ಕೊಹ್ಲಿ 'ಸ್ಲೋ' ಬ್ಯಾಟಿಂಗ್ ಕೆಣಕಿದ ಮುಂಬೈ ಪೊಲೀಸ್‌ಗೆ ಬೆಂಗಳೂರು ಪೊಲೀಸ್ ಖಡಕ್ ಉತ್ತರ, ಆದರೆ ಒಂದಿದೆ ಟ್ವಿಸ್ಟು!
ವಿರಾಟ್ ಕೊಹ್ಲಿಯ ನಿಧಾನಗತಿಯ ಬ್ಯಾಟಿಂಗ್ ಕುರಿತಾಗಿ ಲೇವಡಿ ಮಾಡುವ ರೀತಿಯಲ್ಲಿ ಪೋಸ್ಟ್ ಶೇರ್ ಮಾಡಿದ್ದ ಮುಂಬೈ ಪೊಲೀಸ್‌ಗೆ, ಬೆಂಗಳೂರು ಪೊಲೀಸ್ ಅದೇ ರೀತಿಯಲ್ಲಿ ಖಡಕ್ ಉತ್ತರ ನೀಡಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಉತ್ತರಗಳು ವೈರಲ್ ಆಗಿವೆ.
ಬೆಂಗಳೂರು (ಏ.27): ಐಪಿಎಲ್ ಕ್ರೇಜ್ ಅಂದ್ರನೇ ಹಾಗೆ, ಎಂಥವರನ್ನೂ ಕೂಡ ವಿರೋಧಿಗಳನ್ನಾಗಿ ಮಾಡಿಬಿಡುತ್ತದೆ. ಅಂಥದ್ದೇ ಒಂದು ಪ್ರಸಂಗ ಟ್ವಿಟರ್‌ನಲ್ಲಿ ನಡೆದಿದೆ. ಹಾಲಿ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಪವರ್ ಪ್ಲೇ ಅವಧಿಯಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿರುವ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡು ಮುಂಬೈ ಪೊಲೀಸ್ ಮಾಡಿದ ಕೆಣಕುವಂಥ ಟ್ವೀಟ್‌ಗೆ ಬೆಂಗಳೂರು ಪೊಲೀಸ್ ಟ್ವಿಟರ್ ಹ್ಯಾಂಡಲ್ ಅಷ್ಟೇ ಖಡಕ್ ಉತ್ತರ ನೀಡುವ ಮೂಲಕ ಸುದ್ದಿಯಾಗಿದೆ. ಹೆಚ್ಚಿನವರು ಈ ಟ್ವೀಟ್‌ಅನ್ನು ಸ್ಕ್ರೀನ್‌ಶಾಟ್ ಮಾಡಿ ಸೇವ್ ಮಾಡಿಕೊಟ್ಟುಕೊಂಡಿದ್ದಾರೆ. ಬೆಂಗಳೂರು ಪೊಲೀಸ್ ಮಾಡಿರುವ ಟ್ವೀಟ್‌ಗೆ ಅಂದಾಜು 733 ರೀಟ್ವೀಟ್‌ಗಳಾಗಿದ್ದು, 10 ಕೋಟ್ ಟ್ವೀಟ್‌ಗಳಾಗಿವೆ, ಅಂದಾಜು 14 ಸಾವಿರ ಮಂದಿ ಈ ಟ್ವೀಟ್‌ಅನ್ನು ವೀಕ್ಷಣೆ ಮಾಡಿದ್ದಾರೆ. ಇನ್ನು ಮುಂಬೈ ಪೊಲೀಸ್ ವಿರಾಟ್ ಕೊಹ್ಲಿ ಕುರಿತಾಗಿ ಮಾಡಿರುವ ಟ್ವೀಟ್‌ಗೆ 57 ಲಕ್ಷ ವೀವ್ಸ್ ಬಂದಿದ್ದು,103 ಜನ ಕೋಟ್ ಟ್ವೀಟ್ ಮಾಡಿದ್ದಾರೆ. ಅಂದಾಜು 10 ಸಾವಿರ ಲೈಕ್ಸ್‌ಗಳು ಈ ಟ್ವೀಟ್‌ಗೆ ಬಂದಿವೆ. ಆರ್‌ಸಿಬಿ ಹಾಗೂ ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ಸೋಲು ಕಂಡ ಬಳಿಕ ಮುಂಬೈ ಪೊಲೀಸ್ ಈ ಟ್ವೀಟ್ ಮಾಡಿದೆ. ಟ್ವೀಟ್ ಮಾಡಿದ ಫೋಟೋದಲ್ಲಿ ಮೊದಲ 15 ಎಸೆತಗಳಲ್ಲಿ 30 ರನ್, ನಂತರದ 22 ಎಸೆತಗಳಲ್ಲಿ 24 ರನ್ ಎಂದು ವಿರಾಟ್ ಕೊಹ್ಲಿಯನ್ನು ಕೆಣಕಿದೆ.
