನಿಗೆ ಕಾಲಿರಿಸಿದ್ದ ಪಾಕಿಸ್ತಾನ ಗುಂಪು ಹಂತದಲ್ಲಿ ಒಂದೂ ಪಂದ್ಯ ಗೆಲ್ಲದೆ ಹೊರಬಿದ್ದು ತೀವ್ರ ಮುಖಭಂಗ ಅನುಭವಿಸಿತು. ಬಲಿಷ್ಠ ಇಂಗ್ಲೆಂಡ್‌ ಕೂಡಾ ಗುಂಪು ಹಂತದಲ್ಲೇ ಹೊರಬಿತ್ತು. ಇಂಗ್ಲೆಂಡ್‌ ವಿರುದ್ಧ ಗೆದ್ದಿದ್ದ ಅಫ್ಘಾನಿಸ್ತಾನ ತಂಡ ಸೆಮಿಫೈನಲ್‌ ಪ್ರವೇಶಿಸುವ ಅವಕಾಶವನ್ನು ಅಲ್ಪದರಲ್ಲೇ ತಪ್ಪಿಸಿಕೊಂಡಿತು.

ಇನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಫೈನಲ್ ಪ್ರವೇಶಿಸಿತ್ತು. ಇನ್ನು ಫೈನಲ್‌ನಲ್ಲೂ ಮಿಂಚಿದ ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡವನ್ನು ಮಣಿಸಿ ದಾಖಲೆಯ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಇದನ್ನೂ ಓದಿ: ಅಳಿಯ ಕೆ ಎಲ್ ರಾಹುಲ್ ಆಟವನ್ನು 4 ಪದಗಳಲ್ಲಿ ಬಣ್ಣಿಸಿದ ಮಾವ ಸುನಿಲ್ ಶೆಟ್ಟಿ!

ಪಾಕ್ ಕ್ರಿಕೆಟ್ ಈಗ ಐಸಿಯು ಸೇರಿದೆ: ಶಾಹಿದ್ ಅಫ್ರಿದಿ!

ಕರಾಚಿ: ಪಾಕಿಸ್ತಾನ ಕ್ರಿಕೆಟ್ ವ್ಯವಸ್ಥೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಡಿಸಿರುವ ಮಾಜಿ ನಾಯಕ ಶಾಹಿದ್ ಅಫ್ರಿದಿ, ಪಾಕ್ ಕ್ರಿಕೆಟ್ ಈಗ ಐಸಿಯುನಲ್ಲಿದೆ ಎಂದು ವ್ಯಂಗ್ಯ ವಾಡಿದ್ದಾರೆ. 

ಕಳೆದ ಟಿ20 ವಿಶ್ವಕಪ್‌ನಿಂದ ತೀರಾ ಕಳಪೆ ಲಯದಲ್ಲಿರುವ ಶದಾಬ್ ಖಾನ್‌ರನ್ನು ಇತ್ತೀಚೆಗೆ ಮರಳಿ ತಂಡಕ್ಕೆ ಸೇರಿಸಿ, ಉಪನಾಯಕನನ್ನಾಗಿ ನೇಮಿಸಲಾಗಿತ್ತು. ಈ ಬಗ್ಗೆ ಕಿಡಿಕಾರಿರುವ ಅಫ್ರಿದಿ, 'ಯಾವ ಕಾರಣಕ್ಕೆ ಶದಾಬ್‌ರನ್ನು ಮತ್ತೆ ತಂಡಕ್ಕೆ ಸೇರಿಸಿದ್ದೀರಿ. ದೇಸಿ ಕ್ರಿಕೆಟ್ ನಲ್ಲಿ ಅವರ ಪ್ರದರ್ಶನವನ್ನು ನೋಡಿದ್ದೀರಾ?. ನಾವು ತಂಡಕ್ಕೆ ಸರ್ಜರಿ ಬಗ್ಗೆ ಮಾತನಾಡುತ್ತೇವೆ. ಆದರೆ ಕೆಟ್ಟ ನಿರ್ಧಾರಗಳಿಂದಾಗಿ ಪಾಕ್ ತಂಡ ಐಸಿಯುನಲ್ಲಿದೆ' ಎಂದಿದ್ದಾರೆ.