ಢಾಕಾ(ಮಾ.28): ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಾಲಿ ಸಂಸದ ಮಶ್ರಫೆ ಮೊರ್ತಜಾ ಮಾರಕ ಕೊರೋನಾ ವೈರಸ್ ಸಂತ್ರಸ್ಥರ ನೆರವಿಗೆ ಧಾವಿಸುವ ಮೂಲಕ ಹಲವರ ಪಾಲಿಗೆ ಸ್ಫೂರ್ತಿಯಾಗಿದ್ದಾರೆ. ತಮ್ಮ ಹುಟ್ಟೂರಾದ ನರೈಲ್‌ನಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕೊರೋನಾ ಸಂತ್ರಸ್ಥ 300 ಕುಟುಂಬಗಳಿಗೆ ಮೊರ್ತಜಾ ನೆರವಿನ ಹಸ್ತ ನೀಡಿದ್ದಾರೆ.

ಅಂತರಾಷ್ಟ್ರೀಯ ಏಕದಿನ ತಂಡದ ನಾಯಕ ಈಗ ಹಾಲಿ ಸಂಸದ..!

ಈಗಾಗಲೇ ಭಾರತ ಕ್ರಿಕೆಟ್ ತಂಡದ ಹಲವು ಕ್ರಿಕೆಟಿಗರು ಸಂತ್ರಸ್ಥರಿಗೆ ನೆರವಿನ ಹಸ್ತ ನೀಡಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಪ್ರಧಾನಮಂತ್ರಿ ರಾಷ್ಟ್ರೀಯ ವಿಕೋಪ ನಿಧಿಗೆ 50 ಲಕ್ಷ ರುಪಾಯಿ ದೇಣಿಗೆ ನೀಡಿದ್ದರು. ಇದೀಗ 36 ವರ್ಷದ ಬಾಂಗ್ಲಾ ಮಾಜಿ ನಾಯಕ ಸಹಾ ಬಡ ಕೊರೋನಾ ಸಂತ್ರಸ್ಥರ ನೆರವಿಗೆ ಮುಂದೆ ಬಂದಿದ್ದಾರೆ. ಜನರೊಂದಿಗೆ ಬೆರೆಯುವ ಗುಣ ಹೊಂದಿರುವ ಮೊರ್ತಜಾ ಇದೇ ಮೊದಲ ಬಾರಿಗೆ ಜನರಿಂದ ದೂರ ಉಳಿದಿದ್ದಾರೆ. ಕೋವಿಡ್ 19 ಕಾರಣದಿಂದಾಗಿ ಮೊರ್ತಜಾ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದಾರೆ. 

ಕೊರೋನಾ ವೈರಸ್ ವಿರುದ್ಧ ಹೋರಾಟ; ಸರ್ಕಾರಕ್ಕೆ 50 ಲಕ್ಷ ರೂ ನೀಡಿದ ಸಚಿನ್ ತೆಂಡುಲ್ಕರ್!

ನಾವು ಇನ್ನೆರಡು ದಿನಗಳೊಳಗಾಗಿ ಬಡತನದಿಂದ ಬಳಲುತ್ತಿರುವ ಸ್ಥಳೀಯ ಮುನ್ನೂರು ಕುಟುಂಬಗಳಿಗೆ ನೆರವು ನೀಡಲು ತೀರ್ಮಾನಿಸಿದ್ದೇವೆ. ಈಗಾಗಲೇ ಯಾರಿಗೆ ನೆರವಾಗಬೇಕು ಎನ್ನುವ ಪಟ್ಟಿ ಸಿದ್ದಪಡಿಸಿದ್ದೇವೆ. ಮನೆ-ಮನೆಗೆ ಅಗತ್ಯ ವಸ್ತುಗಳನ್ನು ನೀಡಲು ತೀರ್ಮಾನಿಸಿದ್ದೇವೆ. ಪ್ರತಿ ಕುಟುಂಬಕ್ಕೆ 5 ಕೆಜಿ ಅಕ್ಕಿ , ದವಸ-ಧಾನ್ಯಗಳು, ಅಡುಗೆ ಎಣ್ಣೆ, ಆಲೂಗೆಡ್ಡೆ, ಉಪ್ಪು ಹಾಗೂ ಸೋಪುಗಳನ್ನು ವಿತರಿಸಲಿದ್ದೇವೆ ಎಂದು ಮೊರ್ತಜಾ ಸಹಾಯಕ ಜಮೀಲ್ ಅಹಮ್ಮದ್ ಸನಿ ತಿಳಿಸಿದ್ದಾರೆ.

ಈಗಾಗಲೇ ಕೊರೋನಾ ವೈರಸ್ ಪರಿಸ್ಥಿತಿಯನ್ನು ನಿಭಾಯಿಸಲು ಮೊರ್ತಜಾ ತಮ್ಮ ಅರ್ಧ ತಿಂಗಳ ಸಂಬಳವನ್ನು ಬಾಂಗ್ಲಾದೇಶ ಸರ್ಕಾರಕ್ಕೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇನ್ನು ಇತ್ತೀಚೆಗಷ್ಟೇ ಬಾಂಗ್ಲಾದೇಶ ನಾಯಕರಾಗಿ ನೇಮಕವಾಗಿರುವ ತಮೀಮ್ ಇಕ್ಬಾಲ್ ಗರಿಷ್ಠ ಹಣಕಾಸಿನ ದೇಣಿಗೆ ನೀಡಿದ್ದಾರೆ. ಇನ್ನುಳಿದಂತೆ ಬಾಂಗ್ಲಾದೇಶದ 27 ಕ್ರಿಕೆಟಿಗರು ತಮ್ಮ ಅರ್ಧ ತಿಂಗಳ ಸಂಬಳವನ್ನು ದೇಣಿಗೆಯಾಗಿ ಸರ್ಕಾರಕ್ಕೆ ನೀಡಿದ್ದಾರೆ.  

ಜಾಗತಿಕ ಪಿಡುಗಾದ ಕೊರೋನಾ ವೈರಸ್‌ಗೆ ಬಾಂಗ್ಲಾದೇಶ ಕೂಡಾ ತುತ್ತಾಗಿದ್ದು, ಇದುವರೆಗೂ 48 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 5 ಮಂದಿ ಪ್ರಾಣ ಬಿಟ್ಟಿದ್ದಾರೆ. ಮಾರ್ಚ್ 26ರಿಂದ ಬಾಂಗ್ಲಾದೇಶ 10 ದಿನಗಳ ಕಾಲ ಶಟ್‌ಡೌನ್ ಆಗಿದೆ.