Asianet Suvarna News Asianet Suvarna News

'ಬೇರೆ ಫ್ರಾಂಚೈಸಿಗೆ ಸೇರುವ ಮನಸ್ಸು ಮಾಡಿದ್ದೆ...' ಆರ್‌ಸಿಬಿ ಕುರಿತು ಕೊಹ್ಲಿ ಬಾಂಬ್‌!

ಆರ್‌ಸಿಬಿ ಹಾಗೂ ಐಪಿಎಲ್‌ನ ಆರಂಭಿಕ ದಿನಗಳಲ್ಲಿ ನಾನು ಬೇರೆ ತಂಡಕ್ಕೆ ಸೇರಲು ಉತ್ಸುಕನಾಗಿದ್ದೆ. ಈ ಕುರಿತಾಗಿ ಒಂದು ಫ್ರಾಂಚೈಸಿ ಜೊತೆಗೂ ಮಾತನಾಡಿದ್ದೆ ಎಂದು ವಿರಾಟ್‌ ಕೊಹ್ಲಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
 

Virat Kohli bombshell  franchise denied the chance to pick me says RCB Star Player san
Author
First Published Apr 19, 2023, 1:41 PM IST

ನವದೆಹಲಿ (ಏ.19): ವಿರಾಟ್‌ ಕೊಹ್ಲಿ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಅನ್ನೋದು ಈಗ ಬೇರ್ಪಡಿಸಲಾಗದ ಬಂಧ. ಹೆಚ್ಚೂ ಕಡಿಮೆ ಅವರು ಆರ್‌ಸಿಬಿ ತಂಡದಲ್ಲಿಯೇ ನಿವೃತ್ತರಾಗುವ ಇರಾದೆಯಲ್ಲಿದ್ದಾರೆ. 34 ವರ್ಷದ ಟೀಮ್‌ ಇಂಡಿಯಾ ಮಾಜಿ ನಾಯಕ, ಐಪಿಎಲ್‌ ಆರಂಭವಾದಾಗಲಿಂದ ಒಂದೇ ತಂಡದ ಪರವಾಗಿ ಆಟವಾಡಿದ ಏಕೈಕ ಆಟಗಾರ. 2013ರ ರಿಂದ 2021ರ ಅವಧಿಯಲ್ಲಿ 9 ಋತುಗಳಲ್ಲಿ ಆರ್‌ಸಿಬಿ ತಂಡಕ್ಕೆ ಅವರು ನಾಯಕರೂ ಆಗಿದ್ದರು. ಆದರೆ, ನಾಯಕನಾಗಿ ಅವರು ಟ್ರೋಫಿ ಗೆಲ್ಲಲು ವಿಫಲರಾಗಿದ್ದಾರೆ. ಫ್ರಾಂಚೈಸಿ ಪರವಾಗಿ ಸ್ಮರಣೀಯ ಬ್ಯಾಟಿಂಗ್‌ ಪ್ರದರ್ಶನಗಳನ್ನು ನೀಡಿದ ದಾಖಲೆ ಅವರದ್ದು. ಸಾಕಷ್ಟು ಸಂದರ್ಭಗಳಲ್ಲಿ ವಿರಾಟ್‌ ಕೊಹ್ಲಿ, ಐಪಿಎಲ್‌ನಲ್ಲಿ ನನಗೆ ಆರ್‌ಸಿಬಿ ನನ್ನ ಕೊನೆಯ ತಂಡ. ಮತ್ತೆ ಯಾವುದೇ ತಂಡ ಸೇರುವ ಇಚ್ಛೆಯಿಲ್ಲ ಎಂದು ಹೇಳಿದ್ದರು. ಆದರೆ, ಆರ್‌ಸಿಬಿ ಹಾಗೂ ಐಪಿಎಲ್‌ನ ಅರಂಭಿಕ ದಿನಗಳಲ್ಲಿ ಬೇರೆ ತಂಡವನ್ನು ಸೇರುವ ಮನಸ್ಸು ಮಾಡಿದ್ದೆ ಎಂದು ಸ್ವತಃ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಅಗ್ರಕ್ರಮಾಂಕದಲ್ಲಿ ಆಡುವ ಅವಕಾಶ ಬೇಕಿದ್ದ ಕಾರಣಕ್ಕೆ ಬೇರೆ ಫ್ರಾಂಚೈಸಿಯಲ್ಲಿ ವಿರಾಟ್‌ ಕೊಹ್ಲಿ ಅವಕಾಶ ಕೇಳಿದ್ದರಂತೆ. ಆರ್‌ಸಿಬಿಯ ಆರಂಭಿಕ ದಿನಗಳಲ್ಲಿ ವಿರಾಟ್‌ ಕೊಹ್ಲಿ 5 ಹಾಗೂ 6ನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಅಗ್ರಕ್ರಮಾಂಕದಲ್ಲಿ ಆಡುವ ಅವಕಾಶ ಸಿಗುವ ನಿಟ್ಟಿನಲ್ಲಿ ಬೇರೆ ಫ್ರಾಂಚೈಸಿ ಜೊತೆ ಮಾತನಾಡಿದರೂ, ಆ ತಂಡ ಕೊಹ್ಲಿಗೆ ಅವಕಾಶ ನೀಡಲು ನಿರಾಕರಿಸಿತ್ತಂತೆ.

