Asianet Suvarna News Asianet Suvarna News

ಬಿಸಿಸಿಐನಲ್ಲಿ ಸೌರವ್ ಗಂಗೂಲಿ, ಜಯ್‌ ಶಾ ಭವಿಷ್ಯ ಇಂದು ನಿರ್ಧಾರ?

ಕಡ್ಡಾಯ ಕೂಲಿಂಗ್‌ ಆಫ್‌ ಅವಧಿಯ ನಿಯಮವನ್ನು ರದ್ದುಗೊಳಿಸಲು ಅನುಮತಿ ಕೋರಿದ್ದ ಬಿಸಿಸಿಐ
ನ್ಯಾ.ಲೋಧಾ ಸಮಿತಿ ಮಾಡಿದ್ದ ಶಿಫಾರಸುಗಳಲ್ಲಿ ಕೂಲಿಂಗ್‌ ಆಫ್‌ ನಿಯಮವೂ ಒಂದು
ಕೂಲಿಂಗ್‌ ಆಫ್‌ ನಿಯಮವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್‌

Fate of Sourav Ganguly Jay Shah in focus as Supreme Court begins hearing BCCI plea to amend constitution kvn
Author
First Published Sep 14, 2022, 7:38 AM IST

ನವದೆಹಲಿ(ಸೆ.14): ಬಿಸಿಸಿಐ ಒಂದು ಸ್ವತಂತ್ರ ಸಂಸ್ಥೆ, ಅದರ ಕಾರ್ಯನಿರ್ವಹಿಸುವಿಕೆಯ ಮೇಲೆ ಸದಾ ಕಣ್ಣಿಡಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಚ್‌, ಬಿಸಿಸಿಐಗೆ ಕೆಲ ಮಹತ್ವದ ಪ್ರಶ್ನೆಗಳನ್ನೂ ಕೇಳಿದೆ. ತನ್ನ ಸಂವಿಧಾನದಲ್ಲಿ ತಿದ್ದುಪಡಿ ಮಾಡಿಕೊಂಡು ಕಡ್ಡಾಯ ಕೂಲಿಂಗ್‌ ಆಫ್‌ ಅವಧಿಯ ನಿಯಮವನ್ನು ರದ್ದುಗೊಳಿಸಲು ಅನುಮತಿ ಕೋರಿ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾ.ಹಿಮಾ ಕೊಹ್ಲಿ ಅವರಿದ್ದ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ಬುಧವಾರವೂ ವಿಚಾರಣೆ ಮುಂದುವರಿಸುವುದಾಗಿ ತಿಳಿಸಿರುವ ನ್ಯಾಯಪೀಠವು ‘ಕೂಲಿಂಗ್‌ ಆಫ್‌ ನಿಯಮವನ್ನು ರದ್ದುಗೊಳಿಸಲು ಆಗುವುದಿಲ್ಲ. ಆ ನಿಯಮ ಜಾರಿ ಮಾಡಿರುವುದೇ ಕ್ರಿಕೆಟ್‌ ಸಂಸ್ಥೆಗಳಲ್ಲಿ ಯಾವುದೇ ಪಟ್ಟಭದ್ರ ಹಿತಾಸಕ್ತಿ ಇರಬಾರದು ಎನ್ನುವ ಕಾರಣಕ್ಕೆ’ ಎಂದು ಪುನರುಚ್ಚರಿಸಿದೆ.

ಬಿಸಿಸಿಐ ಅಧ್ಯಕ್ಷರಾಗಿ ಸೌರವ್‌ ಗಂಗೂಲಿ, ಕಾರ‍್ಯದರ್ಶಿಯಾಗಿ ಜಯ್‌ ಶಾ ಅವರೇ ಮತ್ತೊಂದು ಅವಧಿಗೆ ಮುಂದುವರಿಯಬೇಕು ಎನ್ನುವ ಕಾರಣಕ್ಕೆ ಕೂಲಿಂಗ್‌ ಆಫ್‌ ನಿಯಮವನ್ನು ರದ್ದುಗೊಳಿಸಲು ಅನುಮತಿ ಕೋರಿ ಸುಪ್ರೀಂ ಕೋರ್ಚ್‌ ಮೆಟ್ಟಿಲೇರಲಾಗಿದೆ. ನ್ಯಾ.ಲೋಧಾ ಸಮಿತಿ ಮಾಡಿದ್ದ ಶಿಫಾರಸುಗಳಲ್ಲಿ ಕೂಲಿಂಗ್‌ ಆಫ್‌ ನಿಯಮವೂ ಒಂದಾಗಿತ್ತು. ಇದೀಗ ಕೊನೆ ಪಕ್ಷ ಮತ್ತೊಂದು ಅವಧಿಗೆ ಮುಂದುವರಿಯಲು ಅವಕಾಶ ನೀಡುವಂತೆ ಗಂಗೂಲಿ ಹಾಗೂ ಶಾ ಬಿಸಿಸಿಐ ವಕೀಲರ ಮೂಲಕ ಮನವಿ ಸಲ್ಲಿಸಿದ್ದಾರೆ. ಬುಧವಾರ ಈ ಸಂಬಂಧ ಮಧ್ಯಂತರ ತೀರ್ಪು ಹೊರಬೀಳುವ ಸಾಧ್ಯತೆ ಇದೆ.

