26 ಸಿಕ್ಸರ್ 36 ಬೌಂಡರಿಗಳನ್ನು ಚಚ್ಚಿದ ಇಂಗ್ಲೆಂಡ್ ತಂಡ, ನೆದರ್ಲೆಂಡ್ಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ವಿಶ್ವದಾಖಲೆಯ 498 ರನ್ ಸಿಡಿಸಿದೆ. 

ಆಮ್ಸ್ಟೆಲ್ವೀನ್ (ಜೂನ್ 17): ಏಕದಿನ ಕ್ರಿಕೆಟ್‌ ನಲ್ಲಿ ಇಂಗ್ಲೆಂಡ್ ತಂಡ (England Cricket Team) ವಿಶ್ವದಾಖಲೆಯ ಸ್ಕೋರ್ (World Record ODI Score) ದಾಖಲಿಸಿದೆ. ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್ ನ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ 4 ವಿಕೆಟ್ ಗೆ 498 ರನ್ ಬಾರಿಸಿದೆ.

ಆಮ್ಸ್ಟೆಲ್ವೀನ್ ನ ವಿಆರ್ ಎ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಜೋಸ್ ಬಟ್ಲರ್ 70 ಎಸೆತಗಳಲ್ಲಿ ಬಾರಿಸಿದ 162 ರನ್ ಗಳ ಸಹಾಯದಿಂದ 4 ವಿಕೆಟ್‌ಗೆ 498 ರನ್ ಬಾರಿಸಿತು. ಇದಕ್ಕೂ ಮುನ್ನ ವಿಶ್ವದಾಖಲೆಯ ಮೊತ್ತದ ದಾಖಲೆ ಇಂಗ್ಲೆಂಡ್‌ ತಂಡದ ಹೆಸರಿನಲ್ಲಿಯೇ ಇತ್ತು.

ಜೋಸ್ ಬಟ್ಲರ್ (162* ರನ್, 70 ಎಸೆತ, 7 ಬೌಂಡರಿ, 14 ಸಿಕ್ಸರ್ ) ಅಲ್ಲದೆ, ಡೇವಿಡ್ ಮಲಾನ್ (125 ರನ್, 109 ಎಸೆತ, 9 ಬೌಂಡರಿ, 3 ಸಿಕ್ಸರ್‌) , ಫಿಲಿಪ್ ಸಾಲ್ಟ್ (122 ರನ್, 93 ಎಸೆತ, 14 ಬೌಂಡರಿ, 3 ಸಿಕ್ಸರ್) ಕೂಡ ಅಬ್ಬರದ ಶತಕಗಳನ್ನು ಸಿಡಿಸಿದರು. ಇದಕ್ಕೂ ಮುನ್ನ ಇಂಗ್ಲೆಂಡ್ ತಂಡ 2018ರಲ್ಲಿ ಆಸ್ಟ್ರೇಲಿಯಾ ವಿರದ್ಧ ನಾಟಿಂಗ್ ಹ್ಯಾಂನಲ್ಲಿ ನಡೆದ ಏಕದಿನ ಪಂದ್ಯದಲ್ಲಿ 6 ವಿಕೆಟ್‌ಗೆ 481 ರನ್ ಬಾರಿಸಿದ್ದು ದಾಖಲೆಯಾಗಿತ್ತು. ಇದನ್ನು ಇಂಗ್ಲೆಂಡ್‌ ತಂಡವೇ ಬಾರಿಸಿತ್ತು.

Scroll to load tweet…


ವಿಶೇಷವೇನೆಂದರೆ, ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ಸ್ಕೋರ್ ಬಾರಿಸಿದ ದಾಖಲೆಯ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಮೊತ್ತಗಳೇ ಮೊದಲ ಮೂರು ಸ್ಥಾನದಲ್ಲಿವೆ. 2016ರಲ್ಲಿ ನಾಟಿಂಗ್ ಹ್ಯಾಂನಲ್ಲಿ ಶ್ರೀಲಂಕಾ ತಂಡದ ವಿರುದ್ಧ 3 ವಿಕೆಟ್‌ಗೆ 444 ರನ್ ಬಾರಿಸಿದ್ದು ಮೂರನೇ ಸ್ತಾನದಲ್ಲಿದೆ.

ಸಿಕ್ಸರ್ ಗಳ ವಿಶ್ವದಾಖಲೆ: ಇಂಗ್ಲೆಂಡ್‌ ಈ ಪಂದ್ಯದಲ್ಲಿ ಒಟ್ಟು 26 ಸಿಕ್ಸರ್‌ಗಳನ್ನು ಸಿಡಿಸಿತು. ಇದು ಕೂಡ ವಿಶ್ವದಾಖಲೆ. ಇದಕ್ಕೂ ಮುನ್ನ 2019ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್ ತಂಡವೇ 25 ಸಿಕ್ಸರ್ ಸಿಡಿಸಿದ್ದು ಹಿಂದಿನ ದಾಖಲೆಯಾಗಿತ್ತು.