ಆದರೆ, 2011ರ ಐಪಿಎಲ್‌ ರಿಟೆನ್ಷನ್‌ಗೂ ಮುನ್ನ ಇದೇ ಫ್ರಾಂಚೈಸಿ ಮತ್ತೊಮ್ಮೆ ಕೊಹ್ಲಿ ಬಳಿ ಇದೇ ವಿಚಾರವಾಗಿ ಮಾತನಾಡಿತ್ತು. ತಂಡಕ್ಕೆ ಸೇರುವ ಆಹ್ವಾನವನ್ನೂ ನೀಡಿತ್ತು. ಆದರೆ, ಅದಾಗಲೇ ಭಾರತ ಕ್ರಿಕೆಟ್‌ ತಂಡದ ಪ್ರಮುಖ ಆಟಗಾರನಾಗಿದ್ದ ವಿರಾಟ್‌ ಕೊಹ್ಲಿ, ತನ್ನನ್ನು ಅಪಾರವಾಗಿ ಬೆಂಬಲಿಸಿದ್ದ ಆರ್‌ಸಿಬಿ ತಂಡದ ಜೊತೆಯಲ್ಲಿಯೇ ಉಳಿಯುವ ತೀರ್ಮಾನ ಮಾಡಿದ್ದರು.

ಇದನ್ನೂ ಓದಿ: ಕನ್ನಡಕ್ಕೆ ಅವಮಾನ ಮಾಡಿದ್ರಾ ಆರ್‌ಸಿಬಿ ಮೆಂಟರ್‌, ಟೆನಿಸ್‌ ತಾರೆ ಸಾನಿಯಾ ಮಿರ್ಜಾ?

ಇಡೀ ಪ್ರಯಾಣ ಅಮೋಘವಾಗಿತ್ತು. ನಾನು ಆರ್‌ಸಿಬಿ ಹಾಗೂ ನನ್ನ ಸಂಬಂಧಕ್ಕೆ ಬಹಳ ಮೌಲ್ಯವನ್ನು ನೀಡುತ್ತೇನೆ. ಅದಕ್ಕೆ ಕಾರಣ, ಐಪಿಎಲ್‌ನ ಆರಂಭಿಕ ಮೂರು ವರ್ಷಗಳಲ್ಲಿ ತಂಡ ನನಗೆ ಅತೀವವಾಗಿ ಬೆಂಬಲ ನೀಡಿತ್ತು. 2011ರ ರಿಟೆನ್ಷನ್‌ ಸಮಯ ಬಂದಾಗಲೂ ತಂಡ 'ನಿನ್ನನ್ನು ರಿಟೇನ್‌ ಮಾಡಿಕೊಳ್ಳಲಿದ್ದೇವೆ' ಎಂದು ಹೇಳಿತ್ತು. ಆ ಸಮಯದಲ್ಲಿ ತಂಡದ ಕೋಚ್‌ ಆಗಿದ್ದ ರೇ ಜೆನ್ನಿಂಗ್ಸ್‌ಗೆ ನಾನು ಹೇಳಿದ್ದು ಒಂದೇ ಮಾತು. ನನಗೆ ಟಾಪ್‌ ಆರ್ಡರ್‌ನಲ್ಲಿ ಅವಕಾಶ ನೀಡಿ. ನಾನು ಭಾರತ ತಂಡಕ್ಕೆ ಮೂರನೇ ಕ್ರಮಾಂಕದಲ್ಲಿ ಆಟವಾಡುತ್ತೇನೆ. ಇಲ್ಲಿಯೂ ಕೂಡ ಅದೇ ಕ್ರಮಾಂಕದಲ್ಲಿ ಆಡಲು ಬಯಸುತ್ತೇನೆ ಎಂದು ಹೇಳಿದ್ದೆ. ಅದಕ್ಕೆ ಅವರು, ಸರಿ ಹಾಗಿದ್ದರೆ ನೀನು ಮೂರನೇ ಕ್ರಮಾಂಕದಲ್ಲಿಯೇ ಬ್ಯಾಟಿಂಗ್‌ ಮಾಡು ಎಂದಿದ್ದರು. ಈ ಸಮಯದಲ್ಲಿ ಅವರು ನನ್ನ ಮೇಲೆ ಅವರು ಅಪಾರ ವಿಶ್ವಾಸವಿಟ್ಟಿದ್ದರು. ಇದು ನನಗೆ ಅಗತ್ಯವೂ ಆಗಿತ್ತು. ಆರ್‌ಸಿಬಿ ತಂಡದೊಂದಿಗೆ ನನ್ನ ಅಂತಾರಾಷ್ಟ್ರೀಯ ಜೀವನ ಕೂಡ ಬೆಳೆಯಿತು ಎಂದು ರಾಬಿನ್‌ ಉತ್ತಪ್ಪ ಜೊತೆಗಿನ ಸಂದರ್ಶನದಲ್ಲಿ ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: IPL 2023: ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರರ ಬ್ಯಾಟ್‌, ಲಕ್ಷಾಂತರ ಬೆಲೆಬಾಳುವ ಕಿಟ್‌ ಕಳ್ಳತನ, ತನಿಖೆ ಆರಂಭ!