ICC T20 World Cup Squad: ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟ

ರದ್ದಿಗೆ ಪಟ್ಟು ಏಕೆ?: ಗಂಗೂಲಿ ಹಾಗೂ ಶಾ ಈಗಾಗಲೇ ಕ್ರಿಕೆಟ್‌ ಆಡಳಿತಗಾರರಾಗಿ ಸತತ 6 ವರ್ಷಗಳ ಕಾಲ ಅಧಿಕಾರದಲ್ಲಿದ್ದಾರೆ. ಬಿಸಿಸಿಐ ಗದ್ದುಗೆ ಏರುವ ಮೊದಲು ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ ಗಂಗೂಲಿ, ಗುಜರಾತ್‌ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ ಶಾ ತಲಾ 3 ವರ್ಷ ಅಧಿಕಾರ ಅನುಭವಿಸಿದ್ದರು. ಇದೀಗ ಬಿಸಿಸಿಐನಲ್ಲೂ 3 ವರ್ಷ ಪೂರ್ಣಗೊಂಡಿದ್ದು, ನಿಯಮದ ಪ್ರಕಾರ ಕಡ್ಡಾಯವಾಗಿ 3 ವರ್ಷ ಕೂಲಿಂಗ್‌ ಆಫ್‌ ಅವಧಿಯಲ್ಲಿ ಇರಬೇಕಿದೆ. ಆದರೆ ಅಧಿಕಾರ ಕೈತಪ್ಪಬಾರದು ಎನ್ನುವ ಉದ್ದೇಶದಿಂದ ಸಂವಿಧಾನದಲ್ಲಿ ತಿದ್ದುಪಡಿ ಮಾಡಲು ಅವಕಾಶ ಕೋರಿ ಸುಪ್ರೀಂ ಕೋರ್ಚ್‌ ಮೆಟ್ಟಿಲೇರಲಾಗಿದೆ.

ಏನಿದು ಕೂಲಿಂಗ್‌ ಆಫ್‌ ನಿಯಮ?

ಬಿಸಿಸಿಐ ಸಂವಿಧಾನದ ಪ್ರಕಾರ ರಾಜ್ಯ ಕ್ರಿಕೆಟ್‌ ಸಂಸ್ಥೆ ಇಲ್ಲವೇ ಬಿಸಿಸಿಐ ಆಡಳಿತದಲ್ಲಿ ಎರಡು ಸತತ ಅವಧಿಗಳ ನಡುವೆ ಕಡ್ಡಾಯವಾಗಿ 3 ವರ್ಷ ಬಿಡುವು ಪಡೆಯಬೇಕು. ಒಬ್ಬರೇ ಹೆಚ್ಚು ಸಮಯ ಅಧಿಕಾರದಲ್ಲಿ ಇದ್ದರೆ ಅಧಿಕಾರದ ದುರುಪಯೋಗವಾಗಬಹುದು, ಇತರ ಅರ್ಹ ವ್ಯಕ್ತಿಗಳಿಗೆ ಅಧಿಕಾರ ಸಿಗದೆ ಇರಬಹುದು ಎನ್ನುವ ಕಾರಣಕ್ಕೆ ಈ ನಿಯಮ ಜಾರಿಗೆ ತರಲಾಗಿದೆ.

ಐಸಿಸಿಗೆ 70 ದಾಟಿದ ಪ್ರತಿನಿಧಿ ಏಕೆ ಬೇಕು?

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯಲ್ಲಿ ಬಿಸಿಸಿಐ ಅನ್ನು ಪ್ರತಿನಿಧಿಸುವ ವ್ಯಕ್ತಿಗೆ 70 ವರ್ಷ ದಾಟಿರಬಾರದು ಎನ್ನುವ ನಿಯಮವನ್ನೂ ತಿದ್ದುಪಡಿ ಮಾಡಲು ಅವಕಾಶ ಕೋರಿ ಬಿಸಿಸಿಐ ಅರ್ಜಿ ಸಲ್ಲಿಸಿದೆ. ಈ ಬಗ್ಗೆ ಪ್ರಶ್ನಿಸಿದ ನ್ಯಾಯಪೀಠ, ‘70 ವರ್ಷ ದಾಟಿದ ವ್ಯಕ್ತಿಗಳೇಕೆ ಐಸಿಸಿಯಲ್ಲಿ ದೇಶವನ್ನು ಪ್ರತಿನಿಧಿಸಬೇಕು. 70 ವರ್ಷವಾದವರು ಉತ್ತಮ ಕೆಲಸ ಮಾಡುವುದಿಲ್ಲ ಎಂದು ನಾವು ಹೇಳುತ್ತಿಲ್ಲ. ಆದರೆ ಯುವಕರಿಗೂ ಅವಕಾಶ ಸಿಗಬೇಕಲ್ಲವೇ?’ ಎಂದು ಪ್ರಶ್ನಿಸಿತು.

Follow Us:
Download App:
  • android
  • ios