ನೆದರ್ಲೆಂಡ್ ತಂಡದ ನಾಯಕ ಪೀಟರ್ ಸೀಲಾರ್ ಟಾಸ್ ಗೆದ್ದು ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದ್ದರು. ಆರಂಭಿಕ ಆಟಗಾರ ಜೇಸನ್ ರಾಯ್ ಅವರನ್ನು ಅವರ ಸಂಬಂಧಿಯೂ ಆಗಿರುವ ಎದುರಾಳಿ ತಂಡದ ಬೌಲರ್ ಶೇನ್ ಸ್ನೇಟರ್ ಔಟ್ ಮಾಡಿದರು. ಬಳಿಕ 2ನೇ ವಿಕೆಟ್ ಗೆ ಸಾಲ್ಟ್ ಹಾಗೂ ಡೇವಿಡ್ ಮಲಾನ್ 222 ರನ್ ಗಳ ಬೃಹತ್ ಜೊತೆಯಾಟವಾಡಿದರು. ಫಿಲಿಪ್ ಸಾಲ್ಟ್ ಕೇವಲ 93 ಎಸೆತಗಳಲ್ಲಿ 122 ರನ್ ಸಿಡಿಸುವ ಮೂಲಕ ಮಿಂಚಿದರು.

IND vs SA ಮತ್ತೆ ಟಾಸ್ ಸೋತ ಟೀಂ ಇಂಡಿಯಾ, ಸೌತ್ ಆಫ್ರಿಕಾ ಫೀಲ್ಡಿಂಗ್

ಬಟ್ಲರ್ ವಿಧ್ವಂಸಕ ಬ್ಯಾಟಿಂಗ್:
30ನೇ ಓವರ್ ನಲ್ಲಿ ಸಾಲ್ಟ್ ಔಟಾದ ಬಳಿಕ ಮೈದಾನಕ್ಕೆ ಇಳಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಮೊದಲ 50 ರನ್ ಗಳನ್ನು ಬಾರಿಸಲು 27 ಎಸೆತ ಆಡಿದ್ದರು. ಆದರೆ, ಆ ನಂತರದ 111 ರನ್ ಬಾರಿಸಲು ಕೇವಲ 43 ಎಸೆತ ತೆಗೆದುಕೊಳ್ಳುವ ಮೂಲಕ ಇಂಗ್ಲೆಂಡ್ ತಂಡದ ವಿಶ್ವದಾಖಲೆಯ ಮೊತ್ತಕ್ಕೆ ಕಾರಣರಾದರು. ಕೇವಲ 47 ಎಸೆತಗಳಲ್ಲಿ ಬಟ್ಲರ್ ಶತಕ ಬಾರಿಸಿದರು. ಇದು ಇಂಗ್ಲೆಂಡ್ ಪರವಾಗಿ ಏಕದಿನ ಕ್ರಿಕೆಟ್‌ನಲ್ಲಿ 2ನೇ ಅತೀ ವೇಗದ ಶತಕ ಎನಿಸಿದೆ. ಪ್ರೇಕ್ಷಕರಿಗೆ ಸಖತ್ ರಂಜನೆ ನೀಡಿದ 162 ರನ್ ಗಳ ಇನ್ನಿಂಗ್ಸ್ ನಲ್ಲಿ ಬಟ್ಲರ್ 14 ಸಿಕ್ಸರ್ ಚಚ್ಚಿದ್ದರು.

Commonwealth Games ಕೂಟದಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ ನೀರಜ್ ಚೋಪ್ರಾ

ಇಂಗ್ಲೆಂಡ್ ಪರವಾಗಿ ಏಕದಿನ ಕ್ರಿಕೆಟ್ ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಮೊದಲ ಮೂರು ಸ್ಥಾನಗಳಲ್ಲಿ ಬಟ್ಲರ್ ಆಡಿದ ಇನ್ನಿಂಗ್ಸ್ ಇವೆ. ಇದಕ್ಕೂ ಮುನ್ನ 46 ಎಸೆತಗಳಲ್ಲಿ ಬಟ್ಲರ್ ಶತಕ ಸಿಡಿಸಿದ್ದರೆ, 50 ಎಸೆತಗಳಲ್ಲಿ ಸಿಡಿಸಿದ ಶತಕ ಮೂರನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ತಂಡದ ನಾಯಕ ಮಾರ್ಗನ್ ಶೂನ್ಯಕ್ಕೆ ಔಟಾದರೆ, ಲಿಯಾಮ್ ಲಿವಿಂಗ್ ಸ್ಟೋನ್ ಸ್ಲಾಗ್ ಓವರ್ ಗಳಲ್ಲಿ ನೆದರ್ಲೆಂಡ್ ಬೌಲಿಂಗ್ ಅನ್ನು ಬೆಂಡೆತ್ತಿದರು. ಕೇವಲ 22 ಎಸೆತಗಳಲ್ಲಿ ಲಿವಿಂಗ್ ಸ್ಟೋನ್ 66 ರನ್ ಸಿಡಿಸಿದರು.