ನಾನು ಇಂದು ಆ ಫ್ರಾಂಚೈಸಿಯ ಹೆಸರು ಹೇಳೋದಿಲ್ಲ. ಆದರೆ, ಅಂದು ಈ ಫ್ರಾಂಚೈಸಿ ಜತೆ ನಾನು ಮಾತನಾಡಿದ್ದೆ. ಆದರೆ, ನನ್ನ ಮಾತನ್ನು ಅವರು ಕೇಳುವ ಮನಸ್ಸೂ ಕೂಡ ಮಾಡಲಿಲ್ಲ. ಆರಂಭಿಕ ದಿನಗಳಲ್ಲಿ ನಾನು ಆರ್‌ಸಿಬಿ ಪರವಾಗಿ 5-6 ಕ್ರಮಾಂಕದಲ್ಲಿ ಆಡುತ್ತಿದ್ದೆ. 'ಹಾಗೇನಾದರೂ ನನಗೆ ಟಾಪ್‌ ಆರ್ಡರ್‌ನಲ್ಲಿ ಆಡುವ ಅವಕಾಶ ಬೇರೆ ಕಡೆ ಎಲ್ಲಾದರೂ ಸಿಕ್ಕರೆ..ಬರುತ್ತೇನೆ' ಎಂದು ಹೇಳಿದ್ದೆ. 2011ರಲ್ಲಿ ನಾನು ಭಾರತ ತಂಡದ ಪರವಾಗಿ ಉತ್ತಮವಾಗಿ ಆಡಿದ ಬಳಿಕ ಅದೇ ಫ್ರಾಂಚೈಸಿ ಮರಳಿ ನನ್ನ ಬಳಿ ಬಂದಿತ್ತು. ರಿಟೆನ್ಷನ್‌ ಸಮಯಕ್ಕೂ ಮುನ್ನ ನನ್ನೊಂದಿಗೆ ಮಾತನಾಡಿದ್ದ ಅವರು, 'ನೀವು ಈ ಬಾರಿ ಹರಾಜಿನಲ್ಲಿ ಪಾಲ್ಗೊಳ್ಳಿ ಎಂದು ಹೇಳಿತ್ತು' ಅದಕ್ಕೆ ನಾನು, 'ಸಾಧ್ಯವೇ ಇಲ್ಲ. ನನ್ನ ಬೆಂಬಲಕ್ಕೆ ನಿಂತ ಇದೇ ಫ್ರಾಂಚೈಸಿಯೊಂದಿಗೆ ಮುಂದುವರಿಯುತ್ತೇನೆ ಎಂದು ತಿಳಿಸಿದ್ದೆ' ಎಂದು ಕೊಹ್ಲಿ ಹೇಳಿದ್ದಾರೆ.

Follow Us:
Download App:
  • android
  • ios