ಟ್ವೀಟ್‌ನಲ್ಲಿ ಮುಂಬೈ ಪೊಲೀಸ್ ಬರೆದಿದ್ದೇನು?: ವಿರಾಟ್ ಕೊಹ್ಲಿಯ ನಿಧಾನಗತಿಯ ಇನ್ನಿಂಗ್ಸ್‌ನ ಪೋಸ್ಟ್‌ನೊಂದಿಗೆ ' ವಿರಾಟ್ ಕೊಹ್ಲಿ ಅರ್ಧಶತಕ ಹತ್ತಿರ ಬಂದಾಗ ಯಾವ ರೀತಿಯಲ್ಲಿ ನಿಧಾನವಾಗಿ ಆಡುತ್ತಾರೋ ಅದೇ ರೀತಿಯಲ್ಲಿ ಜೀಬ್ರಾ ಕ್ರಾಸಿಂಗ್‌ನಲ್ಲಿ ನೀವು ನಿಧಾನರಾಗಬೇಕು' ಎಂದು ಬರೆದುಕೊಂಡಿತ್ತು.
ಬೆಂಗಳೂರು ಪೊಲೀಸ್ ತಿರುಗೇಟು: ಇನ್ನು ಈ ಟ್ವೀಟ್‌ಗೆ ಬೆಂಗಳೂರು ಪೊಲೀಸ್ ತಿರುಗೇಟು ನೀಡಿದ್ದು, 'ಟ್ರಾಫಿಕ್ ಲೈಟ್ ಗ್ರೀನ್ ಆದಾಗ ರಸ್ತೆ ದಾಟುವುದನ್ನು ತಪ್ಪಿಸಿಕೊಳ್ಳಿ, ಯಾವ ರೀತಿ ಎಂದರೆ, ವಿದೇಶ ಪ್ರವಾಸಕ್ಕೆ ರೋಹಿತ್ ಶರ್ಮ ತಪ್ಪಿಸಿಕೊಳ್ಳುವ ರೀತಿಯಲ್ಲಿ.. ಫಿಟ್ ಆಗಿರಿ, ಆರೋಗ್ಯದಿಂದಿರಿ' ಎಂದು ಬರೆಯುವ ಮೂಲಕ ತಿರುಗೇಟು ನೀಡಿದೆ. ಇದು ಮುಂಬೈ ಪೊಲೀಸರಿಗೆ ಮಾತ್ರವಲ್ಲದೆ, ರೋಹಿತ್ ಶರ್ಮ ತಮ್ಮ ಫಿಟ್‌ನೆಸ್ ಕಾರಣಕ್ಕೆ ಪದೇ ಪದೇ ವಿದೇಶ ಪ್ರವಾಸವನ್ನು ತಪ್ಪಿಸಿಕೊಳ್ಳುವ ಚಾಳಿಯನ್ನೂ ಟೀಕೆ ಮಾಡಿದೆ. ಇದರೊಂದಿಗೆ ತನ್ನ ಟ್ವೀಟ್‌ನಲ್ಲಿ ತಪ್ಪಾದ ಅಕ್ಷರವನ್ನು ಸರಿಪಡಿಸಿಕೊಂಡು ಕಾಮೆಂಟ್ ಮಾಡಿದ ಬೆಂಗಳೂರು ಪೊಲೀಸ್, 'ನನ್ನ ಕೀಬೋರ್ಡ್ ರೋಹಿತ್ ಅಭಿಮಾನಿಗಳಂತೆ ಮೌನವಾಗಿದೆ' ಎಂದು ಬರೆದಿದೆ.
