ಢಾಕಾ(ಜ): ಬಾಂಗ್ಲಾದೇಶದ ಏಕದಿನ ಕ್ರಿಕೆಟ್ ತಂಡದ ನಾಯಕ ಮಶ್ರಾಫೆ ಮೊರ್ತಜಾ, 11ನೇ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಸಂಸದರಾಗಿ ಆಯ್ಕೆಗೊಂಡ ಬಾಂಗ್ಲಾದ ಮೊದಲ ಸಕ್ರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 

ಆಡಳಿತಾರೂಢ ಅವಾಮಿ ಲೀಗ್ ಮೈತ್ರಿಕೂಟದ ಅಭ್ಯರ್ಥಿಯಾಗಿ ನೈರಲ್-2 ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೊರ್ತಜಾ 2,74,418 ಮತಗಳನ್ನು ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿದರು. ಮೊರ್ತಜಾ ವಿರುದ್ಧ ಸ್ಪರ್ಧಿಸಿದ್ದ ಜಟಿಯ ಒಕ್ಯಾ ಪಕ್ಷದ ಫರ್ಹಾದ್ ಕೇವಲ 8,006 ಮತಗಳನ್ನು ಪಡೆದು ಹೀನಾಯವಾಗಿ ಸೋಲುಂಡರು.

’ನೈರೋಲಿ ಎಕ್ಸ್’ಪ್ರೆಸ್’ ಖ್ಯಾತಿಯ 35 ವರ್ಷದ ಮೊರ್ತಜಾ, ಬಾಂಗ್ಲಾದೇಶ ಏಕದಿನ ತಂಡದ ನಾಯಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಲಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದು, 300 ಸ್ಥಾನಗಳ ಪೈಕಿ 288 ಸ್ಥಾನಗಳನ್ನು ಗೆದ್ದುಕೊಂಡಿದೆ.