ಗ್ರಾಸ್ ಐಲೆಟ್[ನ.11]: ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ, ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರ 30 ವರ್ಷ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ. 

ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಶಫಾಲಿ, ಸಚಿನ್ ದಾಖಲೆಯನ್ನು ಮುರಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಚಿಕ್ಕ ವಯಸ್ಸಿನಲ್ಲೇ ಅರ್ಧಶತಕ ಬಾರಿಸಿದ ಶ್ರೇಯ ಶಫಾಲಿ ಪಾಲಾಯಿತು.

ಟಿ20: ಭಾರತ ಮಹಿಳಾ ತಂಡಕ್ಕೆ ಭರ್ಜರಿ ಜಯ

15 ವರ್ಷ 285 ದಿನಕ್ಕೆ ಶೆಫಾಲಿ ಅರ್ಧಶತಕ ಸಿಡಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಶಫಾಲಿ 49 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ 73 ರನ್‌ಗಳಿಸಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ 30 ವರ್ಷಗಳ ಹಿಂದೆ ಸಚಿನ್ ತೆಂಡುಲ್ಕರ್ ಭಾರತ ಅರ್ಧಶತಕ ಬಾರಿಸಿದ ಅತಿ ಕಿರಿಯ ಕ್ರಿಕೆಟಿಗ ಎನಿಸಿದ್ದರು. ತೆಂಡುಲ್ಕರ್ ನವೆಂಬರ್ 23, 1989ರಲ್ಲಿ ಪಾಕಿಸ್ತಾನ ವಿರುದ್ಧ ಫೈಸಲಾಬಾದ್’ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 59 ರನ್ ಬಾರಿಸುವ ಮೂಲಕ ಇತಿಹಾಸ ಬರೆದಿದ್ದರು. ಆಗ ಸಚಿನ್ ವಯಸ್ಸು 16 ವರ್ಷ 214 ದಿನಗಳಾಗಿದ್ದವು. 

ಶಫಾಲಿಗಿದು ಎರಡನೇ ಸರಣಿಯಾಗಿದ್ದು, ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಶಫಾಲಿ ಇದೀಗ, ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರಿಸುವ ಮೂಲಕ ಹೊಸ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. 

2020ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ಮಹಿಳಾ ಟಿ20 ವಿಶ್ವಕಪ್ ನಡೆಯಲಿದ್ದು, ಶಫಾಲಿ, ಸ್ಮೃತಿ ಮಂಧನಾ, ಹರ್ಮನ್ ಪ್ರೀತ್ ಕೌರ್ ಸ್ಫೋಟಕ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.