ಇದೆಂಥಾ ಡೀಲ್.. ಕಾಮಸೂತ್ರ ಕಾಂಡಮ್ ತಯಾರಿಸೋ ಕಂಪನಿಯನ್ನು ಗೋದ್ರೆಜ್‌ಗೆ ಮಾರಿದ ರೇಮಂಡ್ಸ್!
ಇದಕ್ಕೆ ಮುಂಬೈ ಪೊಲೀಸ್ ಕೂಡ ಪ್ರತಿಕ್ರಿಯೆ ನೀಡಿದ್ದು, 'ನೀವು ಆರ್‌ಸಿಬಿ ಫ್ಯಾನ್ ಆಗಿಲ್ಲದೇ ಇದ್ದರೆ ನಿಮ್ಮ ತಲೆಯನ್ನು ರಕ್ಷಿಸಿಕೊಳ್ಳಲು ಯಾವಾಗಲೂ ಹೆಲ್ಮೆಟ್ ಧರಿಸಿಸಿದರೆ, ನೀವು ಆರ್‌ಸಿಬಿ ಫ್ಯಾನ್ ಆಗಿದ್ದರೆ, ರಕ್ಷಿಸಿಕೊಳ್ಳಲು ನಿಮ್ಮ ತಲೆಯಲ್ಲಿ ಮೆದುಳೇ ಇರುವುದಿಲ್ಲ' ಎಂದು ಟಾಂಗ್ ನೀಡಿದೆ.
'ಬೇರೆ ಫ್ರಾಂಚೈಸಿಗೆ ಸೇರುವ ಮನಸ್ಸು ಮಾಡಿದ್ದೆ...' ಆರ್‌ಸಿಬಿ ಕುರಿತು ಕೊಹ್ಲಿ ಬಾಂಬ್!
ಆದರೆ, ನಿಮಗೆ ನೆನಪಿರಲಿ ಇದು ಎರಡೂ ಪೊಲೀಸ್ ಇಲಾಖೆಗಳ ಅಧಿಕೃತ ಅಕೌಂಟ್‌ಗಳಲ್ಲ. ಪರೋಡಿ ಅಕೌಂಟ್ ಕ್ರಿಯೇಟ್ ಮಾಡಿ, ಅದರಲ್ಲಿ ಐಪಿಎಲ್ ಮ್ಯಾಚ್‌ನ ಕುರಿತಾದ ಟ್ವೀಟ್‌ಗಳು ಮಾಡಲಾಗುತ್ತಿದೆ. ಬಹುತೇಕರು ಇದು ಬೆಂಗಳೂರು ಪೊಲೀಸ್ ಹಾಗೂ ಮುಂಬೈ ಪೊಲೀಸ್ ಟ್ವಿಟರ್ ಅಕೌಂಟ್‌ಗಳ ಟ್ವೀಟ್ ಫೈಟ್ ಎಂದುಕೊಂಡಿದ್ದಾರೆ. ಇದು ಪರೋಡಿ ಅಕೌಂಟ್ ಆಗಿದ್ದರೂ, ಇವರು ಮಾಡಿರುವ ಟ್ವೀಟ್‌ಗಳು ಈಗಾಗಲೇ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗುತ್ತಿದೆ.