* ಕಾಮನ್‌ವೆಲ್ತ್‌ ಗೇಮ್ಸ್‌ ಕೂಟಕ್ಕೆ 37 ಅಥ್ಲೀಟ್‌ಗಳನ್ನೊಳಗೊಂಡ ಭಾರತ ತಂಡ ಪ್ರಕಟ* ಭಾರತ ಅಥ್ಲೀಟ್ ತಂಡವನ್ನು ಮುನ್ನಡೆಸಲಿರುವ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ* ತಾರಾ ಅಥ್ಲೀಟ್‌ಗಳಾದ ಹಿಮಾ ದಾಸ್ ಹಾಗೂ ದ್ಯುತಿ ಚಾಂದ್‌ಗೂ ಅವಕಾಶ

ನವದೆಹಲಿ(ಜೂ.17): ಮುಂಬರುವ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ಗೆ (Birmingham Commonwealth Games) 37 ಸದಸ್ಯರನ್ನೊಳಗೊಂಡ ಭಾರತೀಯ ಅಥ್ಲೆಟಿಕ್ಸ್ ತಂಡವನ್ನು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ಪ್ರಕಟಿಸಿದ್ದು, ಟೋಕಿಯೋ ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ (Neeraj Chopra), ಭಾರತವನ್ನು ಮುನ್ನಡೆಸಲಿದ್ದಾರೆ. ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ (Athletics Federation of India ) ಆಯ್ಕೆ ಮಾಡಿದ 37 ಅಥ್ಲೆಟಿಕ್ಸ್‌ಗಳ ಪೈಕಿ 18 ಮಂದಿ ಮಹಿಳಾ ಕ್ರೀಡಾಪಟುಗಳಾಗಿದ್ದಾರೆ. ಈ ಪೈಕಿ ತಾರಾ ಅಥ್ಲೀಟ್‌ಗಳಾದ ಹಿಮಾ ದಾಸ್ (Hima Das) ಹಾಗೂ ದ್ಯುತಿ ಚಾಂದ್ (Dutee Chand) ಕೂಡಾ 4*400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಸ್ಥಾನ ಪಡೆದಿದ್ದಾರೆ.

ಇನ್ನು ಇದೇ ವೇಳೆ ಭಾರತ ಪುರುಷರ 4*400 ರಿಲೇ ತಂಡವನ್ನು ಪ್ರಕಟಿಸಲಾಗಿದೆ. ಇದರ ಜತೆಗೆ 3,000 ಮೀಟರ್‌ ಸ್ಟೀಪಲ್‌ಚೇಸ್‌ ಸ್ಪರ್ಧೆಯಲ್ಲಿ 8ನೇ ಬಾರಿಗೆ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಅವಿನಾಶ್‌ ಸಾಬ್ಲೆ ಕೂಡಾ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇನ್ನು ಕಳೆದ ತಿಂಗಳಿನಲ್ಲಿ 100 ಮೀಟರ್‌ ಸ್ಪರ್ಧೆಯಲ್ಲಿ ಎರಡು ಬಾರಿ ದಾಖಲೆ ನಿರ್ಮಿಸಿದ್ದ ಜ್ಯೋತಿ ಯಾರ್ರಾಜಿ ಕೂಡಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಇನ್ನು ಕಳೆದ ತಿಂಗಳು ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಅಂತರ್‌ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ತ್ರಿಪಲ್‌ ಜಂಪ್‌ನಲ್ಲಿ 14.14 ಮೀಟರ್‌ ಜಿಗಿದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ಐಶ್ವರ್ಯ ಬಾಬು ಕೂಡಾ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಆದರೆ 200 ಮೀಟರ್ ಓಟದ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ಅಮ್ಲಾನ್‌ ಬೋರ್ಗಹೈನ್‌ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಟಿಕೆಟ್‌ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ. ಕಾಮನ್‌ವೆಲ್ತ್‌ ಗೇಮ್ಸ್‌ ನಿಗದಿಯಾಗಿದ್ದ ಸಮಯದಲ್ಲಿ ರೇಸ್‌ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಅಮ್ಲಾನ್‌ ಬೋರ್ಗಹೈನ್‌ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ. ಈಗಾಗಲೇ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದ ಕೆಲವು ಅಥ್ಲೀಟ್‌ಗಳು ಬರ್ಮಿಂಗ್‌ಹ್ಯಾಮ್‌ಗೂ ಮುನ್ನ ತಮ್ಮ ಫಾರ್ಮ್‌ ಹಾಗೂ ಫಿಟ್ನೆಸ್ ಸಾಬೀತುಪಡಿಸಬೇಕಿದೆ.

ಮಹಿಳಾ ಅಥ್ಲೀಟ್‌ಗಳ ಜೊತೆ ಮಹಿಳಾ ಕೋಚ್‌ ಕಡ್ಡಾಯ: SAI ಮಹತ್ವದ ತೀರ್ಮಾನ

ಇನ್ನುಳಿದಂತೆ ಅನುಭವಿ ಡಿಸ್ಕಸ್ ಥ್ರೋ ಪಟು ಸೀಮಾ ಪೂನಿಯಾ ಅವರ ಈ ಹಿಂದಿನ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು 5ನೇ ಬಾರಿಗೆ ಕಾಮನ್‌ವೆಲ್ತ್‌ ಗೇಮ್ಸ್‌ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ. ಆದರೆ ಸೀಮಾ ಪೂನಿಯಾ ಅಮೆರಿಕಾದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ ಆಯೋಜಕರು ನಿಗದಿಪಡಿಸಿರುವ ಮಾನದಂಡವನ್ನು ತಲುಪಬೇಕಿದೆ. ಇನ್ನು ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಜತೆಗೆ ಕನ್ನಡಿಗ ಡಿ.ಪಿ. ಮನು ಹಾಗೂ ರೋಹಿತ್ ಯಾದವ್ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ.